×
Ad

ಪಠ್ಯಪುಸ್ತಕದಿಂದ ಉರ್ದು ಪದ, ಗುಜರಾತ್ ಗಲಭೆಯ ಮಾಹಿತಿ ತೆಗೆದು ಹಾಕಲು ಆರೆಸ್ಸೆಸ್ ಚಿಂತಕನ ಸಲಹೆ

Update: 2017-07-24 19:25 IST

ಹೊಸದಿಲ್ಲಿ, ಜು.24: ಠಾಗೋರ್ ಅವರ ಚಿಂತನೆಗಳು, ಉರ್ದು ಪದ ಹಾಗೂ ಗುಜರಾತ್ ಗಲಭೆ ಕುರಿತ ವಾಕ್ಯವನ್ನು ಶಾಲಾ ಪಠ್ಯಪುಸ್ತಕದಿಂದ ತೆಗೆದು ಹಾಕುವಂತೆ ಆರೆಸ್ಸೆಸ್ ಸಿದ್ಧಾಂತವಾದಿ ದೀನಾನಾಥ್ ಬಾತ್ರ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ.

 ಶಾಲಾ ಪಠ್ಯಪುಸ್ತಕಗಳನ್ನು ಪುನರ್‌ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಸೂಕ್ತ ಸಲಹೆ ಸೂಚನೆಯನ್ನು ‘ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಟ್ರೈನಿಂಗ್ (ಎನ್‌ಸಿಇಆರ್‌ಟಿ) ಆಹ್ವಾನಿಸಿತ್ತು. ಈ ಹಿನ್ನೆಲೆಯಲ್ಲಿ ದೀನಾನಾಥ್ ನೇತೃತ್ವದ ,ಆರೆಸ್ಸೆಸ್ ಸಂಯೋಜಿತ ‘ಶಿಕ್ಷಾ ಸಂಸ್ಕೃತಿ ಉತ್ಥಾನ ನ್ಯಾಸ’ವು ಪಠ್ಯಪುಸ್ತಕದಿಂದ ರವೀಂದ್ರನಾಥ ಠಾಗೋರ್ ಅವರ ಚಿಂತನೆ, ಉರ್ದು ಪದಗಳು ಹಾಗೂ ಗುಜರಾತ್ ಗಲಭೆ ಕುರಿತ ವಾಕ್ಯವನ್ನು ತೆಗೆದುಹಾಕುವಂತೆ ಸಲಹೆ ಮಾಡಿದೆ.

  ಇಂಗ್ಲಿಷ್, ಉರ್ದು ಮತ್ತು ಅರೆಬಿಕ್ ಪದಗಳು, ರವೀಂದ್ರನಾಥ್ ಠಾಗೋರ್ ಚಿಂತನೆಗಳು, 1984ರ ದೊಂಬಿ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕ್ಷಮಾಪಣೆ ಕೋರಿಕೆ, ಹಾಗೂ ಗುಜರಾತ್‌ನಲ್ಲಿ 2002ರಲ್ಲಿ ಸುಮಾರು 2,000 ಮುಸ್ಲಿಮರನ್ನು ಹತ್ಯೆ ಮಾಡಲಾಗಿತ್ತು ಎಂಬ ವಾಕ್ಯವನ್ನು ಪಠ್ಯಪುಸ್ತಕದಿಂದ ತೆಗೆದುಹಾಕುವಂತೆ ಶಿಫಾರಸು ಮಾಡಲಾಗಿದೆ. ಈ ಪುಸ್ತಕದಲ್ಲಿರುವ ಹಲವಾರು ವಿಷಯಗಳು ಆಧಾರರಹಿತ, ಪೂರ್ವಾಗ್ರಹ ಪೀಡಿತವಾಗಿವೆ. ಒಂದು ಸಮುದಾಯದ ಸದಸ್ಯರನ್ನು ಅವಹೇಳನ ಮಾಡುವ ಉದ್ದೇಶದಿಂದ ಕೂಡಿವೆ. ದೊಂಬಿಯ ಬಗ್ಗೆ ಪಾಠ ಮಾಡುವ ಮೂಲಕ ಮಕ್ಕಳಿಗೆ ಯಾವ ರೀತಿಯ ಪ್ರೇರಣೆ ನೀಡಲು ಸಾಧ್ಯ ಎಂದು ‘ನ್ಯಾಸ’ದ ಕಾರ್ಯದರ್ಶಿ, ಹಿರಿಯ ಆರೆಸ್ಸೆಸ್ಸ್ ಕಾರ್ಯಕರ್ತ ಅತುಲ್ ಕೊಠಾರಿ ಪ್ರಶ್ನಿಸಿದ್ದಾರೆ.

 ಅಲ್ಲದೆ 11ನೇ ತರಗತಿಯ ರಾಜನೀತಿ ವಿಜ್ಞಾನ ಪಠ್ಯಪುಸ್ತಕದಲ್ಲಿ 1984ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಬಹುಮತ ದೊರೆಯಿತು ಎಂದು ಹೇಳಲಾಗಿದೆ. ಆದರೆ 1977ರ ಚುನಾವಣಾ ಫಲಿತಾಂಶದ ವಿವರವನ್ನೇ ನೀಡಲಾಗಿಲ್ಲ ಎಂದೂ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News