ಟ್ರಂಪ್ ಆದೇಶಿಸಿದರೆ ಮುಂದಿನ ವಾರ ಚೀನಾ ಮೇಲೆ ಪರಮಾಣು ದಾಳಿ!

Update: 2017-07-27 16:54 GMT

ಕ್ಯಾನ್‌ಬೆರ, ಜು. 27: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದರೆ ಮುಂದಿನ ವಾರ ಚೀನಾದ ಮೇಲೆ ಪರಮಾಣು ದಾಳಿ ನಡೆಸುವುದಾಗಿ ಅಮೆರಿಕದ ಪೆಸಿಫಿಕ್ ಫ್ಲೀಟ್ ಕಮಾಂಡರ್ ಅಡ್ಮಿರಲ್ ಸ್ಕಾಟ್ ಸ್ವಿಫ್ಟ್ ಗುರುವಾರ ಹೇಳಿದ್ದಾರೆ.

 ಆಸ್ಟ್ರೇಲಿಯ ಕರಾವಳಿಯಲ್ಲಿ ಬೃಹತ್ ಜಂಟಿ ಅಮೆರಿಕ-ಆಸ್ಟ್ರೇಲಿಯ ಸೇನಾ ಅಭ್ಯಾಸ ನಡೆದ ಬಳಿಕ, ಆಸ್ಟ್ರೇಲಿಯನ್ ನ್ಯಾಶನಲ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಭದ್ರತಾ ಸಮ್ಮೇಳನದಲ್ಲಿ ಸಭಿಕರೊಬ್ಬರು ಕೇಳಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

ಟ್ರಂಪ್ ಆದೇಶಿಸಿದರೆ ಮುಂದಿನ ವಾರ ನೀವು ಚೀನಾದ ಮೇಲೆ ಪರಮಾಣು ದಾಳಿ ನಡೆಸುವಿರೇ ಎಂಬುದಾಗಿ ಸಭಿಕರೊಬ್ಬರು ಕೇಳಿದಾಗ, ‘‘ಇದಕ್ಕೆ ನನ್ನ ಉತ್ತರ: ಹೌದು’’ ಎಂದು ಸ್ವಿಫ್ಟ್ ಉತ್ತರಿಸಿದರು.

‘‘ವಿದೇಶೀಯರಾಗಲಿ, ದೇಶೀಯರಾಗಲಿ ಎಲ್ಲ ಶತ್ರುಗಳ ವಿರುದ್ಧ ಅಮೆರಿಕದ ಸಂವಿಧಾನವನ್ನು ಕಾಪಾಡುವ, ಅಧಿಕಾರಿಗಳಿಗೆ ವಿಧೇಯರಾಗುವ ಮತ್ತು ಅಮೆರಿಕದ ಅಧ್ಯಕ್ಷರನ್ನು ಸೇನಾಪತಿ ಹಾಗೂ ಮುಖ್ಯಸ್ಥರನ್ನಾಗಿ ಪರಿಗಣಿಸುವ ಪ್ರತಿಜ್ಞೆಯನ್ನು ಅಮೆರಿಕ ಸೇನೆಯ ಪ್ರತಿಯೊಬ್ಬ ಸದಸ್ಯನೂ ಸ್ವೀಕರಿಸಿದ್ದಾರೆ’’ ಎಂದರು.

ಸೇನೆಯ ಮೇಲೆ ನಾಗರಿಕ ಸರಕಾರದ ನಿಯಂತ್ರಣ ಹೊಂದಿರುವುದನ್ನು ಸ್ವಿಫ್ಟ್‌ರ ಹೇಳಿಕೆ ದೃಢೀಕರಿಸಿದೆ ಎಂದು ಬಳಿಕ ಪೆಸಿಫಿಕ್ ಫ್ಲೀಟ್ ವಕ್ತಾರ ಕ್ಯಾಪ್ಟನ್ ಚಾರ್ಲೀ ಬ್ರೌನ್ ಹೇಳಿದರು.

ಎರಡು ವರ್ಷಗಳಿಗೊಮ್ಮೆ ನಡೆಯುವ ಸ್ಯಾಬರ್ ಯುದ್ಧಾಭ್ಯಾಸದಲ್ಲಿ ವಿಮಾನವಾಹಕ ನೌಕೆ ಯುಎಸ್‌ಎಸ್ ರೊನಾಲ್ಡ್ ರೇಗನ್ ಸೇರಿದಂತೆ 36 ಯುದ್ಧ ನೌಕೆಗಳು, 220 ವಿಮಾನಗಳು ಮತ್ತು 33,000 ಸೇನಾ ಸಿಬ್ಬಂದಿ ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News