ಅಫ್ಘಾನ್: 30ಕ್ಕೂ ಅಧಿಕ ಅಪಹೃತ ಗ್ರಾಮಸ್ಥರಿಗಾಗಿ ಶೋಧ ಆರಂಭ
ಅಫ್ಘಾನಿಸ್ತಾನ,ಜು.23: ದಕ್ಷಿಣ ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತದಲ್ಲಿ ಶಂಕಿತ ತಾಲಿಬಾನ್ ಬಂಡುಕೋರರಿಂದ ಅಪಹೃತರಾದ 30ಕ್ಕೂ ಅಧಿಕ ಮಂದಿ ಗ್ರಾಮಸ್ಥರ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ಅಫ್ಘಾನ್ ಪೊಲೀಸರು ರವಿವಾರ ಆರಂಭಿಸಿದ್ದಾರೆ. ಅಪಹೃತ ಗ್ರಾಮಸ್ಥರ ಪೈಕಿ ಕನಿಷ್ಠ 7 ಮಂದಿ ಮೃತದೇಹಗಳು ಕಂದಹಾರ್‌ನಿಂದ ಉರುಝಾಗಾನ್ ಪ್ಪಾಂತದ ರಾಜಧಾನಿ ತಾರಿನ್ ಕೋಟ್‌ವರೆಗಿನ ಹೆದ್ದಾರಿಯಲ್ಲಿ ಪತ್ತೆಯಾಗಿವೆ. ಅಫೀಮು ಬೆಳೆಗೆ ಕುಪ್ರಸಿದ್ಧವಾಗಿರುವ ಈ ಪ್ರಾಂತದಲ್ಲಿ ತಾಲಿಬಾನ್ ಬಂಡುಕೋರರು ಸಕ್ರಿಯರಾಗಿದ್ದಾರೆಂದು ಅಫ್ಘಾನ್ ಪೊಲೀಸರು ತಿಳಿಸಿದ್ದಾರೆ.
ಅಪಹೃತರ ಪೈಕಿ 30 ಮಂದಿಯ ಬಿಡುಗಡೆಯಾಗಿದ್ದು, ಇನ್ನೂ ಕನಿಷ್ಠ 30 ಮಂದಿ ನಾಪತ್ತೆಯಾಗಿರುವುದಾಗಿ ಕಂದಹಾರ್ ಪೊಲೀಸ್ ಇಲಾಖೆಯ ವಕ್ತಾರ ಝಿಯಾ ದುರ್ರಾನಿ ತಿಳಿಸಿದ್ದಾರೆ. ಆದರೆ ಈವರೆಗೆ ಯಾವುದೇ ಸಂಘಟನೆಯೂ ಗ್ರಾಮಸ್ಥರ ಅಪಹರಣದ ಹೊಣೆ ವಹಿಸಿಕೊಂಡಿಲ್ಲ. ಅಲ್ಲದೆ ಯಾವ ಉದ್ದೇಶಕ್ಕಾಗಿ ಅವರನ್ನು ಅಪಹರಿಸಲಾಗಿದೆಯೆಂಬುದು ಕೂಡಾ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಅಫ್ಘಾನ್ ಸರಕಾರದ ಜೊತೆ ಸಹಕರಿಸುತ್ತಿದ್ದಾರೆ ಎಂಬ ಶಂಕೆಯಿಂದ ಈ ಗ್ರಾಮಸ್ಥರನ್ನು ತಾಲಿಬಾನ್ ಬಂಡುಕೋರರು ಅಪಹರಿಸಿರುವ ಸಾಧ್ಯತೆಯಿದೆಯೆಂದು ಕೆಲವು ಅಧಿಕಾರಿಗಳು ತಿಳಿಸಿದ್ದಾರೆ.