×
Ad

ಕಚ್ಛಾ ತೈಲ ಕಳವು ಬೃಹತ್ ಜಾಲ ಭೇದಿಸಿದ ರಾಜಸ್ತಾನ ಪೊಲೀಸರು

Update: 2017-07-23 21:13 IST

ಜೈಪುರ, ಜು.23: ನೀರಿನ ಟ್ಯಾಂಕರ್ ಒಳಗಡೆ ಕಚ್ಛಾ ತೈಲನ್ನು ಕದ್ದು ಸಾಗಿಸುತ್ತಿದ್ದ ಜಾಲವನ್ನು ಬಯಲಿಗೆಳೆದಿರುವ ರಾಜಸ್ತಾನ ಪೊಲೀಸರು, ಈ ಜಾಲದ ಮೂಲಕ ಕಳೆದ ಸುಮಾರು ಆರು ವರ್ಷಗಳಿಂದ 50 ಮಿಲಿಯನ್ ಲೀಟರ್‌ಗೂ ಅಧಿಕ ಕಚ್ಛಾ ತೈಲನ್ನು ಅಕ್ರಮವಾಗಿ ಸಾಗಾಟ ಮಾಡಿರುವುದಾಗಿ ತಿಳಿಸಿದ್ದಾರೆ.

‘ಕ್ಯರಿನ್ ಇಂಡಿಯ ಆಯಿಲ್‌ಫೀಲ್‌ಲ್ಡ್’ ಎಂಬ ಸಮುದ್ರ ತೀರದ ತೈಲಕ್ಷೇತ್ರದಿಂದ ಈ ತೈಲ ಕಳವುಗೈಯಲಾಗಿದೆ. ಕಳವುಗೈಯಲಾದ ತೈಲದ ಬೆಲೆ ಸುಮಾರು 49 ಕೋಟಿ ರೂ. ಆಗಿದ್ದು 75ಕ್ಕೂ ಹೆಚ್ಚು ಮಂದಿ ಈ ಜಾಲದಲ್ಲಿ ಶಾಮೀಲಾಗಿದ್ದಾರೆ. ಇವರಲ್ಲಿ ಟ್ಯಾಂಕರ್‌ನ ಚಾಲಕರು ಹಾಗೂ ತೈಲಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಗಗನ್‌ದೀಪ್ ಸಿಂಗ್ಲ ತಿಳಿಸಿದ್ದಾರೆ.

ಯಾವುದೋ ಅಕ್ರಮ ವ್ಯವಹಾರ ನಡೆಯುತ್ತಿದೆ ಎಂಬ ಶಂಕೆಯಿಂದ ಸಂಸ್ಥೆಯವರು ನಮಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಅವ್ಯವಹಾರ ಬೆಳಕಿಗೆ ಬಂದಿದೆ. ತೈಲದ ಅನ್ವೇಷಣೆ ಸಂದರ್ಭ ಹೊರಬರುವ ನೀರನ್ನು ತೈಲಕ್ಷೇತ್ರದಿಂದ ಹೊರ ಸಾಗಿಸಲು ಬಳಸಲಾಗುವ ಟ್ಯಾಂಕರ್‌ಗಳಲ್ಲಿ ನೀರಿನ ಬದಲು ಕಚ್ಚಾ ತೈಲ ತುಂಬಿಸಿ ಹೊರ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಟ್ಯಾಂಕರ್‌ಗೆ ಅಳವಡಿಸಲಾಗಿರುವ ಜಿಪಿಎಸ್ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿ ಚಾಲಕರು ಈ ಕಾರ್ಯ ನಡೆಸುತ್ತಿದ್ದರು. ಹೀಗೆ ಹೊರ ಸಾಗಿಸಲಾದ ತೈಲವನ್ನು ಸಮೀಪದ ಎರಡು ಫ್ಯಾಕ್ಟರಿಗೆ ಮಾರುತ್ತಿದ್ದರು. ಅವರು ಅದನ್ನು ಭೂಗತ ಸಂಗ್ರಹಾಗಾರದಲ್ಲಿ ಶೇಖರಿಸಿ ಬಳಿಕ ಮಾರಾಟ ಮಾಡುತ್ತಿದ್ದರು. ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಡೀಸೆಲ್ ಉತ್ಪಾದನೆಗೆ ಈ ಕಚ್ಛಾ ತೈಲದ ಬಳಕೆಯಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಪೈಪ್‌ಲೈನ್‌ಗೆ ಕನ್ನ ಕೊರೆದು ಸುಮಾರು 100 ಕೋಟಿ ರೂ.ವೌಲ್ಯದ ತೈಲ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಫೆಬ್ರವರಿಯಲ್ಲಿ 12ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಭಾರತವು ತನ್ನ ತೈಲ ಬೇಡಿಕೆಯ ಸುಮಾರು ಶೇ.82ರಷ್ಟು ಕಚ್ಛಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News