ರೈಲ್ವೇ ಪ್ರಯಾಣಿಕರ ಮೇಲೆ 11 ಕೋ. ರೂ. ಸರ್‌ಚಾರ್ಜ್
ಆಗ್ರಾ, ಜು. 22: ಉತ್ತರ ಕೇಂದ್ರ ರೈಲ್ವೇ ಹಾಗೂ ದಕ್ಷಿಣ ಕೇಂದ್ರ ರೈಲ್ವೇ ಸೂಪರ್‌ಫಾಸ್ಟ್ ಸರ್‌ಚಾರ್ಜ್ ಎಂದು 11.17 ಕೋಟಿ ರೂಪಾಯಿ ತೆರಿಗೆಯನ್ನು ಪ್ರಯಾಣಿಕರಿಂದ ಸಂಗ್ರಹಿಸಿದೆ. ಆದರೆ, ಕೆಲವು ರೈಲುಗಳು ಶೇ. 95ರಷ್ಟು ವಿಳಂಬವಾಗಿ ಸಂಚರಿಸುತ್ತಿದೆ ಎಂದು ಸಂಸತ್ತಿನಲ್ಲಿ ಶುಕ್ರವಾರ ಸಲ್ಲಿಸಲಾದ ಸಿಎಜಿ ವರದಿ ತಿಳಿಸಿದೆ.
ರೈಲ್ವೇ ಮಂಡಳಿ ಪ್ರಕಾರ ಗಂಟೆಗೆ ಸರಾಸರಿ 55 ಕಿ.ಮೀ. ಅಥವಾ ಅದಕ್ಕಿಂತ ಹೆಚ್ಚು ವೇಗದ ರೈಲುಗಳು ಸೂಪರ್‌ಫಾಸ್ಟ್ ರೈಲುಗಳ ವಿಭಾಗದಲ್ಲಿ ಬರುತ್ತವೆ. 2013- 2014ರಿಂದ 2015-2016ರ ವರೆಗೆ ಸೂಪರ್‌ಫಾಸ್ಟ್ ರೈಲುಗಳ ಸಮಯಪಾಲನೆಯ ಅಂಕಿ-ಅಂಶ ಅಧ್ಯಯನ ಮಾಡಲಾಗಿದೆ. ಈ ರೈಲುಗಳು ಶೇ. 13.48ರಿಂದ 95.17ರಷ್ಟು ತಡವಾಗಿ ಸಂಚರಿಸುತ್ತದೆ. ಒಟ್ಟು 21 ಸೂಪರ್‌ಫಾಸ್ಟ್ ರೈಲುಗಳಲ್ಲಿ 16,804 ದಿನಗಳಲ್ಲಿ 3,000 ದಿನಗಳಲ್ಲಿ ವಿಳಂಬವಾಗಿ ಸಂಚರಿಸಿವೆ. ಅಂದರೆ ಅದು ಸೂಪರ್‌ಫಾಸ್ಟ್ ರೈಲಿನ ವೇಗವನ್ನು ತಲುಪಿಲ್ಲ ಎಂದು ಅಂಕಿ-ಅಂಶ ತಿಳಿಸಿದೆ.
ರೈಲು ತಡವಾದರೆ ಹಣ ಮರುಪಾವತಿಯ ಯಾವುದೇ ನೀತಿ ಹಾಗೂ ನಿಯಮ ಪ್ರಸ್ತುತ ಇಲ್ಲ. ಆದರೆ, ರೈಲು ಸಂಚರಿಸುವ ಮೊದಲು ಕಾಯ್ದಿರಿಸಿದ ಟಿಕೇಟನ್ನು ರದ್ದುಗೊಳಿಸಿ ಮೊತ್ತದ ಒಂದು ಭಾಗ ಹಿಂದೆ ಪಡೆಯಬಹುದು.
ತುಂಬಾ ವಿಶೇಷ ವರ್ಗದ ಕೋಚ್‌ಗಳಿಗೆ ಮಾತ್ರ ಸೂಪರ್‌ಫಾಸ್ಟ್ ಸರ್‌ಚಾರ್ಜ್ ವಿಧಿಸಲಾಗುತ್ತದೆ. ಜನರಲ್ ಕೋಚ್-15 ರೂ., ಸ್ಲೀಪರ್-30 ರೂ., ಎಸಿ-45 ರೂ., ಎಸಿ ಫಸ್ಟ್ ಎಕ್ಸಿಕ್ಯೂಟಿವ್ ಕ್ಲಾಸ್- 75 ರೂ. ಸರ್‌ಚಾರ್ಜ್ ಅನ್ನು 2013 ಎಪ್ರಿಲ್ 1ರಂದು ಅನುಷ್ಠಾನಕ್ಕೆ ತರಲಾಗಿತ್ತು.
ರೈಲುಗಳು ತಮ್ಮ ಸೂಪರ್‌ಫಾಸ್ಟ್ ವೇಗವನ್ನು ಸಾಧಿಸದೇ ಇರಲು ಹಲವು ಅಂಶಗಳು ಕಾರಣವಾಗಿವೆ. ಹಳಿ, ಸಿಗ್ನಲ್ ತೊಡಕು, ತುರ್ತು ಬ್ರೇಕ್, ಅಪಘಾತಗಳು ಸೂಪರ್‌ಫಾಸ್ಟ್ ರೈಲುಗಳ ವಿಳಂಬವಾಗಿ ಸಂಚರಿಸಲು ಕಾರಣವಾಗಿವೆ ಎಂದು ಆಂಧ್ರಾ ವಿಭಾಗೀಯ ವಾಣಿಜ್ಯ ಮ್ಯಾನೇಜರ್ ಸಂಚಿತ್ ತ್ಯಾಗಿ ಹೇಳಿದ್ದಾರೆ.