ಗೋರಕ್ಷಣೆ ನೆಪದಲ್ಲಿ ಹಿಂಸೆಯ ವಿರುದ್ಧ ಪ್ರತಿಪಕ್ಷಗಳಿಂದ ಲೋಕಸಭೆಯಲ್ಲಿ ಘೋಷಣೆ

Update: 2017-07-24 13:22 GMT

ಹೊಸದಿಲ್ಲಿ,ಜು.24: ಗೋರಕ್ಷಣೆಯ ನೆಪದಲ್ಲಿ ಹಿಂಸಾಚಾರದ ವಿರುದ್ಧ ಘೋಷಣೆ ಗಳನ್ನು ಕೂಗುವ ಮೂಲಕ ಪ್ರತಿಪಕ್ಷಗಳು ಸೋಮವಾರ ಲೋಕಸಭೆಯ ಪ್ರಶ್ನೆವೇಳೆಗೆ ವ್ಯತ್ಯಯವನ್ನುಂಟು ಮಾಡಿದವು. ಆದರೆ ಒಂದು ಗಂಟೆಗೂ ಹೆಚ್ಚಿನ ಅವಧಿಗೆ ಸದನದಲ್ಲಿ ಕೋಲಾಹಲವಿದ್ದರೂ ಈ ಹಿಂದಿನಂತೆ ಕಲಾಪಗಳು ಮುಂದೂಡಲ್ಪಡಲಿಲ್ಲ.

ಬೆಳಿಗ್ಗೆ ಕಲಾಪ ಆರಂಭಗೊಂಡ ಬೆನ್ನಿಗೇ ಕಾಂಗ್ರೆಸ್, ಟಿಎಂಸಿ ಮತ್ತು ಆರ್‌ಜೆಡಿ ಸದಸ್ಯರು ಘೋಷಣೆಗಳನ್ನು ಕೂಗುತ್ತ ಸದನದ ಅಂಗಳಕ್ಕೆ ಧಾವಿಸಿ ದೇಶದ ವಿವಿಧ ಭಾಗಗಳಲ್ಲಿ ಗೋರಕ್ಷಕ ಗುಂಪುಗಳಿಂದ ಹತ್ಯೆಗಳ ಘಟನೆಗಳನ್ನು ಚರ್ಚಿಸಲು ಪ್ರಶ್ನೆವೇಳೆಯನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದರು. ಆದರೆ ಈ ಬೇಡಿಕೆಯನ್ನು ನಿರಾಕರಿಸಿದ ಸ್ಪೀಕರ್ ಪ್ರಶ್ನೆವೇಳೆಯ ಬಳಿಕವಷ್ಟೇ ಚಚೆರ್ಗೆ ಅವಕಾಶ ನೀಡುವುದಾಗಿ ಸ್ಪಷ್ಟಪಡಿಸಿ, ತಮ್ಮ ಆಸನಗಳಿಗೆ ಮರಳುವಂತೆ ಸದಸ್ಯರಿಗೆ ಸೂಚಿಸಿದರು.

ಜನರನ್ನು ಥಳಿಸಿ ಕೊಲ್ಲಲಾಗುತ್ತಿದೆ, ಆದರೆ ಸರಕಾರವು ನಿದ್ರಿಸುತ್ತಿದೆ ಎಂದು ನಿಲುವಳಿ ಸೂಚನೆಯನ್ನು ಮಂಡಿಸಿದ್ದ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು. ಗೋರಕ್ಷಕರಿಂದ ಹತ್ಯೆ ಘಟನೆಗಳ ಕುರಿತು ತಕ್ಷಣವೇ ಚರ್ಚೆ ನಡೆಯಬೇಕೆಂದು ಅವರು ಆಗ್ರಹಿಸಿದರು.
 ಟಿಎಂಸಿ ಸದಸ್ಯರು ಕಾಂಗ್ರೆಸ್ ಸದಸ್ಯರೊಂದಿಗೆ ಸೇರಿ ಘೋಷಣೆಗಳನ್ನು ಕೂಗುತ್ತಿದ್ದರೆ ಅವರದೇ ಪಕ್ಷದ ರತ್ನಾ ಡೆ ನಾಗ್ ಅವರು ಎರಡು ಪೂರಕ ಪ್ರಶ್ನೆಗಳನ್ನು ಕೇಳಿ ಅಚ್ಚರಿಯನ್ನು ಮೂಡಿಸಿದ್ದರು. ತಕ್ಷವೇ ಟಿಎಂಸಿಯ ಇತರ ಸದಸ್ಯರು ತಮ್ಮ ಆಸನಗಳಿಗೆ ಮರಳಿದ್ದು, ಆರ್‌ಜೆಡಿ ಸದಸ್ಯ ಜೈಪ್ರಕಾಶ್ ನಾರಾಯಣ ಅವರೂ ತನ್ನ ಸ್ಥಾನಕ್ಕೆ ತೆರಳಿದರು. ಆದರೆ ಕಾಂಗ್ರೆಸ್ ಸದಸ್ಯರು ಪ್ರಶ್ನೆಕಾಲದುದ್ದಕ್ಕೂ ಘೋಷಣೆಗಳನ್ನು ಕೂಗುತ್ತಲೇ ಇದ್ದರು. ಒಂದು ಹಂತದಲ್ಲಿ ಅವರು ಘೋಷಣೆಗಳನ್ನು ಕೂಗುತ್ತ ಸದನದ ಅಂಗಳದಲ್ಲಿ ಪಟ್ಟಾಗಿ ಕುಳಿತು ಬಿಟ್ಟಿದ್ದರು.

ತನ್ಮಧ್ಯೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಪಕ್ಷದ ನಾಯಕ ಜ್ಯೋತಿರಾದಿತ್ಯ ಸಿಂದಿಯಾರ ಮೂಲಕ ಘೋಷಣೆಗಳನ್ನು ಕೂಗುತ್ತಿದ್ದ ಸದಸ್ಯರಿಗೆ ನಿರ್ದೇಶ ರವಾನಿಸಿದ್ದು ಕಂಡು ಬಂದಿತ್ತು. ಯಾವುದೇ ವಿಷಯದ ಬಗ್ಗೆ ಚರ್ಚೆಗೆ ಸರಕಾರವು ಸಿದ್ಧವಿದೆ, ಓಡಿ ಹೋಗುವುದಿಲ್ಲ ಎಂದು ಹೇಳಿದ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಅವರು,ತಮ್ಮ ಆಸನಗಳಿಗೆ ಮರಳುವಂತೆ ಕಾಂಗ್ರೆಸ್ ಸದಸ್ಯರನ್ನು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News