ಕಾಶ್ಮೀರಿ ಪಂಡಿತರ ಹತ್ಯೆ ಪ್ರಕರಣದ ತನಿಖೆ: ಕೋರಿಕೆ ತಳ್ಳಿಹಾಕಿದ ಸುಪ್ರೀಂ

Update: 2017-07-24 13:08 GMT

ಹೊಸದಿಲ್ಲಿ, ಜು.24: 1989ರಿಂದ 1990ರ ಅವಧಿಯಲ್ಲಿ ನಡೆದಿರುವ 700ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರ ಹತ್ಯೆ ಪ್ರಕರಣದ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.

ಇದು ಹೃದಯ ಕಲಕುವಂತಹ ವಿಷಯ ಹೌದು. ಆದರೆ ತುಂಬಾ ತಡವಾಯಿತು. ನೀವು 27 ವರ್ಷದ ಹಿಂದೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕಿತ್ತು ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿದ್ದ ವಿಭಾಗೀಯ ಪೀಠವು ಅರ್ಜಿದಾರರಿಗೆ ತಿಳಿಸಿದೆ.

ಕ್ರಿಮಿನಲ್ ಪ್ರಕರಣಗಳ ಮರುತನಿಖೆ ಆಗಬೇಕು ಮತ್ತು ಈ ಪ್ರಕರಣಗಳ ವಿಚಾರಣೆ ಕಾಶ್ಮೀರದಿಂದ ಹೊರಗೆ ನಡೆಯಬೇಕು ಎಂದು ಕಾಶ್ಮೀರ ಬಿಟ್ಟು ಹೊರರಾಜ್ಯದಲ್ಲಿ ನೆಲೆಸಿರುವ ಕಾಶ್ಮೀರ ಪಂಡಿತರು ಮಾಡಿರುವ ಮನವಿಯ ಹಿನ್ನೆಲೆಯಲ್ಲಿ ಎನ್‌ಜಿಒ ಸಂಸ್ಥೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಪ್ರತ್ಯೇಕವಾದಿ ಮುಖಂಡ ಯಾಸಿನ್ ಮಲಿಕ್ ಸೇರಿದಂತೆ ವಿವಿಧ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

ಅರ್ಜಿಯ ಬಗ್ಗೆ ಪ್ರತಿಕ್ರಿಯಿಸಿರುವ ನ್ಯಾಯಾಲಯದ ಪೀಠವು, ಸುಮಾರು 27 ವರ್ಷ ಕಳೆದಿರುವ ಕಾರಣ ಕೊಲೆ , ದೊಂಬಿ, ಲೂಟಿ ಇತ್ಯಾದಿ ಪ್ರಕರಣಗಳ ಸಾಕ್ಷಿಗಳನ್ನು ಕಲೆ ಹಾಕುವುದು ಕಷ್ಟವಾಗಿದೆ . ನೀವು 27 ವರ್ಷ ಸುಮ್ಮನಿದ್ದಿರಿ. ಈಗ ಸಾಕ್ಷಿಗಳನ್ನು ಎಲ್ಲಿಂದ ಕಲೆ ಹಾಕುವುದು ನೀವೇ ತಿಳಿಸಿ ಎಂದು ಪ್ರಶ್ನಿಸಿದೆ. ಕಾಶ್ಮೀರದಲ್ಲಿ 1989-90ರ ಅವಧಿಯಲ್ಲಿ ನಡೆದ ಕೊಲೆ, ದೊಂಬಿ ಪ್ರಕರಣದ ಬಳಿಕ ಕಾಶ್ಮೀರಿ ಪಂಡಿತರು ಸಾಮೂಹಿಕ ವಲಸೆ ಹೋಗಿದ್ದಾರೆ.

 ಮರುವಿಚಾರಣೆ ಕೋರಿಕೆ ಸಲ್ಲಿಸುವಲ್ಲಿ ವಿಳಂಬವಾಗಿದೆ ಎಂಬುದನ್ನು ಒಪ್ಪಿಕೊಂಡ ಎನ್‌ಜಿಒ ಪರ ವಕೀಲ ವಿಕಾಸ್ ಪದೋರ, ರಾಜ್ಯ ಬಿಟ್ಟು ತೆರಳುವಂತೆ ಕಾಶ್ಮೀರಿ ಪಂಡಿತರನ್ನು ಬಲವಂತಪಡಿಸಲಾಗಿದೆ. ಆದ್ದರಿಂದ ಅವರು ತನಿಖೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಆದರೆ ಕೇಂದ್ರ ಅಥವಾ ರಾಜ್ಯ ಸರಕಾರ , ಅಲ್ಲದೆ ನ್ಯಾಯಾಂಗ ಇದನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News