ನೋಟು ರದ್ದತಿಯಿಂದ ಸಗಟು ವಿತರಣೆ ವ್ಯವಸ್ಥೆಗೆ ಹಾನಿ: ಐಟಿಸಿ
ಕೋಲ್ಕತಾ, ಜು.28: ಸರಕಾರದ ನೋಟು ರದ್ದತಿ ಕ್ರಮದಿಂದ ಸಗಟು ವಿತರಣಾ ವ್ಯವಸ್ಥೆಗೆ ಭಾರೀ ಹಾನಿಯಾಗಿದೆ ಎಂದು ಐಟಿಸಿ ತಿಳಿಸಿದೆ.
ಸಂಸ್ಥೆಯ ಎಫ್‌ಎಂಸಿಜಿ (ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್- ತ್ವರಿತ ಮಾರಾಟವಾಗುವ ಗ್ರಾಹಕ ಉತ್ಪನ್ನಗಳು) ಉತ್ಪನ್ನಗಳ ಸಗಟು ವಿತರಣಾ ವ್ಯವಸ್ಥೆಗೆ ನೋಟು ರದ್ದತಿಯಿಂದ ತೊಡಕಾಗಿದೆ. ಸಂಸ್ಥೆಯ ಎಫ್‌ಎಂಸಿಜಿ ಉತ್ಪನ್ನಗಳು ಕೆಲವು ಅಂಗಡಿಗಳಲ್ಲಿ ಗ್ರಾಹಕರಿಗೆ ದೊರೆಯುತ್ತಿಲ್ಲ ಎಂದು ಐಟಿಸಿಯ ಸಿಇಒ ಸಂಜೀವ್ ಪುರಿ ತಿಳಿಸಿದ್ದಾರೆ.
ಸೂಪರ್‌ಮಾರ್ಕೆಟ್‌ಗಳಲ್ಲಿ ಶಾಂಪೂ, ಸಾಬೂನುಗಳು, ಬಿಸ್ಕಿಟ್, ಸುಗಂಧದೃವ್ಯ, ಪ್ಯಾಕ್ ಮಾಡಲ್ಪಟ್ಟ ವಸ್ತುಗಳು.. ಹೀಗೆ ವಿವಿಧ ಐಟಿಸಿಯ ಎಫ್‌ಎಂಸಿಜಿ ಉತ್ಪನ್ನಗಳನ್ನು ಪಡೆಯಲು ಕಷ್ಟವಾಗಿದೆ ಎಂದು ಕಂಪನಿಯ ಷೇರುದಾರರು ಅತೃಪ್ತಿ ಸೂಚಿಸಿದ್ದಾರೆ. ಅಲ್ಲದೆ ಸಿಗರೇಟ್ ಮೇಲೆ ಅಧಿಕ ತೆರಿಗೆ ವಿಧಿಸಿರುವ ಬಗ್ಗೆ ಸಂಜೀವ್ ಪುರಿ ಕಳವಳ ಸೂಚಿಸಿದ್ದಾರೆ. ಇದು ಸಿಗರೇಟ್‌ನ ಕಳ್ಳಸಾಗಣೆಗೆ ದಾರಿ ಮಾಡಿಕೊಡಲಿದೆ. ಅಲ್ಲದೆ ಇತರ ತಂಬಾಕು ಉತ್ಪನ್ನಗಳತ್ತ ಗ್ರಾಹಕರ ಒಲವು ಬದಲಾಗುವ ಸಾಧ್ಯತೆಯಿದೆ ಎಂದ ಅವರು, ಹೋಟೆಲ್ ಉದ್ಯಮ ಏರುಗತಿಯಲ್ಲಿ ಸಾಗಲಿದೆ ಎಂದಿದ್ದಾರೆ. ಗುವಾಹಟಿಯಲ್ಲಿ ಐಟಿಸಿಯ ಸಮಗ್ರ ಗ್ರಾಹಕ ಉತ್ಪನ್ನಗಳ ಕಾರ್ಖಾನೆ ಇತ್ತೀಚೆಗೆ ಕಾರ್ಯಾರಂಭ ಮಾಡಿದೆ.