ಚೀನಾ ವಿಷಯದಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯ ಬೆಂಬಲವಿಲ್ಲ: ಉದ್ಧವ್ ಠಾಕ್ರೆ

Update: 2017-07-24 14:38 GMT

ಮುಂಬೈ, ಜು.24: ಪ್ರಧಾನಿ ನರೇಂದ್ರ ಮೋದಿ ವಿಶ್ವದ ನಾಯಕರ ಜೊತೆ ಮಿತೃತ್ವ ಹೊಂದಿದ್ದರೂ ಚೀನಾ ಅಥವಾ ಪಾಕ್ ಕುರಿತ ವಿಷಯದಲ್ಲಿ ಭಾರತವು ಅಂತರಾಷ್ಟ್ರೀಯ ಬೆಂಬಲ ಪಡೆಯುವಲ್ಲಿ ವಿಫಲವಾಗಿದೆ ಎಂದು ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.

   ಚುನಾವಣೆಗಳನ್ನು ಯಾವಾಗ ಬೇಕಾದರೂ ಗೆಲ್ಲಬಹುದು. ಆದರೆ ಯುದ್ದ ಹಾಗಲ್ಲ- ಎಂದು ಕೇಂದ್ರದಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮಿತ್ರಕೂಟದ ಅಂಗಪಕ್ಷವಾಗಿರುವ ಶಿವಸೇನೆಯ ತಿಳಿಸಿದೆ.

 ಕಾಶ್ಮೀರದಲ್ಲಿ ಪರಿಸ್ಥಿತಿ ವಿಷಮಗೊಳ್ಳಲು ಕಾರಣವೇನು. ಚೀನಾ ನಮ್ಮ ಶತ್ರುರಾಷ್ಟ ವಾಗಲು ಏನು ಕಾರಣ.. ನಮ್ಮಲ್ಲಿ ಏನಾದರೂ ನ್ಯೂನತೆಯಿದೆಯೇ . ವಿಶ್ವದಾದ್ಯಂತ ಸುತ್ತುತ್ತಿರುವ ಪ್ರಧಾನಿ ಹಲವು ಮಿತ್ರರನ್ನು ಸಂಪಾದಿಸಿದ್ದಾರೆ. ಹಾಗಿದ್ದರೂ, ಈ ಶತ್ರುಗಳ ವಿರುದ್ಧ ಯಾವ ದೇಶಗಳೂ ನಮಗೆ ಬಹಿರಂಗ ಬೆಂಬಲ ಯಾಕೆ ಘೋಷಿಸಿಲ್ಲ ಎಂದು ಠಾಕ್ರೆ ಪ್ರಶ್ನಿಸಿದ್ದಾರೆ.

    ಶಿವಸೇನೆಯು ತನ್ನ ಮೊಟ್ಟ ಮೊದಲನೆಯ ಶತ್ರು ಎಂದು ಬಿಜೆಪಿ ಪರಿಗಣಿಸಿರಬಹುದು. ಈ ಕಾರಣದಿಂದಲೇ ಬಹುಷಃ ಚೀನಾ ಮತ್ತು ಪಾಕಿಸ್ತಾನವನ್ನು ನಿರ್ಲಕ್ಷಿಸಲಾಗಿದೆ . ಅವರು ಹಾಗೆಂದು ಭಾವಿಸಿದ್ದಲ್ಲಿ ಅದು ಸೇನೆಯ ದುರಾದೃಷ್ಟವಲ್ಲ, ಬಿಜೆಪಿಯ ದುರಾದೃಷ್ಟ ಎಂದು ಪಕ್ಷದ ಮುಖವಾಣಿ ‘ಸಾಮ್ನ’ಕ್ಕೆ ನೀಡಿರುವ ಸಂದರ್ಶನದಲ್ಲಿ ಠಾಕ್ರೆ ಹೇಳಿದರು. ಚೀನಾದ ಶಕ್ತಿಯನ್ನು ಉಪೇಕ್ಷಿಸುವಂತಿಲ್ಲ ಎಂದ ಠಾಕ್ರೆ, ಭಾರತವು ಚೀನಾದ ಶಕ್ತಿಗೆ ಸರಿಸಾಟಿಯಾಗುವ ಪ್ರಯತ್ನ ನಡೆಸಬೇಕು ಎಂದರು.

ಮಿತ್ರಕೂಟದ ಹಿರಿಯ ಪಕ್ಷವು ಚುನಾವಣೆ ಮತ್ತು ಆಂತರಿಕ ರಾಜಕೀಯಕ್ಕೇ ಸೀಮಿತಗೊಂಡರೆ ಅದು ದೇಶಕ್ಕೆ ಮಾಡುವ ಅನ್ಯಾಯವಾಗಿದೆ . ಚುನಾವಣೆಯನ್ನು ಯಾವಾಗ ಬೇಕಾದರೂ ಗೆಲ್ಲಬಹುದು. ಆದರೆ ಯುದ್ದ ಹಾಗಲ್ಲ. ಅಲ್ಲದೆ ನಮ್ಮ ಎದುರು ಇರುವುದು ಚೀನಾ ಎಂಬುದನ್ನು ಮರೆಯಬಾರದು ಎಂದು ಠಾಕ್ರೆ ಹೇಳಿದ್ದಾರೆ.

 ಒಂದೆಡೆ ಅವರು (ಬಿಜೆಪಿ) ಪಾಕಿಸ್ತಾನದಿಂದ ಕಾಶ್ಮೀರ ಪಡೆಯುವಲ್ಲಿ ಸಮರ್ಥರಾಗಿದ್ದರೂ ಇನ್ನೊಂದೆಡೆ ಚೀನಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದವರು ನುಡಿದರು. ಗೋರಕ್ಷಕರಿಂದ ಪ್ರೇರಿತವಾದ ಹಿಂಸಾಚಾರದ ಬಗ್ಗೆ ಉಲ್ಲೇಖಿಸಿದ ಠಾಕ್ರೆ, ದೇಶದ ಪ್ರಸಕ್ತ ಸ್ಥಿತಿ ಉತ್ತಮವಾಗಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News