ಬಿಜೆಪಿಯಿಂದ ಕುದುರೆ ವ್ಯಾಪಾರ: ಕಾಂಗ್ರೆಸ್ ಆರೋಪ
ಅಹ್ಮದಾಬಾದ್, ಜು. 28: ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದೆ ಹಾಗೂ ಹಣ, ತೋಳ್ಬಲ ಹಾಗೂ ರಾಜ್ಯದ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.
ಆಗಸ್ಟ್ 8ಕ್ಕೆ ರಾಜ್ಯ ಸಭೆ ಚುನಾವಣೆ ನಡೆಯಲಿದ್ದು, ಅದಕ್ಕಿಂತ ಮುನ್ನ 6 ಮಂದಿ ಶಾಸಕರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಏಕೈಕ ಅಭ್ಯರ್ಥಿ ಅಹ್ಮದ್ ಪಟೇಲ್ ಸಂಕಷ್ಟದಲ್ಲಿದೆ.
ಬಲ್ವಂತಿ ಸಿಂಹ್ ರಜ್‌ಪೂತ್, ತೇಜಶ್ರೀ ಪಟೇಲ್ ಹಾಗೂ ಪ್ರಹ್ಲಾದ್ ಪಟೇಲ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಮಂಗಳವಾರ ಬಿಜೆಪಿಗೆ ಸೇರಿದ್ದಾರೆ.
ಮಾನ್‌ಸಿಂಹ್‌ಚೌಹಾನ್, ಚನ್ನ ಚೌಧರಿ ಹಾಗೂ ರಾಮ್‌ಸಿಂಹ್ ಪರ್ಮಾರ್ ಶುಕ್ರವಾರ ತಮ್ಮ ರಾಜೀನಾಮೆಯನ್ನು ವಿಧಾನ ಸಭೆಯ ಸ್ಪೀಕರ್ ರಮಣಲಾಲ್ ವೋರಾ ಅವರಿಗೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿಯಾಗಿರುವ ಅಹ್ಮದ್ ಪಟೇಲ್‌ಗೆ ಈಗ 51 ಕಾಂಗ್ರೆಸ್ ಶಾಸಕರ ಪೈಕಿ ಕನಿಷ್ಠ 45 ಮತಗಳ ಅಗತ್ಯವಿದೆ. 6 ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ಬಳಿಕ ಈಗ ಗುಜರಾತ್ ವಿಧಾನಸಭೆಯಲ್ಲಿ 176 ಮಂದಿ ಉಳಿದುಕೊಂಡಿದ್ದಾರೆ.
ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಕಾಂಗ್ರೆಸ್ ಭಾರತದ ಚುನಾವಣಾ ಆಯೋಗವನ್ನು ಕೋರಿರುವುದಾಗಿ ಕಾಂಗ್ರೆಸ್‌ನ ವಕ್ತಾರ ರಣದೀಪ್ ಸೂರಜ್‌ವಾಲಾ ಅವರು ತಿಳಿಸಿದ್ದಾರೆ.
ಇದು ಪ್ರಜಾಪ್ರಭುತ್ವದ ಕಗ್ಗೊಲೆ ಹಾಗೂ ಸಾಂವಿಧಾನಿಕ ಕಾನೂನಿನ ಉಲ್ಲಂಘನೆ ಎಂದು ಅವರು ಹೇಳಿದ್ದಾರೆ.
ರೂ. 5ರಿಂದ 10 ಕೋಟಿ ರೂಪಾಯಿಗೆ ಆಹ್ವಾನ ಪಡೆದಿರುವವರು ಸೇರಿದಂತೆ ಪಕ್ಷದ ಮೂವರು ಶಾಸಕರನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸಂಪರ್ಕಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಸೂರಜ್‌ವಾಲಾ ಹೇಳಿದ್ದಾರೆ.