ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣ: ವಾಗ್ವಾದಕ್ಕೆ ಸಾಕ್ಷಿಯಾದ ರಾಜ್ಯ ಸಭೆ

Update: 2017-07-27 16:54 GMT

ಹೊಸದಿಲ್ಲಿ, ಜು. 27: ಹಿಂದೆ 2005ರಲ್ಲಿ ಸಂಭವಿಸಿದ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದ ಕುರಿತು ಸುಬ್ರಮಣೀಯಂ ಸ್ವಾಮಿ ಸೇರಿದಂತೆ ಮೂವರು ಬಿಜೆಪಿ ಸಂಸದರು ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ರಾಜ್ಯ ಸಭೆಯಲ್ಲಿ ತೀವ್ರ ವಾಗ್ವಾದ ನಡೆಯಿತು.

   ಟಿ.ವಿ. ಚಾನೆಲ್ ಒಂದರಲ್ಲಿ ಪ್ರಸಾರವಾದ ರೈಲು ಸ್ಫೋಟಕ್ಕೆ ಸಂಬಂಧಿಸಿದ ಮಂಪರು ಪರೀಕ್ಷೆಯ ದೃಶ್ಯಗಳನ್ನು ಉಲ್ಲೇಖಿಸಿ ಬಿಜೆಪಿಯ ಶಿವ್ ಪ್ರತಾಪ್ ಶುಕ್ಲಾ, ರೈಲು ಸ್ಫೋಟದಲ್ಲಿ ಪಾಕಿಸ್ತಾನ ಭಾಗಿಯಾಗಿದೆ ಎಂದರು.

ದಿಲ್ಲಿ ಹಾಗೂ ಪಾಕಿಸ್ತಾನದ ಲಾಹೋರ್ ನಡುವೆ ಸಂಚರಿಸುತ್ತಿದ್ದ ರೈಲಿನಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪಾದ ಲಷ್ಕರೆ ತಯ್ಯಬ ಹಾಗೂ ಸಿಮಿ ಜಂಟಿಯಾಗಿ ಬಾಂಬ್ ಸ್ಫೋಟ ನಡೆಸಿದೆ ಎಂದು ಅವರು ಹೇಳಿದರು.

 ಆದರೂ, ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ಯುಪಿಎ ಸರಕಾರ ಹಿಂದೂ ಭಯೋತ್ಪಾದನೆ ಎಂದು ಹೇಳಿತು. ಹಿಂದೂಗಳು ಭಯೋತ್ಪಾದರಲ್ಲ ಎಂದು ಸೂಚಿಸಿದ ಅವರು, ಯುಪಿಎ ಸರಕಾರವು ದೇಶಕ್ಕೆ ದ್ರೋಹ ಎಸಗಿದೆ ಎಂದರು.

ಈ ವಿಚಾರವನ್ನು ಬೆಂಬಲಿಸಿದ ಸ್ವಾಮಿ, ವಿಡಿಯೋದಲ್ಲಿರುವುದ ಸತ್ಯವೇ ಎಂಬುದನ್ನು ಅರಿಯಲು ಇದು ತಕ್ಕ ಸಮಯ. ಈ ಬಗ್ಗೆ ಸರಕಾರ ಉತ್ತರ ನೀಡಬೇಕು ಎಂದರು.

 ಕೆಲವು ಅಂಶಗಳನ್ನು ಹೇಳುತ್ತಿದ್ದಂತೆ ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್, ಇದು ಸ್ಫೋಟದ ಅಪರಾಧಿಗಳನ್ನು ರಕ್ಷಿಸುವ ಪ್ರಯತ್ನ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News