ಆಪರೇಷನ್ ಅಲಮೇಲಮ್ಮ: ತಾಜಾತನದ ಸಸ್ಪೆನ್ಸ್-ಡ್ರಾಮಾ

Update: 2017-07-22 18:36 GMT

ಏಕತಾನತೆಯ ಕಥಾವಸ್ತುಗಳಿಂದ ಹೊರಬರುವ ಪ್ರಯತ್ನಗಳಿಗೆ ಕನ್ನಡ ಚಿತ್ರರಂಗ ಸಾಕ್ಷಿಯಾಗುತ್ತಿದೆ. ಈ ಪಟ್ಟಿಗೆ ಸೇರ್ಪಡೆಗೊಳಿಸಬಹುದಾದ ಮತ್ತೊಂದು ಪ್ರಯೋಗ ‘ಆಪರೇಷನ್ ಅಲಮೇಲಮ್ಮ’. ತಿಳಿ ಹಾಸ್ಯ, ನವಿರು ಪ್ರೇಮಕತೆಯೊಂದಿಗೆ ನಿರ್ದೇಶಕ ಸುನಿ ಸಸ್ಪೆನ್ಸ್-ಡ್ರಾಮಾ ಹೆಣೆದಿದ್ದಾರೆ.

ಮೊದಲರ್ಧ ಸಲೀಸಾಗಿ ನೋಡಿಸಿಕೊಂಡು ಹೋಗುವ ಸಿನೆಮಾ ದ್ವಿತೀಯಾರ್ಧದಲ್ಲಿ ಕೊಂಚ ತಾಳ್ಮೆ ಬೇಡುತ್ತದೆ. ಆದರೆ ಕಲಾವಿದರ ತಾಜಾ ಅಭಿನಯ, ಹಿನ್ನೆಲೆ ಸಂಗೀತ ಮತ್ತು ಆಕರ್ಷಕ ಛಾಯಾಗ್ರಹಣ ಈ ಕೊರತೆಯನ್ನು ನೀಗಿಸುತ್ತವೆ. ಹಿಂದೆ ಲವ್‌ಸ್ಟೋರಿಗಳನ್ನು ಮಾಡಿದ್ದ ಸುನಿ ಈ ಬಾರಿ ಹೊಸರೀತಿಯ ಕತೆಯೊಂದಿಗೆ ಯಶಸ್ವಿಯಾಗಿದ್ದಾರೆ.

ಶ್ರೀಮಂತ ಉದ್ಯಮಿಯೊಬ್ಬನ ಪುತ್ರನನ್ನು ಕಿಡ್ನಾಪ್ ಮಾಡುವ ಸನ್ನಿವೇಶದೊಂದಿಗೆ ಚಿತ್ರ ಆರಂಭವಾಗುತ್ತದೆ. ಇಂಥದ್ದೊಂದು ಸಸ್ಪೆನ್ಸ್ ಎಳೆಯೊಂದಿಗೆ ಶುರುವಾಗುವ ಕತೆ ಪ್ರೇಮಕತೆಗಳನ್ನು ದಾಟಿಕೊಂಡು ಮತ್ತೆ ತನ್ನ ಹಾದಿಗೆ ಹೊರಳಿಕೊಳ್ಳುತ್ತದೆ. ಫ್ಲಾಶ್‌ಬ್ಯಾಕ್ ತಂತ್ರವನ್ನು ನಿರ್ದೇಶಕ ಸುನಿ ಸೊಗಸಾಗಿ ಬಳಕೆ ಮಾಡಿದ್ದು, ಸಸ್ಪೆನ್ಸ್ ಮಾದರಿಗೆ ಇದು ಸೂಕ್ತವಾಗಿ ನೆರವಾಗುತ್ತದೆ.

ಕೊನೆಯ ನಲುವತ್ತೈದು ನಿಮಿಷಗಳ ಚಿತ್ರಕಥೆಗೆ ನಿರ್ದೇಶಕರು ಇನ್ನಷ್ಟು ವೇಗ ಕೊಡಬೇಕಿತ್ತು. ದ್ವಿತೀಯಾರ್ಧ ಶುರುವಾಗುವ ಹೊತ್ತಿನಲ್ಲಿ ಕುತೂಹಲ ಕಾಯ್ದುಕೊಳ್ಳುವ ಸಿನೆಮಾ ಕೊನೆಯ ಹಂತದಲ್ಲಿ ನಿಧಾನವಾಗುವುದೇಕೋ? ಕತೆ ಹೆಣೆಯುವಲ್ಲಿ ನಿರ್ದೇಶಕರಿಗೆ ಟೀವಿ ಕ್ರೈಂ ಸರಣಿಯೊಂದು ಸ್ಫೂರ್ತಿಯಾಗಿದ್ದರೂ ಅಚ್ಚರಿಯೇನಿಲ್ಲ. ಅವರು ಇದನ್ನು ಅಚ್ಚುಕಟ್ಟಾಗಿ ತೆರೆಗೆ ಅಳವಡಿಸುವಲ್ಲಿ ಗೆದ್ದಿದ್ದಾರೆ.

‘ಯೂ ಟರ್ನ್’ ಸಿನೆಮಾ ಖ್ಯಾತಿಯ ಶ್ರದ್ಧಾ ಶ್ರೀನಾಥ್ ಅವರಿಗೆ ಚಿತ್ರದಲ್ಲಿ ಚೆಂದದ ಪಾತ್ರವಿದೆ. ಹೀರೋ ಮನೀಷ್ ರಿಷಿಗೆ ಆಕೆಗಿಂತಲೂ ಹೆಚ್ಚು ಸ್ಕ್ರ್ರೀನ್‌ಪ್ಲೇಸ್ ಇದ್ದು, ಅವರು ಲವಲವಿಕೆಯಿಂದ ನಟಿಸಿದ್ದಾರೆ. ತೆರೆ ಮೇಲೆ ರಿಷಿ-ಶ್ರದ್ಧಾ ಜೋಡಿ ಮುದ್ದಾಗಿ ಕಾಣುತ್ತದೆ. ತಾಯಿಯಾಗಿ ಅರುಣಾ ಬಾಲರಾಜ್ ಅವರದ್ದು ಅತ್ಯುತ್ತಮ ನಟನೆ. ಪೊಲೀಸ್ ಅಧಿಕಾರಿಯಾಗಿ ರಾಜೇಶ್ ನಟರಂಗ ಗಮನ ಸೆಳೆಯುತ್ತಾರೆ. ಛಾಯಾಗ್ರಹಣ ಮತ್ತು ಸಂಗೀತ ನಿರ್ದೇಶಕರಿಗೆ ಒಳ್ಳೆಯ ಸಾಥ್ ಕೊಟ್ಟಿದ್ದು, ಸಿನೆಮಾ ಅಂದವಾಗಿ ಮೂಡಿಬಂದಿದೆ.

ನಿರ್ದೇಶನ: ಸುನಿ, ನಿರ್ಮಾಣ: ಅಮ್ರೆಜ್ ಸೂರ್ಯವಂಶಿ ಮತ್ತು ಸುನಿ, ಸಂಗೀತ: ಸ್ಯಾಂಡಿ, ಛಾಯಾಗ್ರಹಣ: ಅಭಿಷೇಕ್ ಕಾಸರಗೋಡು, ತಾರಾಗಣ: ಮನೀಷ್ ರಿಷಿ, ಶ್ರದ್ಧಾ ಶ್ರೀನಾಥ್, ರಾಜೇಶ್ ನಟರಂಗ, ಅರುಣ ಬಾಲರಾಜ್, ವಿಜೇತ್ ಗೌಡ, ಸುಮುಖ ಮತ್ತಿತರರು.

ರೇಟಿಂಗ್ - ***

* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News