ಧೈರ್ಯಂ: ರಂಜಿಸದ ಸಾಹಸ

Update: 2017-07-22 18:38 GMT

ಲವರ್ ಬಾಯ್ ಇಮೇಜಿನ ನಟ ಅಜಯ್ ರಾವ್ ಅವರಿಗೆ ಆ್ಯಕ್ಷನ್ ಹೀರೋ ಅಂಗಿ ತೊಡಿಸುವ ಪ್ರಯತ್ನ ‘ಧೈರ್ಯಂ’ ಸಿನೆಮಾದಲ್ಲಿ ಆಗಿದೆ. ಇದಕ್ಕೆ ಪೂರ್ವಸಿದ್ಧತೆ ಎನ್ನುವಂತೆ ಅಜಯ್ ಕೂಡ ಮೈ ಹುರಿಗೊಳಿಸಿ, ಹೇರ್ ಸ್ಟೈಲ್ ಬದಲಿಸಿಕೊಂಡು ಮೇಕ್ ಓವರ್ ಮಾಡಿಕೊಂಡಿದ್ದಾರೆ. ಆದರೆ ಅವರ ಸಿದ್ಧತೆಗಳಿಗೆ ಸರಿಯಾಗಿ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಸನ್ನಿವೇಶಗಳೇನೂ ಇಲ್ಲ. ಆ್ಯಕ್ಷನ್ ಜೊತೆಗೆ ಲವ್, ಫ್ಯಾಮಿಲಿ ಸೆಂಟಿಮೆಂಟ್ ಬೆರೆಸುವ ಭರದಲ್ಲಿ ನಿರ್ದೇಶಕರು ಚಿತ್ರಕಥೆಯ ದಿಕ್ಕು ತಪ್ಪಿಸಿದ್ದಾರೆ. ಅಂತಿಮವಾಗಿ ಯಾವ ವರ್ಗಕ್ಕೂ ಸಲ್ಲದ ಇದು ಸಾಧಾರಣ ಚಿತ್ರವಾಗಿ ಕಾಣಿಸುತ್ತದೆ.

ಕೆಳ ಮಧ್ಯಮವರ್ಗದ ಕುಟುಂಬದ ಯುವಕ ಕೃಷ್ಣ ಪ್ರತಿಭಾವಂತ ವಿದ್ಯಾರ್ಥಿ. ಮನೆಯಲ್ಲಿನ ಕಷ್ಟ, ತಂದೆಯ ಆಪರೇಷನ್‌ಗೆಂದು ಆತನಿಗೆ ಹಣದ ಅನಿವಾರ್ಯತೆ ಎದುರಾಗುತ್ತದೆ. ಈ ಒತ್ತಡದ ಮಧ್ಯೆಯೇ ತನಗೇ ಅರಿವಿಲ್ಲದಂತೆ ಆತ ಸಾಮಾಜಿಕ ಕಾರ್ಯಕರ್ತನೊಬ್ಬನ ಕೊಲೆಗೆ ಸಾಕ್ಷಿಯಾಗುತ್ತಾನೆ. ಈ ಕೊಲೆಯನ್ನು ದಾಳವಾಗಿ ಬಳಸಿಕೊಂಡು ಹಣದ ಆವಶ್ಯಕತೆ ನೀಗಿಸಿಕೊಳ್ಳುವ ಹಾದಿಯಲ್ಲಿನ ಸವಾಲು, ಜಾಣ್ಮೆ, ರೋಷಾವೇಷಗಳೇ ಚಿತ್ರದ ವಸ್ತು. ಆ್ಯಕ್ಷನ್‌ಗೆ ಬೇಕಾಗಿದ್ದ ವಸ್ತು ಏನೋ ಚಿತ್ರದಲ್ಲಿದೆ. ಅದನ್ನು ಸಮರ್ಪಕವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕರು ಸೋತಿದ್ದಾರೆ. ಇದರಿಂದಾಗಿ ಕಲಾವಿದರು ಮತ್ತು ಇತರ ತಂತ್ರಜ್ಞರ ಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ.

ರಾಜ್ಯದ ಮಂತ್ರಿ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ನೇರವಾಗಿ ಸಾಮಾಜಿಕ ಕಾರ್ಯಕರ್ತನ ಫ್ಲಾಟ್‌ಗೆ ಬಂದು ಆತನನ್ನು ಕೊಲ್ಲುತ್ತಾರೆ! ಇಂತಹ ಮತ್ತೊಂದೆರಡು ಬಾಲಿಶ ಸನ್ನಿವೇಶಗಳೂ ಚಿತ್ರದಲ್ಲಿವೆ. ಹಾಸ್ಯಕ್ಕೆಂದು ಸಾದು ಕೋಕಿಲರನ್ನು ಕರೆತಂದು ಕಳಪೆ ಹಾಸ್ಯ ಸೃಷ್ಟಿಸಲಾಗಿದೆ. ತಮ್ಮ ಬಾಡಿ ಲಾಂಗ್ವೇಜ್ ಮತ್ತು ಕಾಮಿಡಿ ಟೈಮಿಂಗ್‌ನಿಂದಾಗಿ ಸಾದು ಜನರ ಮೆಚ್ಚುಗೆ ಗಳಿಸಿದ್ದಾರೆ. ಹಾಗೆಂದು ತಾವು ಏನು ಮಾಡಿದರೂ ಜನ ನೋಡುತ್ತಾರೆ ಎನ್ನುವ ಅವರ ಮನೋಭಾವ ಬದಲಾಗಬೇಕಿದೆ.

ಹೀರೋ ಅಜಯ್ ರಾವ್‌ಗೆ ಉದ್ದನೆಯ ತಲೆಗೂದಲು ಹೊಂದಿಕೆಯಾದಂತೆ ಕಾಣುವುದಿಲ್ಲ. ಆ್ಯಕ್ಷನ್ ಪಾತ್ರಕ್ಕೆ ಅವರು ತಮ್ಮನ್ನು ಒಗ್ಗಿಸಿಕೊಳ್ಳಲು ಪ್ರಯತ್ನಿಸಿದ್ದಾರಾದರೂ ಸಂಪೂರ್ಣ ಯಶಸ್ವಿಯಾಗಿಲ್ಲ. ನವನಾಯಕಿ ಅದಿತಿ ಪ್ರಭುದೇವ ಪಾತ್ರಗಳ ಆಯ್ಕೆಯಲ್ಲಿ ಎಚ್ಚರ ವಹಿಸಿದರೆ ಒಳ್ಳೆಯ ಕಲಾವಿದೆಯಾಗಿ ಬೆಳೆಯಬಹುದು. ಖಳನಟ ರವಿಶಂಕರ್, ಜೈಜಗದೀಶ್ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ‘ಬೇಡರ ಕಣ್ಣಪ್ಪ’ ಸಿನೆಮಾದ ಹಾಡಿನ ಟ್ಯೂನ್ ಬಳಕೆ ಮಾಡಿರೋದು ಉತ್ತಮ ಅಭಿರುಚಿಯೇನಲ್ಲ. ಒಟ್ಟಾರೆ ಹೊಸತನವಿಲ್ಲದ ಮತ್ತೊಂದು ಚಿತ್ರವಾಗಿ ಇದು ಕಾಣಿಸುತ್ತದೆ.

ನಿರ್ದೇಶನ: ಶಿವ ತೇಜಸ್, ನಿರ್ಮಾಣ: ಡಾ.ಕೆ.ರಾಜು, ಸಂಗೀತ: ಶೇಖರ್ ಚಂದ್ರ ಮತ್ತು ಎಮಿಲ್ ಮುಹಮ್ಮದ್, ತಾರಾಗಣ: ಅಜಯ್ ರಾವ್, ಅದಿತಿ ಪ್ರಭುದೇವ, ರವಿಶಂಕರ್, ಸಾಧು ಕೋಕಿಲ, ಶ್ರೀನಿವಾಸ ಪ್ರಭು, ಜೈಜಗದೀಶ್ ಮತ್ತಿತರರು.

ರೇಟಿಂಗ್ - *1/2

* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News