ಶ್ರೀಲಂಕಾದಿಂದ ದೋಣಿಯಲ್ಲಿ ತ.ನಾಡಿಗೆ ಬಂದಿದ್ದ ಪಾಕಿಸ್ತಾನಿ ಪ್ರಜೆಯ ಸೆರೆ
ರಾಮನಾಥಪುರಂ,ಜು.23: ಮಾದಕ ದ್ರವ್ಯ ಸಾಗಾಟ ಸೇರಿದಂತೆ ವಿವಿಧ ಆರೋಪ ಗಳಡಿ 65ರ ಹರೆಯದ ಪಾಕಿಸ್ತಾನಿ ಪ್ರಜೆಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಜ.27ರಂದು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಸ್ಮಾರಕದ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರ ರಾಮೇಶ್ವರಂ ಭೇಟಿಗೆ ಮುನ್ನ ಈ ಬಂಧನ ನಡೆದಿದೆ.
ಕರಾಚಿ ನಿವಾಸಿ ಮುಹಮ್ಮದ್ ಯೂನುಸ್‌ನನ್ನು ಎರ್ವಾಡಿಯ ಲಾಡ್ಜ್‌ವೊಂದರಿಂದ ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ರಾಮನಾಥಪುರಂ ಜಿಲ್ಲೆಯ ಎರ್ವಾಡಿ ಅಲ್ಲಿಯ ಶತಮಾನಗಳಷ್ಟು ಪುರಾತನವಾದ ದರ್ಗಾದಿಂದಾಗಿ ಪ್ರಸಿದ್ಧಿಯನ್ನು ಪಡೆದಿದೆ.
ಬಂಧನದ ವೇಳೆ ಯೂನುಸ್ ಬಳಿ ಪಾಸ್‌ಪೋರ್ಟ್ ಅಥವಾ ವೀಸಾ ಇದ್ದಿರಲಿಲ್ಲ. ಆತನ ಬಳಿಯಿದ್ದ 2,500 ಪಾಕಿಸ್ತಾನಿ ರೂ. ಮತ್ತು 3,000 ಭಾರತೀಯ.ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಯೂನುಸ್ ದೋಣಿಯ ಮೂಲಕ ಶ್ರೀಲಂಕಾ ದಿಂದ ತಮಿಳುನಾಡಿಗೆ ಅಕ್ರಮವಾಗಿ ಬಂದಿದ್ದ ಎನ್ನುವುದು ವಿಚಾರಣೆಯ ವೇಳೆ ಬಹಿರಂಗ ಗೊಂಡಿದೆ.
ಮಾದಕ ದ್ರವ್ಯವನ್ನು ಹುಡುಕಿಕೊಂಡು ತಮಿಳುನಾಡಿನ ಪುದುಕೊಟ್ಟೈ ಸೇರಿದಂತೆ ಹಲವಾರು ಸ್ಥಳಗಳಿಗೆ ಅಲೆದಾಡಿದ ಬಳಿಕ ಯೂನುಸ್ ಎರ್ವಾಡಿ ತಲುಪಿದ್ದ ಎಂದು ಪೊಲೀಸರು ತಿಳಿಸಿದರು.
ಯೂನುಸ್‌ಗೆ ಮಾದಕ ದ್ರವ್ಯ ಕೊಡಿಸುವುದಾಗಿ ಭರವಸೆ ನೀಡಿದ್ದ ಎರ್ವಾಡಿಯ ನಿವಾಸಿಗಳಿಬ್ಬರನ್ನು ಸಹ ಬಂಧಿಸಲಾಗಿದೆ.
ಯೂನುಸ್‌ನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಿದೇಶಿಯರಿಗಾಗಿ ಪ್ರತ್ಯೇಕ ಸೆಲ್ ಹೊಂದಿರುವ ಪುಳಲ್ ಕೇಂದ್ರ ಕಾರಾಗೃಹಕ್ಕೆ ಆತನನ್ನು ಸಾಗಿಸಲಾಗಿದೆ.