ಅಂಬೇಡ್ಕರ್ ಮತ್ತು ಅಂಬಾನಿ, ಅದಾನಿ

Update: 2017-07-27 18:53 GMT

ಇಂತಹ ಹೊತ್ತಿನಲ್ಲಿ ಅಪಾಯವನ್ನು ಸರಿಯಾಗಿ ಮುಂದಿಡುವ ಬದಲು, ಅದರೊಳಗೇ ನಾವೂ ಬೀಳಬೇಕು ಎಂದು ಹೇಳುವುದರ ಪರಿಣಾಮ ಏನಾಗಿರುತ್ತದೆ? ಅಂಬಾನಿ, ಅದಾನಿಯ ರೀತಿಯಾಗಬೇಕು ಎಂದು ಹೇಳುವುದರಿಂದ, ಆ ರೀತಿ ಆಗಲು ಸಾಧ್ಯವಿಲ್ಲ. ಬದಲಿಗೆ ಅಂಬಾನಿ ಅದಾನಿ ಇರುವ ರೀತಿಗೆ, ಅವರು ಬೆಳೆದು ಬಂದ ರೀತಿಗೆ ಸಮರ್ಥನೆ ಒದಗಿಸಿದಂತಾಗುತ್ತದೆ.


ಭಾಗ-2
ಆದರೆ, ಈ ಕಾರ್ಪೊರೇಟ್ ವ್ಯವಸ್ಥೆ ಮತ್ತು ಬ್ರಾಹ್ಮಣಶಾಹಿ ಎಂಬುದು ಪರಸ್ಪರ ವಿರುದ್ಧ ಹಿತಾಸಕ್ತಿಗಳನ್ನು ಹೊಂದಿರುವ ಅಂಶಗಳಾ, ಪೂರಕವಾಗಿವೆಯಾ? ಜಾಗತೀಕರಣದ ಆರಂಭದ ದಿನಗಳಲ್ಲಿ ಇವೆರಡರ ನಡುವೆ ವೈರುಧ್ಯವಿದೆಯೆಂತಲೂ, ಅದು ದಮನಿತ ಸಮುದಾಯಗಳ ಸಬಲೀಕರಣಕ್ಕೆ ಪೂರಕ ಅಂಶವಾಗಿ ಒದಗಿಬರಲಿದೆಯೆಂತಲೂ ಪ್ರಬಲ ಪ್ರತಿಪಾದನೆಗಳು ನಡೆದಿದ್ದವು. ಎರಡೂವರೆ ದಶಕಗಳ ಜಾಗತೀಕರಣ ಪ್ರಕ್ರಿಯೆಯು ಈಗ ಸ್ಪಷ್ಟವಾದ ಫಲಿತಾಂಶಗಳನ್ನು ನಮ್ಮ ಮುಂದಿಟ್ಟಿದೆ. ಬ್ರಾಹ್ಮಣಶಾಹಿಯ ಪುನರುತ್ಥಾನಕ್ಕೆ ಅದು ಹುಲುಸಾದ ತಳಹದಿಯನ್ನು ಒದಗಿಸಿತು.

ಇದುವರೆಗೆ ಇದ್ದ ಸಾಮಾಜಿಕ, ಆರ್ಥಿಕ ಅಸಮಾನತೆಗಳನ್ನು ಇನ್ನೂ ಹೆಚ್ಚಿಸಿದ್ದಲ್ಲದೆ, ಡಿಜಿಟಲ್ ಡಿವೈಡ್ ಥರದ ಹೊಸ ಅಸಮಾನತೆ ಗಳನ್ನೂ ಹುಟ್ಟಿ ಹಾಕಿದೆ. ಅಸಮಾನತೆಯ ಪಾತಾಳದಲ್ಲಿರುವ ಸಮುದಾಯ ಗಳು ಅಲ್ಲೇ ಇರುವಾಗಲೇ, ಕಾರ್ಪೊರೇಟ್ ವ್ಯವಸ್ಥೆಯ ಜೊತೆಯಲ್ಲಿ ಬ್ರಾಹ್ಮಣಶಾಹಿ ಪ್ರತಿಪಾದಕರೂ ನಾಗಾಲೋಟದಲ್ಲಿ ಆಗಸಕ್ಕೆ ನೆಗೆಯುತ್ತಿದ್ದಾರೆ. ಕಳೆದ 15 ವರ್ಷಗಳ ಇಂಟರ್‌ನೆಟ್‌ಯುಗ ಪ್ರಪಂಚ ವನ್ನು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಆರ್ಥಿಕವಾಗಿ ಹಲವು ರೀತಿಯಲ್ಲಿ ಬದಲಿಸಿದ್ದರೆ, ಅಂಬಾನಿಯ 5ಜಿ ನೆಟ್‌ವರ್ಕ್ ಒಂದೇ ಹಲವು ಬಗೆಯ ಸ್ಥಿತ್ಯಂತರಗಳಿಗೆ ದಾರಿ ಮಾಡಲಿದೆಯೆಂದು ತಜ್ಞರು ಹೇಳುತ್ತಿದ್ದಾರೆ.

ಈ ಎಲ್ಲಾ ಬದಲಾವಣೆಗಳು ಅಸಮಾನತೆಯನ್ನು ಹೆಚ್ಚಿಸುತ್ತಿವೆ. ಆ ಜಾಗದಲ್ಲಿ ಅಂಬಾನಿಯ ಬದಲು ದಲಿತ ಸಮುದಾಯದ ಮತ್ತೊಬ್ಬ ವ್ಯಕ್ತಿ ಇದ್ದರೆ, ಆತ ಅಥವಾ ಆಕೆಯೂ ಅಮಾನವೀಯ ಸ್ಪರ್ಧೆಗೆ ಇಳಿಯದಿದ್ದರೆ ಉಳಿದುಕೊಳ್ಳುವುದು ಸಾಧ್ಯವಿಲ್ಲ. ಈ ಅಂಬಾನಿ ಅದಾನಿಗಳು ಸೃಷ್ಟಿಯಾಗಿರುವುದಾದರೂ ಹೇಗೆ? ಅವರು ಬೆಳೆದು ನಿಂತಿರುವುದು ವ್ಯವಹಾರದ ಚಾಕಚಕ್ಯತೆಗಳಿಂದ ಅಲ್ಲ. ಅಪಾರವಾದ ಕ್ರೌರ್ಯ, ಸರಕಾರಿ ಬೊಕ್ಕಸಕ್ಕೆ ಕನ್ನ, ಸಂವಿಧಾನದ ಮೂಲಭೂತ ಆಶಯಗಳ ಬುಡಮೇಲು ಇವುಗಳೊಂದಿಗೆ ಬೆಳೆದಿದ್ದಾರೆ. ಅದಕ್ಕೆ ಬ್ರಾಹ್ಮಣವಾದದ ಪೂರಕ ಸಹಾಯ ಒದಗಿ ಬಂದಿದೆ. ಆರ್ಥಿಕ ಅಸಮಾನತೆ ಮತ್ತಷ್ಟು ಹೆಚ್ಚಿದೆ. ಜಾತಿ ವ್ಯವಸ್ಥೆ ಗಟ್ಟಿಯಾಗಿ ಉಳಿದುಕೊಂಡು ಬರಲು ಅದರ ಪುನರುತ್ಪತ್ತಿ ಆಗಲು, ಈ ಆರ್ಥಿಕ ಅಸಮಾನತೆಯೂ ಕಾರಣವಾಗಿದೆ.

ಇದೇ ಸಂದರ್ಭದಲ್ಲಿ ಶೋಷಿತ ಸಮುದಾಯಗಳಿಂದಲೂ ಒಂದು ಸಣ್ಣ ವಿಭಾಗವು ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ದಿಮೆಗಳನ್ನು ನಡೆಸುವ ಹಂತಕ್ಕೆ ಬಂದಿದೆೆ. ಇವರೆಲ್ಲ ಮುಂದಕ್ಕೂ ಉಳಿದುಕೊಳ್ಳುತ್ತಾರೆಯೇ? ಎಲ್ಲ ಬಗೆಯ ಸಣ್ಣ ಮೀನುಗಳನ್ನು (ಇವತ್ತು ದೊಡ್ಡ ಮೀನುಗಳನ್ನೂ ತಿಂದು ಹಾಕಲಾಗುತ್ತಿದೆ) ತಿನ್ನಬೇಕೆಂದು ಅಂಬಾನಿ ಅದಾನಿ ಥರದವರು ಹೊರಟಿದ್ದಾರೆ. ಕ್ಷಮಿಸಿ, ತಿಂದು ಹಾಕುವ ಪ್ರಕ್ರಿಯೆ ಶುರುವಾಗಿ ಎಷ್ಟೋ ಕಾಲವಾಗಿದೆ. ಆ ರೀತಿ ಎಲ್ಲರನ್ನೂ ತಿನ್ನುವ ಕೆಲಸವನ್ನು ಮಾರ್ವಾಡಿ, ಸಿಂಧಿ, ಬನಿಯಾಗಳು ಮಾತ್ರ ಏಕೆ ಮಾಡಬೇಕು? ನಮ್ಮವರೂ ಸೇರಿದಂತೆ ಎಲ್ಲರನ್ನೂ ತಿನ್ನುವ ಕೆಲಸ ನಾವೇ ಮಾಡಬೇಕು ಎಂದು ಹೇಳೋಣವೇ? ಬ್ರಾಹ್ಮಣವಾದ ಮತ್ತು ಬಂಡವಾಳವಾದಗಳೆರಡೂ ನಮ್ಮ ಶತ್ರುಗಳು ಎಂದು ಬಾಬಾಸಾಹೇಬರು ಹೇಳಿದ್ದನ್ನೂ ತಿರುಚುತ್ತಾ, ಬಂಡವಾಳವಾದವನ್ನು ಸಮರ್ಥಿಸಲು ಕೆಲವರು ಹೊರಟಿರುವುದು ಆಘಾತಕಾರಿಯಾಗಿದೆ.

ಚಳವಳಿ ಹಾಗೂ ಸಂಸದೀಯ ಪ್ರಜಾತಂತ್ರದ ಓಟಿನ ರಾಜಕಾರಣದ ಕಾರಣದಿಂದ ಶೋಷಿತ ಸಮುದಾಯಗಳ ನಡುವಿನಿಂದಲೇ ಒಂದು ಮಧ್ಯಮ ವರ್ಗ ಹುಟ್ಟಿ ಬರಲು ಆರಂಭವಾಯಿತು. ಶಿಕ್ಷಣ ಪಡೆದುಕೊಂಡು, ಸರಕಾರದ ಕೆಲವು ಸಣ್ಣ ಪುಟ್ಟ ಸೌಲಭ್ಯಗಳನ್ನು ಬಳಸಿಕೊಂಡು ಮೇಲೆದ್ದು ಬಂದ ಈ ವರ್ಗವು ಇನ್ನೂ ಮೇಲೆ ಬರಲು ದಾರಿ ಹುಡುಕುತ್ತಿತ್ತು. ಆದರೆ, ಇದುವರೆಗೆ ಸಿಕ್ಕ ಅವಕಾಶಗಳನ್ನೂ ನಿಧಾನಕ್ಕೆ ಇಲ್ಲವಾಗಿಸುತ್ತಿರುವುದು ಬಂಡವಾಳವಾದ ಪ್ರೇರಿತ ಜಾಗತೀಕರಣ. ಅದಕ್ಕೆ ಬೇಕಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮರ್ಥನೆಯನ್ನು ಒದಗಿಸುತ್ತಿರುವುದು ಬ್ರಾಹ್ಮಣವಾದವಾಗಿದೆ.

ಇಂತಹ ಹೊತ್ತಿನಲ್ಲಿ ಅಪಾಯವನ್ನು ಸರಿಯಾಗಿ ಮುಂದಿಡುವ ಬದಲು, ಅದರೊಳಗೇ ನಾವೂ ಬೀಳಬೇಕು ಎಂದು ಹೇಳುವುದರ ಪರಿಣಾಮ ಏನಾಗಿರುತ್ತದೆ? ಅಂಬಾನಿ, ಅದಾನಿಯ ರೀತಿಯಾಗಬೇಕು ಎಂದು ಹೇಳುವುದರಿಂದ, ಆ ರೀತಿ ಆಗಲು ಸಾಧ್ಯವಿಲ್ಲ. ಬದಲಿಗೆ ಅಂಬಾನಿ ಅದಾನಿ ಇರುವ ರೀತಿಗೆ, ಅವರು ಬೆಳೆದು ಬಂದ ರೀತಿಗೆ ಸಮರ್ಥನೆ ಒದಗಿಸಿದಂತಾಗುತ್ತದೆ. ಇದು ಶೋಷಿತ ಸಮುದಾಯಗಳ ವಿರುದ್ಧದ ಯಥಾಸ್ಥಿತಿಗೆ ಸಮರ್ಥನೆ ಒದಗಿಸುತ್ತದೆ. ಒಂದೆಡೆ ನಾವು ಸಮಾನ ಶಿಕ್ಷಣ ನೀತಿಗಾಗಿ ಕೇಳುವುದು, ಇನ್ನೊಂದೆಡೆ ಸಮಾನ ಶಿಕ್ಷಣ-ಎಲ್ಲರಿಗೂ ಆರೋಗ್ಯ-ಘನತೆಯುಳ್ಳ ಬದುಕು ಇತ್ಯಾದಿಗಳಿಗೆ ವಿರುದ್ಧವಾದ ಬಂಡವಾಳಶಾಹಿ ನೀತಿಗೆ ಪ್ರೋತ್ಸಾಹಕರವಾಗಿ ನಡೆದು ಕೊಳ್ಳುವುದು ಸರಿಯೇ? ಈ ದೇಶದ ಶಿಕ್ಷಣ ಕ್ಷೇತ್ರಗಳ ಖಾಸಗೀಕರಣಕ್ಕೆ ತಳಹದಿಯಾದ ಬಿರ್ಲಾ-ಅಂಬಾನಿ ವರದಿಯನ್ನು ಸಿದ್ಧಪಡಿಸಿದ್ದು ಇದೇ ಅಂಬಾನಿಯಲ್ಲವೇ? ಆ ಜಾಗದಲ್ಲಿ ಒಂದು ಶೋಷಿತ ಸಮುದಾಯಕ್ಕೆ ಸೇರಿದ್ದ ವ್ಯಕ್ತಿ ಇದ್ದಿದ್ದರೆ ಬೇರೆ ರೀತಿಯ ವರದಿ ಬರುತ್ತಿತ್ತು ಎಂದು ಕೆಲವರು ಹೇಳಬಹುದು.

ಹೌದು, ಬಿರ್ಲಾ ಅಂಬಾನಿ ಸಮಿತಿಯ ಬದಲಾಗಿ ಸುಖದೇವ್‌ಥೋರಟ್, ಆನಂದ್ ತೇಲ್‌ತುಂಬ್ಡೆಯವರ ಸಮಿತಿ ಇದ್ದಿದ್ದರೆ ಅದು ಈ ದೇಶದ ಚಿತ್ರಣವನ್ನೇ ಬದಲಿಸಬಲ್ಲ ಶಿಕ್ಷಣ ನೀತಿಗೆ ಕಾರಣವಾಗುತ್ತಿತ್ತು. ಆದರೆ ಆ ಶೋಷಿತ ಹಿನ್ನೆಲೆಯ ವ್ಯಕ್ತಿಯೂ ಅಂಬಾನಿಯ ರೀತಿಯ ಉದ್ದಿಮೆದಾರನೇ ಆಗಿದ್ದಲ್ಲಿ ಅದು ಆಗುತ್ತಿರಲಿಲ್ಲ. ಏಕೆಂದರೆ, ತನ್ನ ಕಾರ್ಪೊರೇಟ್ ಸಾಮ್ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ‘ಅಂಬಾನಿ ಅದಾನಿಯಂತಹ’ ಉದ್ದಿಮೆದಾರ ವರದಿ ನೀಡುತ್ತಿರಲಿಲ್ಲ.

ಶಿಕ್ಷಣಕ್ಕೆ ಸಂಬಂಧಿಸಿದ ಬಿರ್ಲಾ-ಅಂಬಾನಿ ವರದಿಗಳು ಮತ್ತು ನೀತಿಗಳು ನೂರೆಂಟು ಬಗೆಯಲ್ಲಿ ಜಾರಿಗೆ ಬರದೆ ಅಂಬಾನಿ ಅದಾನಿಯ ರೀತಿಯ ಕೊಳಕು ಕ್ರೋನಿ ಬಂಡವಾಳಿಗರು ಸೃಷ್ಟಿಯೇ ಆಗುತ್ತಿರಲಿಲ್ಲ. ದೇಶದ ಜನಸಾಮಾನ್ಯರಿಗೆ ಸೇರಿದ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯದೇ ಅಂತಹವರು ಹುಟ್ಟಿಕೊಳ್ಳುವುದೂ ಆಗುವುದಿಲ್ಲ. ಅವರು ಯಾವುದೇ ಸಮುದಾಯಕ್ಕೆ ಸೇರಿದ್ದರೂ ಸಹ ಮತ್ತು ಇದನ್ನು ಬಾಬಾಸಾಹೇಬರು ತಮ್ಮ ಕೈಯಾರೆ ಬರೆದ ರಾಜ್ಯ ನಿರ್ದೇಶನ ತತ್ವಗಳ ಕಲಂ 39ಸಿ ವಿರೋಧಿ ಸುತ್ತದೆ. ಕಲಂ 39 ಸಿ ಹೀಗೆ ಹೇಳುತ್ತದೆ. ''That the operation of economic system does not result in the concentration of wealth and means of production to the common detriment''.

ಇಂತಹ ನೂರಾರು ಮೌಲ್ಯಗಳು ಮತ್ತು ಸಾಂವಿಧಾನಿಕ ಆಶಯಗಳ ವಿರುದ್ಧದ ನೀತಿಗಳು ಮತ್ತು ಬೆಳವಣಿಗೆಗಳ ಪ್ರತೀಕವೇ ಅಂಬಾನಿ ಮತ್ತು ಅದಾನಿ. ಹೀಗಿರುವಾಗ ಇಂದು ಈ ದೇಶದಲ್ಲಿ ಈ ಎರಡು ಹೆಸರುಗಳು ಜನಸಾಮಾನ್ಯರಲ್ಲಿ ಹುಟ್ಟಿಸಬೇಕಾದ, ಹುಟ್ಟಿಸಬಹುದಾದ ಅಸಹ್ಯ ಎಂಥದ್ದಿರಬಹುದು? ಇಂಥವರನ್ನು ನಾವು ರೋಲ್ ಮಾಡೆಲ್‌ಗಳಾಗಿ ಸ್ವೀಕರಿಸಬೇಕೇ?

ಈ ಚರ್ಚೆ ಬಂದಾಗ ಕೆಲವು ಗೆಳೆಯರು ಅಮೆರಿಕದ ಉದಾಹರಣೆ ನೀಡುತ್ತಾರೆ. ‘ಅಲ್ಲಿ ನೋಡಿ, ನೀವು ಬಂಡವಾಳಶಾಹಿಗಳೆಂದು ಹೇಳುವ ದೇಶದಲ್ಲೇ ಕಪ್ಪುಜನರಿಗೆ ಎಷ್ಟೆಲ್ಲಾ ಸಕಾರಾತ್ಮಕ ಅನುಕೂಲಗಳನ್ನು ಮಾಡಿಕೊಟ್ಟಿದ್ದಾರೆ’ ಎಂಬುದು ಅವರ ಸಮರ್ಥನೆ. ಇಂತಹುದೇ ಕ್ರಮಗಳನ್ನೂ ಈ ದೇಶದಲ್ಲೂ ಮಾಡಿಕೊಡಲಾಗಿದೆ. ಶೋಷಿತ ಸಮುದಾಯಗಳ ಚಳವಳಿ ಮತ್ತು ಅದು ಸಂಸದೀಯ ಪ್ರಜಾತಂತ್ರದಲ್ಲಿ ಓಟಿರುವವರಿಗೆ ಚುನಾವಣೆಯ ಸಂದರ್ಭದಲ್ಲಿ ತಂದುಕೊಡುವ ಶಕ್ತಿಯ ಕಾರಣದಿಂದ ಇದು ಆಗಿದೆ. ನಮ್ಮಲ್ಲೂ ಈ ಸಮುದಾಯಗಳ ಸ್ಥಿತಿ ಶೋಚನೀಯವಾಗಿದೆ; ಅಮೆರಿಕದಲ್ಲೂ ಹಾಗೆಯೇ ಇದೆ. ಅದನ್ನೇ ಮೊನ್ನೆ ಮಾರ್ಟಿನ್ ಲೂಥರ್ ಕಿಂಗ್ 3 ಹೇಳಿದ್ದು.

ಇವತ್ತಿನ ವಿದ್ಯಮಾನಗಳನ್ನು ಅಷ್ಟಾಗಿ ಅರಿಯದ ಸಾಮಾನ್ಯ ವ್ಯಕ್ತಿಯೊಬ್ಬರು ‘ಅಂಬಾನಿ, ಅದಾನಿ’ ಮಾತನ್ನು ಆಡಿದ್ದರೆ ಅಷ್ಟು ತೊಂದರೆಯಿರಲಿಲ್ಲ. ಇದನ್ನು ಆಡಿದವರು ವಿಶ್ವವಿದ್ಯಾನಿಲಯದ ಪ್ರೊಫೆಸರ್. ಈ ಸಮಾವೇಶದಲ್ಲಿ ಒಬ್ಬರು ಪ್ರೊಫೆಸರ್ ಆಡಿದ ಮಾತಿಗಾಗಿ ಮಾತ್ರ ಈ ಚರ್ಚೆಯನ್ನು ನಾನು ಎತ್ತಿಲ್ಲ. ಜಾಗತೀಕರಣದ ದುಷ್ಪರಿಣಾಮಗಳನ್ನು ಮುಂದಾಗಿ ಕಂಡು ಜನರನ್ನು ಎಚ್ಚರಿಸಬೇಕಿದ್ದ ಎಷ್ಟೋ ಬುದ್ಧಿಜೀವಿಗಳು, ಅದು ಒಳ್ಳೆಯದು ಮಾಡುತ್ತದೆ ಎಂಬ ಭ್ರಮೆ ಗಳನ್ನು ಹುಟ್ಟಿಹಾಕಿದ್ದನ್ನು ಕಂಡಿದ್ದೇವೆ. ಇಂತಹವರು ಬೇಕಾದಷ್ಟು ಜನ ಇದ್ದಾರೆ.

ತಾನು ಈ ಮಾತುಗಳನ್ನು ಹೇಳಿದರೆ ಎದುರಿಗಿರುವವರಿಗೆ ಖುಷಿಯಾಗುತ್ತದೆ ಎಂದು ಭಾವಿಸಿ, ಅವರಿಗೆ ಖುಷಿಯಾಗಬಹುದಾದ ಸಂಗತಿಗಳನ್ನು ಥಿಯರೈಸ್ ಮಾಡಿ ಹೇಳುವುದು; ಒಂದು ವೇಳೆ ವಿರೋಧ ಬಂದರೆ, ನಾನು ಹಾಗೆ ಹೇಳಿದ್ದಲ್ಲ ಎಂದು ಅಕಾಡಮಿಕ್ ಸಮರ್ಥನೆಗಳನ್ನು ಮುಂದಿ ಡುವುದನ್ನು ಮಾಡುವುದು ಅವರಿಗೆ ಸಲೀಸು. ಇಂತಹವರು ಕೇವಲ ಕಾಂಗ್ರೆಸ್ ಸರಕಾರ ಬಂದಾಗ ಮಾತ್ರ ಮಿಂಚುವುದಿಲ್ಲ; ಅವರು ಬಿಜೆಪಿ ಸರಕಾರದಲ್ಲೂ ‘ತಜ್ಞ’ರಾಗಿ ಮುಂದುವರಿಯುತ್ತಾರೆ. ಬಲಪಂಥೀಯರಿಗೂ ಸಮರ್ಥನೆ ಒದಗಿಸುತ್ತಾರೆ. ಈ ಸಮ್ಮೇಳನದ ಒಟ್ಟಾರೆ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಇಂತಹ ದೊಡ್ಡ ಅವಕಾಶವಾದಿಗಳ ಚಿಂತನೆ ಹಾಗೂ ಬದುಕಿನ ವೈರುಧ್ಯಗಳ ಕುರಿತು ಸರಿಯಾದ ವಿಮರ್ಶೆ ಆಗಬೇಕಿದೆ.

Writer - ಎಚ್.ವಿ.ವಾಸು

contributor

Editor - ಎಚ್.ವಿ.ವಾಸು

contributor

Similar News