ಅಪ್ರಾಪ್ತ ವಯಸ್ಕ ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಅನುಮತಿಗೆ ಸುಪ್ರೀಂ ನಕಾರ

Update: 2017-07-28 14:38 GMT

ಹೊಸದಿಲ್ಲಿ,ಜು.28: 32 ವಾರಗಳ ಗರ್ಭಿಣಿಯಾಗಿರುವ 10ರ ಹರೆಯದ ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ. ಈ ಹಂತದಲ್ಲಿ ಗರ್ಭಪಾತವು ಬಾಲಕಿಗೆ ಅಪಾಯವನ್ನೊಡ್ಡುತ್ತದೆ ಎಂಬ ವೈದ್ಯಕೀಯ ವರದಿಯನ್ನು ಪರಿಗಣಿಸಿ ನ್ಯಾಯಾಲಯವು ಈ ನಿರ್ಧಾರವನ್ನು ಕೈಗೊಂಡಿತು.

ಅತ್ಯಾಚಾರ ಸಂತ್ರಸ್ತೆಗೆ ಈಗ ದೊರೆಯುತ್ತಿರುವ ವೈದ್ಯಕೀಯ ಕಾಳಜಿಯ ಬಗ್ಗೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ನ್ಯಾ.ವೈ.ವಿ.ಚಂದ್ರಚೂಡ ಅವರನ್ನೊಳ ಗೊಂಡ ಪೀಠವು ತೃಪ್ತಿಯನ್ನು ವ್ಯಕ್ತಪಡಿಸಿತು.

ಇಂತಹ ಪ್ರಕರಣಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ಮೊದಲೇ ಗರ್ಭಪಾತ ಮಾಡಿಸುವ ಸಾಧ್ಯತೆಗಳ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲು ಪ್ರತಿಯೊಂದು ರಾಜ್ಯದಲ್ಲಿ ಶಾಶ್ವತ ವೈದ್ಯಕೀಯ ಮಂಡಳಿ ಯನ್ನು ಸ್ಥಾಪಿಸುವ ತನ್ನ ಸಲಹೆಯನ್ನು ಪರಿಶೀಲಿಸುವಂತೆ ಪೀಠವು ನ್ಯಾಯಾಲಯದಲ್ಲಿ ಉಪಸ್ಥಿತರಿದ್ದ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರಿಗೆ ಸೂಚಿಸಿತು.

ಜು.18ರಂದು ಚಂಡಿಗಡ ಜಿಲ್ಲಾ ನ್ಯಾಯಾಲಯವು ಬಾಲಕಿಯ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಬಳಿಕ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾ ಗಿತ್ತು.

ವೈದ್ಯಕೀಯ ಗರ್ಭಪಾತ ಕಾಯ್ದೆಯಡಿ 20 ವಾರಗಳವರೆಗಿನ ಗರ್ಭವನ್ನು ತೆಗೆದು ಹಾಕಲು ನ್ಯಾಯಾಲಯಗಳು ಅವಕಾಶ ನೀಡುತ್ತವೆ. ಭ್ರೂಣವು ವಂಶವಾಹಿ ದೋಷವನ್ನು ಹೊಂದಿದ್ದರೆ ಈ ಕಾಲಮಿತಿಯಿಂದ ವಿನಾಯಿತಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News