ಪ್ರೊ.ಯು.ಆರ್ ರಾವ್ ಅಸಾಧಾರಣ ದೂರದೃಷ್ಟಿ ಹೊಂದಿದ್ದರು: ಕಸ್ತೂರಿರಂಗನ್
ಹೈದರಾಬಾದ್,ಜು.24: ಉಪಗ್ರಹ ನಿರ್ಮಾಣದಲ್ಲಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಪ್ರೊ.ಯು.ಆರ್ ರಾವ್ ಅವರು ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ದೇಶದ ಸಾಧನೆಗಳಿಗೆ ಅವರ ಉತ್ಸಾಹಪೂರ್ಣ ,ದೂರದರ್ಶಿತ್ವದ ನಾಯಕತ್ವ ಕಾರಣವಾಗಿದೆ ಎಂದು ಇಸ್ರೋದ ಮಾಜಿ ಅಧ್ಯಕ್ಷ ಕೆ.ಕಸ್ತೂರಿರಂಗನ್ ಅವರು ಸೋಮವಾರ ಇಲ್ಲಿ ಹೇಳಿದರು.
ರಾವ್ ಅವರ ನೇತೃತ್ವದಲ್ಲಿ ಇಸ್ರೋ ರೋಹಿಣಿ ಮತ್ತು ಆರ್ಯಭಟ ಉಪಗ್ರಹಗಳನ್ನು ಅಭಿವೃದ್ಧಿಗೊಳಿಸಿತ್ತು ಎಂದು ಸ್ಮರಿಸಿಕೊಂಡ ರಂಗನ್, ಅಮೆರಿಕದಿಂದ ಸ್ವದೇಶಕ್ಕೆ ಮರಳು ವಂತೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಆಗ ತಾನೇ ಚಿಗುರೊಡೆಯುತ್ತಿದ್ದ ಭಾರತದ ಚಟುವಟಿಕೆಗಳ, ವಿಶೇಷವಾಗಿ ಉಪಗ್ರಹಗಳ ಅಭಿವೃದ್ಧಿಯ ಜವಾಬ್ದಾರಿ ವಹಿಸುವಂತೆ ಆಗ ಇಸ್ರೋದ ಅಧ್ಯಕ್ಷರಾಗಿದ್ದ ವಿಕ್ರಂ ಸಾರಾಭಾಯ್ ಅವರು ರಾವ್ ಅವರ ಮನವೊಲಿಸಿದ್ದರು ಎಂದರು. ರಂಗನ್ ರಾವ್ ನಿವೃತ್ತಿಯ ಬಳಿಕ ಇಸ್ರೋದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
1970ರ ದಶಕದಲ್ಲಿ ಆರ್ಯಭಟ ನಿರ್ಮಾಣಕ್ಕಾಗಿ ಅಗತ್ಯ ಮಾನವ ಸಂಪನ್ಮೂಲ ಗಳಾಗಲೀ ತಂತ್ರಜ್ಞಾನವಾಗಲೀ ಇಸ್ರೋದ ಬಳಿಯಿರಲಿಲ್ಲ. ಈ ಎಲ್ಲ ಅಡೆತಡೆಗಳ ಹೊರತಾಗಿಯೂ ದಾಖಲೆಯ 36 ತಿಂಗಳುಗಳ ಅವಧಿಯಲ್ಲಿ ಆರ್ಯಭಟ ಉಪಗ್ರಹ ನಿರ್ಮಾಣದಲ್ಲಿ ಅವರು ಯಶಸ್ವಿಯಾಗಿದ್ದರು ಎಂದು ರಂಗನ್ ನುಡಿದರು.
ಇಸ್ರೋ ಅಧ್ಯಕ್ಷರಾಗಿ ರಾವ್ ಅವರು ಪಿಎಸ್‌ಎಲ್‌ವಿ ಗಗನನೌಕೆಯ ಅಭಿವೃದ್ಧಿಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಜಿಎಸ್‌ಲ್‌ವಿ-ಮಾರ್ಕ್ 1 ಮತ್ತು ಮಾರ್ಕ್ 2 ಯೋಜನೆಗಳಿಗೂ ರೂಪ ನೀಡಿದ್ದರು ಎಂದು ಅವರು ಹೇಳಿದರು.
ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ರಾವ್ ಸೋಮವಾರ ಬೆಂಗಳೂರಿ ನಲ್ಲಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ.