×
Ad

‘ಗೋರಕ್ಷಕ’ರ ಹಿಂಸೆ ಹತ್ತಿಕ್ಕುವುದು ರಾಜ್ಯಗಳ ಹೊಣೆ: ಕೇಂದ್ರ

Update: 2017-07-21 20:23 IST

ಹೊಸದಿಲ್ಲಿ, ಜು.21: ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಹಿಂಸಾಚಾರವನ್ನು ತಾನು ಬೆಂಬಲಿಸುವುದಿಲ್ಲ ಹಾಗೂ ಇಂತಹ ದುಷ್ಕೃತ್ಯಗಳನ್ನು ಎಸಗುವ ಸ್ವಯಂಘೋಷಿತ ಗುಂಪುಗಳನ್ನು ಮಟ್ಟಹಾಕುವ ಹೊಣೆ ರಾಜ್ಯಗಳಿಗೆ ಸೇರಿದ್ದೆಂದು ಕೇಂದ್ರ ಸರಕಾರ ಶುಕ್ರವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಕೇಂದ್ರದ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದ ಸಾಲಿಸಿಟರ್ ಜನರಲ್ ರಂಜಿತ್‌ಕುಮಾರ್ ಅವರು ಕಾನೂನು ಮತ್ತು ಶಿಸ್ತು ಪಾಲನೆ ರಾಜ್ಯದ ಹೊಣೆಗಾರಿಕೆಯಾಗಿದ್ದು, ಇಂತಹ ಘಟನೆಗಳನ್ನು ಅವು ಹತ್ತಿಕ್ಕಬೇಕಾಗಿದೆಯೆಂದರು.

ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರ ನಡೆಸುವ ಸ್ವಯಂಘೋಷಿತ ಗೋರಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಹಾಗೂ ರಾಜ್ಯಗಳಿಗೆ ಆದೇಶ ನೀಡಬೇಕೆಂದು ಕೋರಿ ಸಾಮಾಜಿಕ ಕಾರ್ಯಕರ್ತೆ ಹಸೀನ್ ಪೂನಾವಾಲಾ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಗೆ ಉತ್ತರವಾಗಿ ಕೇಂದ್ರ ಸರಕಾರ ಈ ಪ್ರತಿಕ್ರಿಯೆ ನೀಡಿದೆ.

ಗೋರಕ್ಷಣೆಯ ಹೆಸರಿನಲ್ಲಿ ದೇಶಾದ್ಯಂತ ಗೋರಕ್ಷಕರು ನಡೆಸುತ್ತಿರುವ ಹಿಂಸಾಚಾರವನ್ನು ಪ್ರಧಾನಿ ಮೋದಿ ಖಂಡಿಸಿದ ಒಂದು ವಾರದ ಬಳಿಕ ಕೇಂದ್ರ ಸರಕಾರ ನ್ಯಾಯಾಲಯದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಸರಕಾರದ ವಾದವನ್ನು ಅಲಿಸಿದ ದೀಪಕ್‌ಮಿಶ್ರಾ ನೇತೃತ್ವದ ನ್ಯಾಯಪೀ ನ್ಯಾಯಪೀಠವು ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯನ್ನು ಬೆಂಬಲಿಸುವ ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದು, ಅದನ್ನು ತೆಗೆದುಹಾಕಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪರಸ್ಪರ ಸಹಕರಿಸಬೇಕೆಂದು ತಿಳಿಸಿದೆ.

ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸಿದವರ ವಿರುದ್ಧ ತಾವು ಸೂಕ್ತ ಕ್ರಮಗಳನ್ನು ಕೈಗೊಂಡಿರುವುದಾಗಿ ಬಿಜೆಪಿ ಆಳ್ವಿಕೆಯ ರಾಜ್ಯಗಳಾದ ಗುಜರಾತ್ ಹಾಗೂ ಜಾರ್ಖಂಡ್ ಪರವಾಗಿ ಹಾಜರಾದ ವಕೀಲರು, ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಅವರ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠವು ಗೋರಕ್ಷಣೆಗೆ ಸಂಬಂಧಿಸಿದ ಹಿಂಸಾತ್ಮಕ ಘಟನೆಗಳ ಬಗ್ಗೆ ನಾಲ್ಕು ವಾರಗಳೊಳಗೆ ವರದಿ ಸಲ್ಲಿಸುವಂತೆ ಕೇಂದ್ರ ಹಾಗೂ ಇತರ ರಾಜ್ಯಗಳಿಗೆ ತಿಳಿಸಿದೆ ಹಾಗೂ ಈ ವಿಷಯದ ಕುರಿತಾಗಿ ತನ್ನ ಮುಂದಿನ ಆಲಿಕೆಯನ್ನು ಸೆಪ್ಟೆಂಬರ್ 6ಕ್ಕೆ ನಿಗದಿಪಡಿಸಿದೆ.

 ಅಲ್ಪಸಂಖ್ಯಾತರು ಹಾಗೂ ದಲಿತರ ವಿರುದ್ಧ ಹಿಂಸೆ ಹಾಗೂ ದೌರ್ಜನ್ಯಗಳನ್ನು ಎಸಗುವ ಗೋರಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಅಕ್ಟೋಬರ್ 21ರಂದು ತೆಹ್ಸೀನ್ ಪೂನಾವಾಲಾ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ವಿಷಯವಾಗಿ ತಮ್ಮ ಅಭಿಪ್ರಾಯ ತಿಳಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಹಾಗೂ ಆರು ರಾಜ್ಯ ಸರಕಾರಗಳಿಗೆ ಈ ವರ್ಷದ ಎಪ್ರಿಲ್ 7ರಂದು ನೋಟಿಸ್ ಜಾರಿಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News