ಗೋರಕ್ಷಣೆಯ ಹೆಸರಿನಲ್ಲಿ ನರಹತ್ಯೆಗಳನ್ನು ನಡೆಸುವವರ ಬಗ್ಗೆ ಅನುಕಂಪವಿಲ್ಲ: ಜೇಟ್ಲಿ
ಹೊಸದಿಲ್ಲಿ, ಜು.20: ಗೋರಕ್ಷಣೆಯ ಹೆಸರಿನಲ್ಲಿ ನರಹತ್ಯೆಗಳನ್ನು ನಡೆಸಿದವರಿಗೆ ಸಹಾನುಭೂತಿಯನ್ನು ತೋರುವ ಪ್ರಶ್ನೆಯೇ ಇಲ್ಲ. ಇಂತಹ ಪ್ರಕರಣಗನ್ನು ಕಾನೂನು ನಿಭಾಯಿಸಲಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಗುರುವಾರ ರಾಜ್ಯಸಭೆಗೆ ತಿಳಿಸಿದ್ದಾರೆ.
ಗೋಹತ್ಯೆ ಹಾಗೂ ಬೀಫ್ ಸೇವನೆ ಕುರಿತ ವಿಷಯವನ್ನು ಅತಿರಂಜಿತಗೊಳಿಸಬಾರದೆಂದು ಕರೆ ನೀಡಿದ ಅವರು, ದೇಶದ ಜನಸಂಖ್ಯೆಯ ಶೇ.80ರಿಂದ 85ರಷ್ಟು ಮಂದಿ ಗೋಮಾಂಸ ನಿಷೇಧವಿರುವ ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆಂದು ಹೇಳಿದರು.
‘‘ಗೃಹ ಸಚಿವ ಹಾಗೂ ಪ್ರಧಾನಿ, ಮೂರು ಬೇರೆ ಬೇರೆ ಸಂದರ್ಭಗಳಲ್ಲಿ ಇಂತಹ ಘಟನೆಗಳನ್ನು ಖಂಡಿಸಿದ್ದಾರೆ. ಗೋವಿನ ಕುರಿತಾದ ನಂಬಿಕೆಯು ಒಂದು ವಿಭಿನ್ನ ವಿಷಯವಾಗಿದೆ. ಆದರೆ ಅದು ಕಾನೂನು ಉಲ್ಲಂಘಿಸುವ ಹಾಗೂ ಜನರ ಹತ್ಯೆಗೆ ಕಾರಣ ವಾಗುವಂತಹ ವಿಭಜನಾತ್ಮಕ ವಿಷಯವಾಗಕೂಡದು’’ ಎಂದು ಜೇಟ್ಲಿ ಸದನಕ್ಕೆ ತಿಳಿಸಿದರು.
ಅವರು ಗೋರಕ್ಷಣೆಯ ಹೆಸರಿನಲ್ಲಿ ದೇಶಾದ್ಯಂತ ಅಲ್ಪಸಂಖ್ಯಾತರು ಹಾಗೂ ದಲಿತರ ಮೇಲೆ ನಡೆದ ದೌರ್ಜನ್ಯ ಹಾಗೂ ನರಹತ್ಯೆಯ ಘಟನೆಗಳ ಕುರಿತು ನಡೆದ ರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
‘‘ಹಾಗೆಯೇ ಬೀಫ್ ಮೇಳಗಳನ್ನು ಏರ್ಪಡಿಸುವುದು ಹಾಗೂ ಸಾರ್ವಜನಿಕವಾದಿ ದನಗಳನ್ನು ಕೊಲ್ಲುವುದು ರೈಲಿನಲ್ಲಿ ವ್ಯಕ್ತಿಯನ್ನು ಕೊಂದುದಕ್ಕೆ ಸಮಾನವಾದುದಾಗಿದೆ’’ ಎಂದವರು ಹೇಳಿದರು.
ಪಶ್ಚಿಮ ಬಂಗಾಳ, ಕೇರಳ, ಗೋವಾ ಹಾಗೂ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಕಾಂಗ್ರೆಸ್ ಆಳ್ವಿಕೆಯ ಬಹುತೇಕ ರಾಜ್ಯಗಳಲ್ಲಿ 1950ನೇ ಇಸವಿಯಲ್ಲಿಯೇ ಗೋಹತ್ಯೆಯನ್ನು ನಿಷೇಧಿಸಲಾಗಿತ್ತೆಂದು ಜೇಟ್ಲಿ ರಾಜ್ಯಸಭೆಗೆ ತಿಳಿಸಿದರು.