ಯುದ್ಧದ ಕ್ರೌರ್ಯ ಮತ್ತು ಯೋಧರ ಅಸಹಾಯಕತೆಯನ್ನು ತೆರೆದಿಡುವ ‘ಡನ್‌ಕಿರ್ಕ್’

Update: 2017-07-22 18:43 GMT

ಭಾರತ ಯುದ್ಧದ ಅಂಗಳದಲ್ಲಿ ನಿಂತಿದೆ. ಯುದ್ಧದ ಸಾವುನೋವುಗಳು ಮತ್ತು ಅದರ ಸುದೀರ್ಘ ಪರಿಣಾಮಗಳ ಕುರಿತಂತೆ ಎಳ್ಳಷ್ಟೂ ಅರಿವಿಲ್ಲದ ತಲೆಮಾರೊಂದು ಯುದ್ಧ ಘೋಷಣೆಗಳನ್ನು ಸಾಮಾಜಿಕ ತಾಣಗಳಲ್ಲಿ ಕೂಗುತ್ತಿವೆ. ಇಂತಹ ಸಂದರ್ಭದಲ್ಲಿ ಯುದ್ಧದ ಕೌರ್ಯ, ಸಾವು, ನೋವು, ದುಃಖಗಳ ವಿವಿಧ ನೆಲೆಗಳನ್ನು ತಿಳಿಸುವ ಕ್ರಿಸ್ಟೋಫರ್ ನೊಲಾನ್ ಅವರ ‘ಡನ್‌ಕಿರ್ಕ್’ ಚಿತ್ರ, ಯುದ್ಧ ದಾಹಿಗಳ ವಿಕಾರ ಮುಖಕ್ಕೆ ಹಿಡಿದ ಕನ್ನಡಿಯಾಗಿದೆ. ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಫ್ರಾನ್ಸ್‌ನ ‘ಡನ್‌ಕಿರ್ಕ್’ ಎಂಬ ಸಮುದ್ರ ತೀರದಲ್ಲಿ ಸಿಲುಕಿಕೊಂಡ ಸಹಸ್ರಾರು ಮಿತ್ರ ಪಕ್ಷದ ಸೈನಿಕರನ್ನು ಪಾರು ಮಾಡಿ ಅವರ ತವರಿಗೆ ರವಾನಿಸುವ ಕಾರ್ಯಾಚರಣೆಯ ಘಟನೆಯನ್ನು ವಸ್ತುವಾಗಿಟ್ಟುಕೊಂಡು ನೊಲಾನ್ ಅವರು ಚಿತ್ರ ಮಾಡಿದ್ದಾರೆ. ಇನ್ಸೆಪ್ಶನ್, ಇಂಟರ್‌ಸ್ಟೆಲ್ಲರ್‌ನಂತಹ ಚಿತ್ರಗಳ ಮೂಲಕ ಈಗಾಗಲೇ ಗುರುತಿಸಲ್ಪಟ್ಟಿರುವ ಅಗಾಧ ಪ್ರತಿಭೆಯ ನಿರ್ದೇಶಕ ನೊಲಾನ್, ಸಿನೆಮಾದ ಸಾಧ್ಯತೆಗಳನ್ನು ಹಿಗ್ಗಿಸಿದವರು. ತನ್ನ ಬಹುತೇಕ ಚಿತ್ರಗಳಲ್ಲಿ ಮಾನವ ಘನತೆಯನ್ನು ಎತ್ತಿಹಿಡಿದಿದ್ದಾರೆ. ಈ ಕಾರಣದಿಂದಲೇ ಯುದ್ಧವನ್ನು ಆಧರಿಸಿರುವ ಅವರ ‘ಡನ್‌ಕಿರ್ಕ್’ ಚಿತ್ರ ಸಾಕಷ್ಟು ಕುತೂಹಲಗಳನ್ನು ಸೃಷ್ಟಿಸಿತ್ತು. ಚಿತ್ರ, ನೊಲಾನ್‌ನ ಅಭಿಮಾನಿಗಳನ್ನು ಒಂದಿಷ್ಟು ನಿರಾಶೆಗೊಳಿಸದ ರೀತಿಯಲ್ಲಿ ನಿರೂಪಿಸಲ್ಪಟ್ಟಿದೆ.

ಡನ್‌ಕಿರ್ಕ್ ಚಿತ್ರ ಮೂರು ಎಳೆಗಳಾಗಿ ತೆರೆದುಕೊಳ್ಳುತ್ತದೆ. ಭೂಮಿ, ನೀರು ಮತ್ತು ಆಕಾಶಗಳಲ್ಲಿ ನಡೆಯುವ ಬೆಳವಣಿಗೆಗಳನ್ನು ನಿರೂಪಿಸುತ್ತಾ ಅಂತಿಮವಾಗಿ ಅವೆಲ್ಲ ಒಂದು ಬಿಂದುವಿಗೆ ಬಂದು ಸೇರುತ್ತದೆ. ಡನ್‌ಕಿರ್ಕ್‌ನ ಬೀದಿಯಲ್ಲಿ ಗುಂಡಿನಿಂದ ಪಾರಾಗುತ್ತಾ, ಕೃತಕ ಬಂದರನ್ನು ಸೇರುವ ಟೋಮಿ(ಫಿಯನ್ನ್‌ವೈಟ್‌ಹೆಡ್) ಎನ್ನುವ ಯುವ ಯೋಧನಿಂದ ಚಿತ್ರ ತೆರೆದುಕೊಳ್ಳುತ್ತದೆ. ಸಮುದ್ರ ತೀರದಲ್ಲಿ ಊರಿನ ಕನಸು ಹೊತ್ತು ನಿಂತಿರುವ ಲಕ್ಷಾಂತರ ಸೈನಿಕರು ಒಂದೆಡೆ. ಆಕಾಶದಿಂದ ಆಗಾಗ ಉದುರುತ್ತಿರುವ ಶತ್ರುಗಳ ಬಾಂಬ್‌ಗಳು ಇನ್ನೊಂದೆಡೆ. ಮಗದೊಂದೆಡೆ ಶತ್ರು ವಿಮಾನವನ್ನು ಉರುಳಿಸಲು ಮಿತ್ರಪಕ್ಷಗಳ ಯುದ್ಧ ವಿಮಾನಗಳ ಹೋರಾಟ. ಇನ್ನೊಂದೆಡೆ ಸಮುದ್ರದಲ್ಲಿ ಶತ್ರುಗಳ ಬಾಂಬುಗಳಿಂದ ಪಾರಾಗುತ್ತಾ, ಸೈನಿಕರನ್ನು ಟನ್‌ಕಿರ್ಕ್‌ನಿಂದ ತನ್ನ ತಾಯ್ನಾಡಿಗೆ ಕರೆದೊಯ್ಯಲು ತುಯ್ದಾಡುತ್ತಿರುವ ಹಡಗುಗಳು. ಚಿತ್ರದ ಮೊದಲ ಭಾಗದಲ್ಲಿ ಟೋಮಿ ಮತ್ತು ಗಿಬ್ಸನ್ ಎಂಬ ಇಬ್ಬರು ಯುವ ಯೋಧರು ಸಹಸ್ರಾರು ಯೋಧರ ನಡುವೆ ಹಡಗನ್ನು ಏರಲು ನಡೆಸುವ ವಿಫಲ ಪ್ರಯತ್ನವನ್ನು ತೆರೆದಿಡಲಾಗಿದೆ. ಆ ಕೃತಕ ಬಂದರಿನಲ್ಲಿ ಬಚ್ಚಿಟ್ಟುಕೊಂಡು ಇನ್ನೊಂದು ಹಡಗಿಗಾಗಿ ಕಾಯುತ್ತಿರುವಾಗಲೇ ತುಂಬಿರುವ ಹಡಗಿನ ಮೇಲೆ ಶತ್ರು ದಾಳಿ ನಡೆಯುತ್ತವೆ. ಸಾವಿರಾರು ಯೋಧರು ಸಮುದ್ರ ಪಾಲಾಗುತ್ತಾರೆ. ಈ ಸಂದರ್ಭದಲ್ಲಿ ಅಲೆಕ್ಸ್ ಎನ್ನುವ ಒಬ್ಬ ಯೋಧನನ್ನು ಟೋಮಿ ಮತ್ತು ಗಿಬ್ಸನ್ ರಕ್ಷಿಸುತ್ತಾರೆ. ಅಲ್ಲಿಂದ ಪಾರಾಗಿ ಮತ್ತೆ ಸಮುದ್ರ ತೀರ ಸೇರುವ ಅವರು ಮಗದೊಂದು ಸ್ಕಾಟಿಶ್ ಯೋಧರ ತಂಡವನ್ನು ಹಿಂಬಾಲಿಸಿ ಸ್ಥಳೀಯ ಅನಾಮಿಕ ಹಡಗೊಂದರ ರಕ್ಷಣೆಯನ್ನು ಪಡೆಯುತ್ತಾರೆ. ಆದರೆ ಆ ಹಡಗೂ ಶತ್ರುಗಳ ಗುಂಡೇಟಿಗೆ ಸಿಲುಕಿ ಒಬ್ಬೊಬ್ಬರಾಗಿ ನೀರು ಪಾಲಾಗ ತೊಡಗುತ್ತಾರೆ. ಈ ಸಂದರ್ಭದಲ್ಲಿ ಮಿತ್ರ ಪಡೆಯೊಳಗೇ ನಡೆಯುವ ಒಳ ಸಂಘರ್ಷವನ್ನು ನಿರೂಪಿಸುವ ಪ್ರಯತ್ನವನ್ನು ನೊಲಾನ್ ಮಾಡುತ್ತಾರೆ.

ಇದೇ ಸಂದರ್ಭದಲ್ಲಿ ಸಿಲುಕಿಕೊಂಡಿರುವ ಸೈನಿಕರನ್ನು ರಕ್ಷಿಸಲು ತನ್ನ ಖಾಸಗಿ ಬೋಟ್‌ನಲ್ಲಿ ಮಿ. ಡೋಸನ್ ಸಮುದ್ರಕ್ಕಿಳಿಯುತ್ತಾನೆ. ಡನ್‌ಕಿರ್ಕ್ ಕಡೆಗೆ ಸಾಗುತ್ತಾನೆ. ಈ ಸಾಹಸದಲ್ಲಿ ಆತನ ಮಗ ಪೀಟರ್ ಮತ್ತು ಹದಿಹರೆಯದ ಸಹಾಯಕ ಜಾರ್ಜ್ ಜೊತೆಯಾಗುತ್ತಾರೆ. ಜಾರ್ಜ್ ಇನ್ನೂ ಕನಸುಕಂಗಳ ಹುಡುಗ. ಆತನಿಗೆ ಏನನ್ನಾದರೂ ಸಾಧಿಸಬೇಕು ಎನ್ನುವ ಅಸೀಮ ಬಯಕೆ. ಒತ್ತಾಯದಿಂದ ಆತ ಬೋಟ್‌ನ್ನು ಏರುತ್ತಾನೆ. ಡನ್‌ಕಿರ್ಕ್‌ಗೆ ಸಾಗುವ ದಾರಿಯಲ್ಲಿ ಗಾಯಾಳು ಯೋಧನೊಬ್ಬ ಸಾವು ಬದುಕಿನ ನಡುವೆ ಸಮುದ್ರದಲ್ಲಿ ಬಿದ್ದಿರುತ್ತಾನೆ. ಡೋಸನ್ ಆತನನ್ನು ರಕ್ಷಿಸುತ್ತಾನೆ. ಆದರೆ ಸಾವಿನ ಸಾಮಿಪ್ಯದಿಂದ ತಲ್ಲಣಿಸಿರುವ ಆ ಗಾಯಾಳು ಯೋಧನಿಗೆ ದೋಣಿ ಡನ್‌ಕಿರ್ಕ್ ಕಡೆ ಸಾಗುವುದು ಇಷ್ಟವಿಲ್ಲ. ಆ ಬೋಟನ್ನು ಇಂಗ್ಲೆಂಡ್ ಕಡೆ ತಿರುಗಿಸಲು ಒತ್ತಾಯಿಸುತ್ತಾನೆ. ಮತ್ತೊಮ್ಮೆ ಸಾವಿನ ಕಡೆಗೆ ಧಾವಿಸಲು ಸಾಧ್ಯವಿಲ್ಲ ಎಂದು ಗೋಗರೆಯುತ್ತಾನೆ. ಡೋಸನ್ ಜೊತೆಗೆ ತಿಕ್ಕಾಟ ನಡೆದಾಗ ಸಹಾಯಕ್ಕೆ ಬಂದ ಜಾರ್ಜ್ ಗಂಭೀರ ಗಾಯಗೊಳ್ಳುತ್ತಾನೆ. ಗಾಯಾಳು ಯೋಧ ಅಸಹಾಯಕನಾಗಿ ತಲ್ಲಣಿಸುತ್ತಾನೆ. ಕೊನೆಗೂ ಡೋಸನ್ ಬೋಟ್ ಡನ್‌ಕಿರ್ಕ್‌ನ್ನು ತಲುಪಿ ಅಪಾರ ಸಂಖ್ಯೆಯ ಯೋಧರನ್ನು ರಕ್ಷಿಸುವಲ್ಲಿ ಯಶಸ್ವಿಯಾಗುತ್ತದೆ. ಟೋಮಿ, ಗಿಬ್ಸನ್‌ರನ್ನೂ ರಕ್ಷಿಸುವಲ್ಲಿ ಡೋಸನ್ ಯಶಸ್ವಿಯಾಗುತ್ತಾನೆ. ಆದರೆ ಈ ಸಾಹಸದಲ್ಲಿ ಜಾರ್ಜ್ ಸಾಯಬೇಕಾಗುತ್ತದೆ.
ಮಗದೊಂದೆಡೆ ಶತ್ರು ವಿಮಾನಗಳನ್ನು ಉರುಳಿಸಿ ಸೈನಿಕರನ್ನು ರಕ್ಷಿಸುವ ಕಾರ್ಯ ಆಕಾಶದಲ್ಲೂ ನಡೆಯುತ್ತಿರುತ್ತದೆ. ಪೇರಿಯರ್, ಕಾಲಿನ್ಸ್ ಮತ್ತು ಆತನ ಸಂಗಡಿಗರು ಸೈನಿಕರಿಗೆ ರಕ್ಷಣೆ ನೀಡುವ ಪ್ರಯತ್ನದಲ್ಲಿ ವಿರೋಧಿ ಯುದ್ಧ ವಿಮಾನಗಳನ್ನು ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುತ್ತಾರೆ. ಈ ಸಾಹಸವನ್ನೂ ಅತ್ಯಂತ ಕುತೂಹಲಕರವಾಗಿ ನೊಲಾನ್ ನಿರೂಪಿಸಿದ್ದಾರೆ. ಅಂತಿಮವಾಗಿ ಸಾವಿರಾರು ಯೋಧರ ಸಾವುಗಳ ನಡುವೆಯೂ ರಕ್ಷಣಾ ಕಾರ್ಯ ಯಶಸ್ವಿಯಾಗುತ್ತದೆ. ನೊಲಾನ್ ಕೈಗೆತ್ತಿಕೊಂಡ ಕಥಾವಸ್ತು ತೆಳುವಾದುದೇ ಆಗಿದ್ದರೂ, ಯುದ್ಧದ ಹಿಂದಿರುವ ಕ್ರೌರ್ಯಗಳ ಬೇರೆ ಬೇರೆ ಆಯಾಮಗಳನ್ನು ಕಟ್ಟಿಕೊಡಲು ಅವರು ಯತ್ನಿಸಿದ್ದಾರೆ. ಒಂದೆಡೆ ಮಿತ್ರರಾಗಿ ಶತ್ರುಗಳನ್ನು ಎದುರಿಸುತ್ತಿದ್ದರೂ, ಮಗದೊಂದೆಡೆ ಬ್ರಿಟಿಷ್, ಸ್ಕಾಟಿಶ್, ಫ್ರೆಂಚ್ ಎಂದು ವಿಂಗಡಿಸಲ್ಪಡುವ ಸೈನಿಕರ ಅಸಹಾಯಕತೆಯನ್ನು ಅವರು ಹೇಳುವ ಪ್ರಯತ್ನ ಮಾಡಿದ್ದಾರೆ. ಯುದ್ಧವೆನ್ನುವುದು ಇಲ್ಲಿ ಕೇವಲ ಶತ್ರುಗಳ ಗುಂಡಿನ ಶಬ್ದಗಳಷ್ಟೇ ಅಲ್ಲ. ಸಮುದ್ರ ಅಲೆಗಳೂ ಹೌದು. ಒಂದು ನಿರ್ದಿಷ್ಟ ಕತೆ ಇಲ್ಲಿಲ್ಲದೇ ಇರುವುದರಿಂದ, ಸುದೀರ್ಘವಾದ ಭಾವನಾತ್ಮಕ ದೃಶ್ಯಗಳು ಇಲ್ಲಿಲ್ಲ. ಸಣ್ಣ ಸಣ್ಣ ಮಿಡಿತಗಳ ಮೂಲಕವೇ ಪಾತ್ರಗಳು ನಮ್ಮನ್ನು ತಟ್ಟುತ್ತವೆ. ಎಲ್ಲೂ ಯುದ್ಧವನ್ನು ವೈಭವೀಕರಿಸದೆ, ರೋಚಕಗೊಳಿಸದೆ, ಹೊಸ ಬಗೆಯಲ್ಲಿ ನಿರೂಪಿಸುವ ನೊಲಾನ್ ಪ್ರಯತ್ನ ಯಶಸ್ವಿಯಾಗಿದೆ. ಯೋಧರ ಹೋರಾಟ, ಹತಾಶೆ, ದುಃಖ, ಯುದ್ಧದ ಕ್ರೌರ್ಯಗಳನ್ನು ತನ್ನ ಸಂಗೀತದ ಲಯದ ಮೂಲಕ ಹಿಡಿದಿಡುವಲ್ಲಿ ಹಾನ್ಸ್ ಝಿಮ್ಮರ್ ಯಶಸ್ವಿಯಾಗಿದ್ದಾರೆ. ಹಾಗೆ ನೋಡಿದರೆ ಚಿತ್ರದಲ್ಲಿ ಸಂಭಾಷಣೆಯ ಪಾತ್ರ ತೀರಾ ಅಲ್ಪ. ಯುದ್ಧ ವಿಮಾನಗಳ ಹಾರಾಟ, ಸಮುದ್ರದ ಭೋರ್ಗರೆತ, ಯೋಧರ ಚೀತ್ಕಾರ ಸಂಭಾಷಣೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತವೆ ಮತ್ತು ಇದಕ್ಕೆ ಪೂರಕವಾಗಿ ಸಂಗೀತದ ಲಯವಿದೆ. ಯುದ್ಧವನ್ನು ಮತ್ತೊಮ್ಮೆ ಸ್ಮರಿಸುವ ಮೂಲಕ ನೊಲಾನ್ ಈ ಚಿತ್ರದಲ್ಲಿ ನಮಗೆ ಹತ್ತು ಹಲವು ಸಂದೇಶಗಳನ್ನು ನೀಡಿದ್ದಾರೆ. ಅದನ್ನು ಸ್ವೀಕರಿಸುವ ಹೊಣೆಗಾರಿಕೆ ನಮ್ಮದಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News