ಮುಂಬೈಯಲ್ಲಿ ಭಾರೀ ಮಳೆ, ಸಂಚಾರಕ್ಕೆ ವ್ಯತ್ಯಯ
ಮುಂಬೈ,ಜು.22: ಶನಿವಾರ ಬೆಳಿಗ್ಗೆ ಮುಂಬೈ ನಗರ ಮತ್ತು ಹೊರವಲಯಗಳಲ್ಲಿ ಭಾರೀ ಮಳೆಯಾಗಿದ್ದು, ರಸ್ತೆ ಸಂಚಾರಕ್ಕೆ ವ್ಯತ್ಯಯವುಂಟಾಗಿತ್ತು.
ಶನಿವಾರ ಬೆಳಿಗ್ಗೆ 8:30ರವರೆಗಿನ 24 ಗಂಟೆಗಳ ಅವಧಿಯಲ್ಲಿ ಕೊಲಾಬಾದ ಹವಾಮಾನ ಕೇಂದ್ರದಲ್ಲಿ 80.2 ಮಿ.ಮೀ.ಮತ್ತು ಸಾಂತಾಕ್ರೂಝ್ ನಿರೀಕ್ಷಣಾಲಯದಲ್ಲಿ 86.5 ಮಿ.ಮೀ.ಮಳೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ.
ಮುಂದಿನ 24 ಗಂಟೆಗಳಲ್ಲಿ ನಗರ ಮತ್ತು ಉಪನಗರಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಗ ಲಿದ್ದು, ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ. ಮಳೆ ಸಂಬಂಧಿ ಯಾವುದೇ ಘಟನೆ ವರದಿಯಾಗಿಲ್ಲ ಎಂದು ಬಿಎಂಸಿಯ ಉಪ ಮುನ್ಸಿಪಲ್ ಆಯುಕ್ತ ಸುಧೀರ ನಾಯ್ಕಿ ತಿಳಿಸಿದರು.
ಭಾರೀ ಮಳೆಯಿಂದಾಗಿ ಮಹಾನಗರದ ಜೀವನಾಡಿಗಳಾಗಿರುವ ಲೋಕಲ್ ರೈಲುಗಳು 5ರಿಂದ 10 ನಿಮಿಷ ವಿಳಂಬವಾಗಿ ಸಂಚರಿಸುತ್ತಿದ್ದವು.
ಸಾಯನ್, ದಾದರ್, ಮುಂಬೈ ಸೆಂಟ್ರಲ್ ಮತ್ತು ಕುರ್ಲಾಗಳಂತಹ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ಬೆಳಿಗ್ಗೆ ವಾಹನಗಳ ಸಂಚಾರಕ್ಕೆ ವ್ಯತ್ಯಯವುಂಟಾಗಿತ್ತು. ವಿಕ್ರೋಲಿ, ಬೋರಿವಲಿ, ಪೊವಾಯಿ, ಗೋರೆಗಾಂವ್, ಕುರ್ಲಾ ಮತ್ತು ಇತರೆಡೆಗಳಲ್ಲಿ ಭಾರೀ ಮಳೆಯಾಗಿದೆಯಾದರೂ ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ಬಿಎಂಸಿ ಅಧಿಕಾರಿಯೋರ್ವರು ತಿಳಿಸಿದರು.