ಇದು ಚೀನಾದ ಅತ್ಯಂತ ಶ್ರೀಮಂತ ಗ್ರಾಮ

Update: 2017-07-28 09:32 GMT

ನಾವೆಲ್ಲರೂ ಶ್ರೀಮಂತರಾಗುವ ಕನಸು ಕಾಣುತ್ತಲೇ ಇರುತ್ತೇವೆ. ಈಗಾಗಲೇ ಶ್ರೀಮಂತರಾಗಿರುವರು ಅದೃಷ್ಟವಂತರು ಬಿಡಿ. ಸರಕಾರವು ನಿಮಗೊಂದು ಫ್ಲಾಟ್, ಜೊತೆಗೆ ಕಾರೊಂದನ್ನು ಉಡುಗೊರೆಯಾಗಿ ನೀಡಿ ನಿಮ್ಮ ಬ್ಯಾಂಕ್ ಖಾತೆಗೆ 85 ಲ.ರೂ.ಗಳನ್ನು ತುಂಬಿದರೆ ಹೇಗೆ......ಅಸಾಧ್ಯವೆಂದು ಅನಿಸುತ್ತದೆಯಲ್ಲವೇ?

ಚೀನಾದಲ್ಲೊಂದು ಗ್ರಾಮವಿದೆ. ಹುಆಕ್ಸಿ ಹೆಸರಿನ ಈ ಗ್ರಾಮ ತನ್ನ ನಿವಾಸಿಗಳಿಗೆ ಈ ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ. ಇಲ್ಲಿಯ ಪ್ರತಿಯೊಬ್ಬ ನಿವಾಸಿಯ ಬ್ಯಾಂಕ್ ಖಾತೆಯಲ್ಲಿಯೂ 85 ಲ.ರೂ ಅಥವಾ ಅದಕ್ಕಿಂತ ಹೆಚ್ಚು ಹಣವಿದೆ.

ಕಲ್ಪನಾಲೋಕದಲ್ಲಿ ಮಾತ್ರ ಸಾಧ್ಯವೆಂದು ಅನಿಸುವ ವಿಶ್ವದರ್ಜೆಯ ಐಷಾರಾಮ ಮತ್ತು ಸೌಲಭ್ಯಗಳು ಈ ಗ್ರಾಮದಲ್ಲಿವೆ.

ಈ ಗ್ರಾಮದಲ್ಲಿ ಖಾಯಂ ಆಗಿ ಝಂಡಾ ಊರುವ ಆಸೆಯಾಗುತ್ತಿದೆಯೇ? ಮೊದಲು ಚೀನಾದ ಈ ಅತ್ಯಂತ ಶ್ರೀಮಂತ ಗ್ರಾಮ ಮತ್ತು ಅಲ್ಲಿಯ ನಿವಾಸಿಗಳಾಗಲು ಇರುವ ನಿಬಂಧನೆಗಳ ಬಗ್ಗೆ ಮೊದಲು ತಿಳಿದುಕೊಳ್ಳಿ.....

  1951ರಲ್ಲಿ ಸ್ಥಳೀಯ ಕಮ್ಯುನಿಸ್ಟ್ ಪಾರ್ಟಿಯ ಕಾರ್ಯದರ್ಶಿ ವು ರೆನಬೊ ಎಂಬಾತ ಈ ಗ್ರಾಮವನ್ನು ಸ್ಥಾಪಿಸಿದ್ದ. ಈ ಗ್ರಾಮದ ನಿವಾಸಿಗಳು ತಮ್ಮ ಬ್ಯಾಂಕ್ ಖಾತೆಗಳಲ್ಲಿ 85 ಲ.ರೂ ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಹೊಂದಿದ್ದಾರೆನ್ನಲಾಗಿದೆ. ಅವರು ಬಂಗಲೆ ಮತ್ತು ಕಾರು ಮಾಲಕರೂ ಹೌದು. ಅಂದ ಹಾಗೆ ಈ ಗ್ರಾಮದ ಜನಸಂಖ್ಯೆ ಕೇವಲ 2,000 ಮಾತ್ರ.

ಈ ಗ್ರಾಮದ ನಿವಾಸಿಯಾಗಲು ಅರ್ಹತೆ ಪಡೆದುಕೊಳ್ಳುವುದು ಸುಲಭವಲ್ಲ. ಈ ಅರ್ಹತೆ ಪಡೆದುಕೊಳ್ಳಲು ಬಯಸುವ ಯಾವುದೇ ವ್ಯಕ್ತಿ ಮೊದಲು ಇಲ್ಲಿರುವ ಯಾವುದಾದರೊಂದು ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕಾಗುತ್ತದೆ. ಉದ್ಯೋಗ ದೊರಕಿತೆಂದರೆ ಆತನ ಐಷಾರಾಮಿ ಜೀವನ ಆರಂಭವಾಗುತ್ತದೆ. ಆತನಿಗೆ ವಾಸಕ್ಕೆ ಬಂಗಲೆ ಮತ್ತು ಕಾರನ್ನು ಒದಗಿಸಲಾಗುತ್ತದೆ. ಇಷ್ಟಕ್ಕೇ ಮುಗಿಯಲಿಲ್ಲ....ಇಲ್ಲಿಯ ನಿವಾಸಿಗಳು ತಮ್ಮ ತಾಣಗಳಿಗೆ ತೆರಳಲು ಹೆಲಿಕಾಪ್ಟರ್‌ಗಳನ್ನು ಟ್ಯಾಕ್ಸಿಗಳಂತೆ ಬಳಸುತ್ತಾರೆ!

ಅಂದ ಹಾಗೆ ಸ್ವರ್ಗಸುಖವನ್ನು ಅನುಭವಿಸುವ ಇಲ್ಲಿಯ ನಿವಾಸಿಗಳಿಗೆ ಇನ್ನೊಂದು ಕಟ್ಟುಪಾಡೂ ಇದೆ. ಇಲ್ಲಿಯ ಯಾವುದೇ ನಿವಾಸಿ ಗ್ರಾಮವನ್ನು ತೊರೆಯಲು ಬಯಸಿದರೆ ಆತ ತನ್ನೆಲ್ಲ ಶ್ರೀಮಂತಿಕೆಯನ್ನು ಕಳೆದುಕೊಂಡು ಬಡವನಾಗುತ್ತಾನೆ.

ಹುಆಕ್ಸಿ ಚೀನಾದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಅತ್ಯಂತ ಯಶಸ್ವಿ ಗ್ರಾಮಗಳಲ್ಲೊಂದಾಗಿದ್ದು, ವರ್ಷಕ್ಕೆ ಮಿಲಿಯಾಂತರ ಡಾಲರ್‌ಗಳ ಆದಾಯವನ್ನು ಗಳಿಸುತ್ತದೆ. ಇಲ್ಲಿಯ ಸಮೃದ್ಧ ಉಕ್ಕಿನ ಕಾರ್ಖಾನೆಗಳು, ಜವಳಿ ಮತ್ತು ಸಿದ್ಧ ಉಡುಪುಗಳ ಉದ್ಯಮಗಳು ಗ್ರಾಮದ ಅಭಿವೃದ್ಧಿಗೆ ಕಾರಣವಾಗಿವೆ.

ಈ ಐಷಾರಾಮಿ ಗ್ರಾಮದ ವಿಸ್ತೀರ್ಣವನ್ನು ಹೇಗೆ ಅಳೆದರೂ ಒಂದು ಚದುರ ಕಿ.ಮೀ.ಮೀರುವುದಿಲ್ಲ. ನೀವು ನಂಬಲೇಬೇಕು...ಇಷ್ಟೊಂದು ಪುಟ್ಟ ಗ್ರಾಮ ಬ್ಯಾರಕ್ ಮಾದರಿಯ ಡಾರ್ಮಿಟರಿಗಳು, ಫ್ಯಾಕ್ಟರಿಗಳು ಮತ್ತು ನಿವಾಸಿಗಳಿಗಾಗಿ ಪಗೋಡಾ ಶೈಲಿಯ ಕಟ್ಟಡಗಳನ್ನು ಹೊಂದಿದೆ. ಐಷಾರಾಮದಲ್ಲಿ ಈ ಗ್ರಾಮವನ್ನು ದುಬೈಗೆ ಹೋಲಿಸಬಹುದಾಗಿದೆ.

ಇಂದಿನ ಆಧುನಿಕ ಯುಗದಲ್ಲಿ ಅಗತ್ಯವಾಗಿರುವ ಎಲ್ಲವೂ ಇಲ್ಲಿವೆ. ಇಲ್ಲಿಯ ಅತ್ಯಂತ ವಿಶೇಷವಾಗಿರುವ ‘ದಿ ಇಂಟರ್‌ನ್ಯಾಷನಲ್ ಲಕ್ಝುರಿ ಲಾಂಗ್ ವಿಷ್ ಹೋಟೆಲ್’ನಲ್ಲಿ 826ಕ್ಕೂ ಅಧಿಕ ಕೊಠಡಿಗಳಿವೆ. 16ಕ್ಕೂ ಹೆಚ್ಚು ಅಧ್ಯಕ್ಷೀಯ ಕೋಣೆಗಳಿವೆ. ಇಲ್ಲಿರುವ ಚಿನ್ನದ ಅಧ್ಯಕ್ಷೀಯ ಕೋಣೆಯಲ್ಲಿ ಒಂದು ರಾತ್ರಿ ಉಳಿದುಕೊಳ್ಳಲು 10 ಲಕ್ಷ ರೂ.ಗಳನ್ನು ಪಾವತಿಸಬೇಕಾಗುತ್ತದೆ.

 ಒಂದು ಚ.ಕಿ.ಮೀ.ಗೂ ಕಡಿಮೆ ವಿಸ್ತೀರ್ಣ ಹೊಂದಿದ್ದರೂ ಪ್ರವಾಸಿಗಳನ್ನು ಆಕರ್ಷಿಸುವ ಎಲ್ಲವೂ ಈ ಗ್ರಾಮದಲ್ಲಿವೆ. ಇಲ್ಲಿರುವ ಗಗನಚುಂಬಿ ಕಟ್ಟಡವೊಂದು ಗ್ರಾಮದ ಮುಕುಟಮಣಿಯಾಗಿದ್ದು, 72 ಅಂತಸ್ತುಗಳನ್ನು ಹೊಂದಿದೆ. ಇದನ್ನು ‘ಹ್ಯಾಂಗಿಂಗ್ ವಿಲೇಜ್ ಆಫ್ ಹುಆಕ್ಸಿ (ಹುಆಕ್ಸಿಯ ತೂಗಾಡುವ ಗ್ರಾಮ) ಎಂದು ಕರೆಯಲಾಗುತ್ತದೆ. ಇದು 328 ಮೀ.ಎತ್ತರವಿದ್ದು, ಪ್ಯಾರಿಸ್‌ನ ಪ್ರಸಿದ್ಧ ಐಫೆಲ್ ಟವರ್‌ಗಿಂತ ನಾಲ್ಕು ಮೀ.ಎತ್ತರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News