ಜುಜುಬಿ ಮೇಲ್ಮನವಿ ಸಲ್ಲಿಸಿದ್ದಕ್ಕಾಗಿ ಎಸ್‌ಬಿಐಗೆ ಒಂದು ಲ.ರೂ.ದಂಡ!
ಹೊಸದಿಲ್ಲಿ,ಜು.24: 11 ವರ್ಷಗಳ ಹಿಂದೆ ಕಳ್ಳತನವಾಗಿದ್ದ ತನ್ನ ಗ್ರಾಹಕರೋರ್ವರ ಎಟಿಎಂ ಕಾರ್ಡ್‌ನ್ನು ಸ್ಥಗಿತಗೊಳಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾಗಿದ್ದಕ್ಕೆ ಅವರಿಗೆ 1.29 ಲ.ರೂ.ಗಳನ್ನು ಮರಳಿಸುವಂತೆ ದಿಲ್ಲಿ ರಾಜ್ಯ ಗ್ರಾಹಕರ ವೇದಿಕೆಯು ಭಾರತೀಯ ಸ್ಟೇಟ್ ಬ್ಯಾಂಕ್‌ಗೆ ಆದೇಶಿಸಿದೆ. ಅಲ್ಲದೆ ಜಿಲ್ಲಾ ವೇದಿಕೆಯ ತೀರ್ಪನ್ನು ಪ್ರಶ್ನಿಸಿ ತನ್ನ ಮುಂದೆ ಜುಜುಬಿ ಮೇಲ್ಮನವಿಯನ್ನು ಸಲ್ಲಿಸಿದ್ದಕ್ಕಾಗಿ ಒಂದು ಲ.ರೂ.ದಂಡವನ್ನೂ ವಿಧಿಸಿದೆ.
ಓಖ್ಲಾ ನಿವಾಸಿ ರಹೀಮುನ್ನೀಸಾ ಶಹಾನಾ ಅವರ ಹೊಸ ಎಟಿಎಂ ಕಾರ್ಡ್ ಮತ್ತು ಪಿನ್ ಸಂಖ್ಯೆಯಿದ್ದ ಕವರ್, 5,000 ರೂ.ನಗದು ಹಾಗೂ ಇತರ ಸೊತ್ತುಗಳನ್ನು ಒಳಗೊಂಡಿದ್ದ ಬ್ಯಾಗ್ 2006,ಮಾ.13ರಂದು ಕಳ್ಳತನವಾಗಿತ್ತು. ಶಹಾನಾ ತನ್ನ ಎಟಿಎಂ ಕಾರ್ಡ್‌ನ್ನು ಒಂದು ಬಾರಿಯೂ ಬಳಸಿರಲಿಲ್ಲ. ಅವರು ತಕ್ಷಣ ನಿಜಾಮಮುದ್ದೀನ್ ಎಸ್‌ಬಿಐ ಶಾಖೆಗೆ ತೆರಳಿ ಕಾರ್ಡ್‌ನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳನ್ನು ಕೋರಿಕೊಂಡಿದ್ದರು. ಆದರೆ 15 ದಿನಗಳ ಬಳಿಕ ಬ್ಯಾಂಕಿಗೆ ತೆರಳಿ ಪರಿಶೀಲಿಸಿದಾಗ ಕಳ್ಳತನವಾಗಿದ್ದ ಎಟಿಎಂ ಕಾರ್ಡ್ ಬಳಸಿ ಮಾ.13ರಿಂದ ಮಾ.21ರ ನಡುವೆ ಅವರ ಖಾತೆಯಲ್ಲಿದ್ದ 1,29,060 ರೂ.ಗಳ ಅಷ್ಟೂ ಮೊತ್ತವನ್ನು ಲಪಟಾಯಿಸಲಾಗಿತ್ತು.
2006,ಮಾ.30ರಂದು ಈ ಬಗ್ಗೆ ಬ್ಯಾಂಕಿಗೆ ಲಿಖಿತ ದೂರು ಸಲ್ಲಿಸಿದ್ದ ಶಹಾನಾ ಪೊಲೀಸರಲ್ಲಿಯೂ ದೂರು ದಾಖಲಿಸಿದ್ದರು. ಆದರೆ ನಿರೀಕ್ಷಿತ ಫಲ ದೊರೆಯದಿದ್ದಾಗ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿದ್ದರು.
ಶಹಾನಾರ ದೂರಿನ ವಿಚಾರಣೆ ನಡೆಸಿದ್ದ ಜಿಲ್ಲಾ ಗ್ರಾಹಕರ ವೇದಿಕೆಯು ಬ್ಯಾಂಕಿನ ತಕರಾರುಗಳನ್ನು ತಳ್ಳಿ ಹಾಕಿ 1,29,060 ರೂ.ಗಳನ್ನು ಅವರಿಗೆ ಮರಳಿಸುವಂತೆ ಆದೇಶಿಸಿತ್ತು. ಇದರ ವಿರುದ್ಧ ಬ್ಯಾಂಕ್ ರಾಜ್ಯ ಗ್ರಾಹಕ ವೇದಿಕೆಗೆ ಮೇಲ್ಮನವಿ ಸಲ್ಲಿಸಿತ್ತು.
ಕಳ್ಳತನವಾಗಿದ್ದ ಎಟಿಎಂ ಕಾರ್ಡ್‌ನ್ನು ಸ್ಥಗಿತಗೊಳಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಲ್ಲಿ ಬ್ಯಾಂಕ್ ವಿಫಲವಾಗಿದೆ ಮತ್ತು ಇದು ಸೇವಾ ಲೋಪದ ಸ್ಪಷ್ಟ ಪ್ರಕರಣವಾಗಿದೆ. ಗ್ರಾಹಕರಿಗೆ ಹಣವನ್ನು ಮರಳಿಸುವ ಬದಲು ಸುಳ್ಳು ಮತ್ತು ಕ್ಷುಲ್ಲಕ ಮೇಲ್ಮನವಿಯನ್ನು ಸಲ್ಲಿಸಿದೆ ಎಂದು ಹೇಳಿದ ರಾಜ್ಯ ವೇದಿಕೆಯು ಮೇಲ್ಮನವಿಯನ್ನು ವಜಾಗೊಳಿಸಿದೆ.