ಕೇಂದ್ರ ಸಚಿವ ಸ್ಥಾನ ತಿರಸ್ಕರಿಸಿದ ಶರದ್ ಯಾದವ್, ಇಬ್ಭಾಗವಾಗುವತ್ತ ಜೆಡಿಯು ?
ಹೊಸದಿಲ್ಲಿ, ಜು. 28 : ಬಿಹಾರದಲ್ಲಿ ನಿತೀಶ್ ಕುಮಾರ್ ಹಠಾತ್ತನೆ ಆರ್ ಜೆಡಿ ಹಾಗು ಕಾಂಗ್ರೆಸ್ ಜೊತೆಗಿನ ಮಹಾಮೈತ್ರಿಯನ್ನು ಮುರಿದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿರುವ ಬೆನ್ನಲ್ಲೇ ಅವರ ಪಕ್ಷ ಜೆಡಿಯು ನಲ್ಲಿ ಬಂಡಾಯ ಸ್ಪೋಟಗೊಂಡಿದೆ. ನಿತೀಶ್ ರ ಬಿಜೆಪಿ ಮೈತ್ರೀಯನ್ನು ಪಕ್ಷದ ಮಾಜಿ ಅಧ್ಯಕ್ಷ ಹಾಗು ಹಿರಿಯ ನಾಯಕ ಶರದ್ ಯಾದವ್ ವಿರೋಧಿಸಿದ್ದಾರೆ.
ಮೂರ್ನಾಲ್ಕು ದಶಕಗಳ ಸಂಸದೀಯ ಅನುಭವ ಇರುವ ಹಿರಿಯ ನಾಯಕ ಹಾಗು ರಾಜ್ಯಸಭಾ ಸದಸ್ಯ ಶರದ್ ಯಾದವ್ "ಕೋಮು ಶಕ್ತಿಗಳೊಂದಿಗೆ" ಕೈ ಜೋಡಿಸುವುದನ್ನು ತಾನು ವಿರೋಧಿಸುವುದಾಗಿ ಶುಕ್ರವಾರ ಮಧ್ಯಾಹ್ನ ದಿ ವೈರ್ ಗೆ ನೀಡಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ತನ್ನಲ್ಲಿ ಮಾತುಕತೆಗೆ ಬಂದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನೀಡಿದ ಕೇಂದ್ರ ಸಚಿವ ಸ್ಥಾನವನ್ನು ಸ್ಪಷ್ಟವಾಗಿ ನಿರಾಕರಿಸಿದ ಶರದ್ , ತಾನು ಇನ್ನು ಮುಂದೆಯೂ ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯನ್ನು ವಿರೋಧಿಸಲಿದ್ದೇನೆ ಎಂದು ಹೇಳಿದ್ದಾರೆ. ಇದರೊಂದಿಗೆ ಜೆಡಿಯು ಇಬ್ಭಾಗವಾಗುವ ಸ್ಪಷ್ಟ ಲಕ್ಷಣಗಳು ಗೋಚರಿಸತೊಡಗಿವೆ.