ಮನೆ, ಕಚೇರಿಗೆ ಬಾಂಬ್ ಇಡುವುದಾಗಿ ಬೆದರಿಸಿದ ಸಂಘಪರಿವಾರ ಕಾರ್ಯಕರ್ತರು

Update: 2017-07-27 15:01 GMT

ಹೊಸದಿಲ್ಲಿ, ಜು.27: ರಾಜಸ್ತಾನದ ಸಂಘಪರಿವಾರದ ಸಂಘಟನೆಯೊಂದು ತನಗೆ ಮತ್ತು ಕುಟುಂಬ ಸದಸ್ಯರಿಗೆ ಕೊಲೆ ಬೆದರಿಕೆ ಹಾಕಿದೆ ಎಂದು ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಯುವವಿಭಾಗದ ಅಧ್ಯಕ್ಷರಾಗಿರುವ ಅಬು ಫರ್ಹಾನ್ ಅಝ್ಮಿ ದೂರು ನೀಡಿದ್ದಾರೆ. 

ಸಂಘಪರಿವಾರದ ಸದಸ್ಯರಿಂದ ಕೊಲೆ ಬೆದರಿಕೆ ಬಂದಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ತನ್ನ ವಾಹನದಲ್ಲಿ, ಮನೆ ಮತ್ತು ಕಚೇರಿಯಲ್ಲಿ ಬಾಂಬ್ ಇಡುವುದಾಗಿ ಬೆದರಿಸಿದ ತಂಡವು,  ಕುಟುಂಬ ಹಾಗೂ ಮುಸ್ಲಿಂ ಸಮುದಾಯವನ್ನು ನಿಂದಿಸಿದೆ. ಈ ಬೆದರಿಕೆ ಕರೆಯ ಹಿಂದೆ ಕೋಮು ಸಂಘರ್ಷ ಕೆರಳಿಸುವ ಹುನ್ನಾರ ಅಡಗಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಅಬು ಫರ್ಹಾನ್ ಅಝ್ಮಿಯವರ ತಂದೆ ಮಾಜಿ ರಾಜ್ಯಸಭಾ ಸದಸ್ಯ ಅಬು ಅಸಿಮ್ ಅಝ್ಮಿ ಅವರಿಗೂ ಬೆದರಿಕೆ ಕರೆ ಬಂದಿದೆ ಎಂದು ಮುಂಬೈ ಪೊಲೀಸರಿಗೆ ಸಲ್ಲಿಸಲಾಗಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಪ್ರಾಣಿಗಳಂತೆ ಕೂಗುವುದನ್ನು "ನಿಲ್ಲಿಸಬೇಕೆಂದು ನಿಮ್ಮ ತಂದೆಗೆ ತಿಳಿಸಿ. ಇಲ್ಲದಿದ್ದರೆ ಅವರನ್ನು ಮುಗಿಸಿಬಿಡಲಾಗುವುದು. ಉವೈಸಿಯ ಮಗನಿಗೂ ತಿಳಿಸಿ, ಆತನನ್ನೂ ಸುಮ್ಮನೆ ಬಿಡುವುದಿಲ್ಲ" ಎಂದು ಬೆದರಿಸಲಾಗಿದೆ. ಅಲ್ಲದೆ ಬಾಲಿವುಡ್ ನಟಿ ಆಯೇಷ ಟಾಕಿಯರನ್ನು ವಿವಾಹವಾಗಿರುವ ಕುರಿತು ಫರ್ಹಾನ್‌ರನ್ನು ಎಚ್ಚರಿಸಿರುವ ತಂಡವು, "ನೀವೆಲ್ಲಾ ಪ್ರಾಣಿಗಳು. ಹಿಂದೂ ಹುಡುಗಿಯನ್ನು ಮದುವೆಯಾಗುವ ಮೂಲಕ ‘ಲವ್ ಜಿಹಾದ್’ನಲ್ಲಿ ತೊಡಗಿದ್ದೀರಿ ಎಂಬುದನ್ನು ಮರೆತುಬಿಟ್ಟಿದ್ದೀರಾ" ಎಂದು ನಿಂದಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News