70ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ‘ನಾನು ನನ್ನ ದೇಶವನ್ನು ಬೆಂಬಲಿಸುತ್ತೇನೆ’ಅಭಿಯಾನ

Update: 2017-07-24 12:49 GMT

ಹೊಸದಿಲ್ಲಿ,ಜು.24: ಚಲೇಜಾವ್ ಚಳವಳಿಯ 75ನೇ ವಾರ್ಷಿಕ ಮತ್ತು 70ನೇ ಸ್ವಾತಂತ್ರದಿನದ ಅವಳಿ ಸಂಭ್ರಮಾಚರಣೆಯ ಅಂಗವಾಗಿ ‘ನಾನು ನನ್ನ ದೇಶವನ್ನು ಬೆಂಬಲಿಸುತ್ತೇನೆ’ ಎಂಬ ಘೋಷವಾಕ್ಯದೊಡನೆ ಪ್ರಜಾ ಆಂದೋಲನವೊಂದಕ್ಕೆ ನಾಂದಿ ಹಾಡಲು ಸರಕಾರವು ಉದ್ದೇಶಿಸಿದೆ.

ಯುವ ಪೀಳಿಗೆಯಲ್ಲಿ ಸ್ಫೂರ್ತಿಯನ್ನು ತುಂಬುವುದನ್ನು ಮತ್ತು ಅವರಲ್ಲಿ ಹೆಮ್ಮೆ ಹಾಗೂ ಹೊಣೆಗಾರಿಕೆಯನ್ನು ಮೂಡಿಸುವುದನ್ನು ಮುಖ್ಯವಾಗಿಟ್ಟುಕೊಂಡು ಬಹುಮಾಧ್ಯಮ ಅಭಿಯಾನವೊಂದನ್ನು ಹಮ್ಮಿಕೊಳ್ಳಲು ಸರಕಾರವು ಯೋಜಿಸಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಸಿದ್ಧಪಡಿಸಿರುವ ಟಿಪ್ಪಣಿಯು ಹೇಳಿದೆ.

ದೇಶದ ಅರ್ಧದಷ್ಟು ಜನಸಂಖ್ಯೆ 25 ವರ್ಷಕ್ಕಿಂತ ಕೆಳಗಿನವರಾಗಿದ್ದು, ಇಂತಹ ಅಭಿಯಾನವು ಅವರು ದೇಶಪ್ರೇಮದ ಪರಂಪರೆಯನ್ನು ಮೈಗೂಡಿಸಿಕೊಳ್ಳಲು ಮತ್ತು ಕಳೆದ ಏಳು ದಶಕಗಳಲ್ಲಿ ನಡೆದ ಮಹತ್ವದ ಘಟನೆಗಳನ್ನು ಅರಿತುಕೊಳ್ಳಲು ನೆರವಾಗುತ್ತದೆ ಎಂದು ಸರಕಾರವು ಭಾವಿಸಿದೆ.
ತನ್ನ ಆಡಳಿತದಡಿ ನೂತನ ಮತ್ತು ಚೈತನ್ಯಪೂರ್ಣ ಭಾರತವು ಹೊರಹೊಮ್ಮುತ್ತಿದೆ ಎಂದು ಹೇಳುವ ಮೂಲಕ ನರೇಂದ್ರ ಮೋದಿ ಸರಕಾರವೂ ತನ್ನನ್ನು ಬಿಂಬಿಸಿಕೊಳ್ಳಲಿದೆ.

ದೃಢ ನಿರ್ಧಾರ,ಇಚ್ಛಾಶಕ್ತಿ ಮತ್ತು ಹೋರಾಟದ ಮುಂದಿನ ಐದು ವರ್ಷಗಳಲ್ಲಿ ‘ಭ್ರಷ್ಟಾಚಾರ ಮತ್ತು ಕಪ್ಪುಹಣ ಮುಕ್ತ ’ವಾದ ‘ನವ ಭಾರತ ’ನಿರ್ಮಾಣವಾಗಲಿದೆ ಮತ್ತು ತನ್ನ ಕೋಟ್ಯಂತರ ಪ್ರಜೆಗಳ ಆಕಾಂಕ್ಷೆಗಳನ್ನು ಸಾಕಾರಗೊಳಿಸಲಿದೆ ಎನ್ನುವ ಆಶಯಕ್ಕೆ ಈ ಅಭಿಯಾನವು ಒತ್ತು ನೀಡಲಿದೆ ಎಂದು ಸಚಿವಾಲಯವು ತಿಳಿಸಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ, ಕ್ರೀಡೆ, ಆಧ್ಯಾತ್ಮಿಕತೆ, ಕಲೆ, ಬಾಹ್ಯಾಕಾಶ ಅನ್ವೇಷಣೆ, ಆರ್ಥಿಕತೆ ಮತ್ತು ರಕ್ಷಣೆ.....ಹೀಗೆ ಪ್ರತಿಯೊಂದೂ ಕ್ಷೇತ್ರದಲ್ಲಿ ದೇಶವು ಈಗಾಗಲೇ ತನ್ನ ಸಾಮರ್ಥ್ಯವನ್ನು ರುಜುವಾತುಗೊಳಿಸಿದೆ ಮತ್ತು ಇಂದು ಹೆಮ್ಮೆಯಿಂದ ಬೀಗುತ್ತ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುವ ಹೊಸ್ತಿಲಲ್ಲಿದೆ ಎಂಬ ಅರಿವನ್ನೂ ಜನರಲ್ಲಿ ಮೂಡಿಸಲು ಅಭಿಯಾನವು ಉದ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News