ಜಗತ್ತಿನಲ್ಲೇ ಪ್ರಥಮ ಬಾರಿಗೆ ಚಂದ್ರನ ಮೇಲ್ಮೈಗೆ ಭಾರತದ ಖಾಸಗಿ ಬಾಹ್ಯಾಕಾಶ ನೌಕೆ

Update: 2017-07-22 15:19 GMT

ಚೆನ್ನೈ, ಜು. 22: ಎಲ್ಲವೂ ಯೋಜನೆಯಂತೆ ನಡೆದು ಬೆಂಗಳೂರು ಮೂಲದ ಟೀಮ್ ಇಂಡಸ್ ಸಂಸ್ಥೆ ಡಿಸೆಂಬರ್‌ನಲ್ಲಿ ಚಂದ್ರನಲ್ಲಿಗೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದರೆ, ಚಂದ್ರನಲ್ಲಿಗೆ ಬಾಹ್ಯಾಕಾಶ ನೌಕೆ ಕಳುಹಿಸಿದ ಜಗತ್ತಿನ ಪ್ರಥಮ ಖಾಸಗಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಸಂಸ್ಥೆ ಈಗ ಈ ಬಾಹ್ಯಾಕಾಶದ ಮಾದರಿ ರೂಪಿಸುತ್ತಿದೆ. ಡಿಸೆಂಬರ್‌ನಲ್ಲಿ ಶ್ರೀಹರಿಕೋಟದ ಉಡಾವಣ ನೆಲೆಯಿಂದ ಧ್ರುವೀಯ ಉಪಗ್ರಹ ಉಡಾವಣಾ ವಾಹನದಿಂದ ಈ ಗಗನ ನೌಕೆಯನ್ನು ಉಡಾಯಿಸಲಿದೆ.

ನಾವು ಗಗನ ನೌಕೆಯ ಅರ್ಹತಾ ಮಾದರಿ ರೂಪಿಸಿದ್ದೇವೆ. ಅಗಸ್ಟ್ ಎರಡನೇ ವಾರದಲ್ಲಿ ಈ ಬಾಹ್ಯಾಕಾಶ ನೌಕೆ ಇಸ್ರೋದಲ್ಲಿ ಕಠಿಣ ಪರೀಕ್ಷೆಗೆ ಒಳಗಾಗಲಿದೆ. ಮುಂದಿನ ಹಂತ ಉಡಾಯಿಸುವ ಗಗನ ನೌಕೆಯ ಮಾದರಿ ರೂಪಿಸಲಾಗುವುದು ಎಂದು ಸಂಸ್ಥೆಯ ಮಾರುಕಟ್ಟೆ ಉಸ್ತುವಾರಿ ಶೀಲಿಕಾ ರವಿಶಂಕರ್ ತಿಳಿಸಿದ್ದಾರೆ.

   ಶುಕ್ರವಾರ ಚೆನ್ನೈಯ ಅಂತಾರಾಷ್ಟ್ರೀಯ ಕೇಂದ್ರ ಆಯೋಜಿಸಿದ ಸಂವಹನ ಅವಧಿಯಲ್ಲಿ ಸಂಸ್ಥೆಯ ಸ್ಥಾಪಕ ಹಾಗೂ ದಿಲ್ಲಿ ಐಐಟಿಯ ಹಳೆ ವಿದ್ಯಾರ್ಥಿ ರಾಹುಲ್ ನಾರಾಯಣ್ ಮಿಷನ್ ಟು ಮೂನ್: ಫ್ಯೂಯೆಲ್‌ಡ್ ಬೈ ಆ್ಯಂಬಿಷನ್ ವಿಷಯ ಪ್ರಸ್ತುತಪಡಿಸಿದರು. ಗೂಗಲ್ ಲುನಾರ್ ಎಕ್ಸ್ ಸ್ಪಧೆಯಲ್ಲಿ ಅಂತಿಮಗೊಳಿಸಲಾದ ಐದು ಸಂಸ್ಥೆಗಳಲ್ಲಿ ಈ ಕಂಪೆನಿ ಕೂಡ ಸೇರಿದೆ. ಚಂದ್ರನಲ್ಲಿಗೆ ಗಗನ ನೌಕೆ ಕಳುಹಿಸಲು ಶೇ. 90ರಷ್ಟು ಖಾಸಗಿ ನಿಧಿ ಹೂಡುವ ಸಂಸ್ಥೆಯನು ಗೂಗಲ್ ಶೋಧಿಸುತ್ತಿತ್ತು. ಈ ಗಗನ ನೌಕೆ ಚಂದ್ರನ ಮೇಲೆ 500 ಮೀಟರ್ ಸಂಚರಿಸಿ ಭೂಮಿಗೆ ಚಿತ್ರ ಹಾಗೂ ದೃಶ್ಯಗಳನ್ನು ವರ್ಗಾಯಿಸಬೇಕು. ಇತರ ತಂಡಗಳಲ್ಲಿ ಅಮೆರಿಕದ ಎರಡು, ಇಸ್ರೇಲ್ ಹಾಗೂ ಜಪಾನ್‌ನ ತಲಾ ಒಂದು ತಂಡ ಸೇರಿದೆ.

 ಇಸ್ರೋದ 24 ಮಂದಿ ನಿವೃತ್ತ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಈ ತಂಡ 600 ಕಿಲೋಗ್ರಾಂ ಗಗನ ನೌಕೆ ಹಾಗೂ 6 ಕಿಲೋ ಗ್ರಾಂ ರೋವರ್‌ಗಳನ್ನು ಅಭಿವೃದ್ಧಿಗೊಳಿಸಲಿದೆ. ನಮ್ಮ ಆಕಾಂಕ್ಷೆಯನ್ನು ಕೊಂಡೊಯ್ಯುವ ಜೊತೆಗೆ ಈ ಗಗನ ನೌಕೆ ಜಪಾನ್ ತಂಡ ನಿರ್ಮಿಸಿದ ರೋವರ್ ಅನ್ನು ಕೂಡಾ ಕೊಂಡೊಯಯಲಿದೆ. ಫ್ರಾನ್ಸ್ ಬಾಹ್ಯಾಕಾಶ ಸಂಸ್ಥೆಯ ಕೆಮರಾವನ್ನು ಕೂಡ ಈ ಬಾಹ್ಯಾಕಾಶ ನೌಕೆ ಕೊಂಡೊಯ್ಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News