ಕಿರಿಕ್ ಪಾರ್ಟಿಗೆ 200ರ ಸಂಭ್ರಮ

Update: 2017-07-28 17:52 GMT

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ‘ಕಿರಿಕ್ ಪಾರ್ಟಿ’ ಚಿತ್ರ ತಂಡಕ್ಕೆ ಈಗ ಹಬ್ಬದ ಸಡಗರ. ಹೌದು, ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಗೆಲುವನ್ನುಕಂಡಿರುವ ಈ ಚಿತ್ರ ಇದೀಗ ಚಿತ್ರಮಂದಿರಗಳಲ್ಲಿ 200 ದಿನಗಳ ಪ್ರದರ್ಶನವನ್ನು ಕಾಣುವ ಮೂಲಕ ಇನ್ನೊಂದು ಮೈಲುಗಲ್ಲು ಸ್ಥಾಪಿಸಿದೆ. ಚಿತ್ರದ 200 ದಿನಗಳ ಪ್ರದರ್ಶನ ಸಂಭ್ರಮಾಚರಣೆಯ ವೇಳೆ ಚಿತ್ರತಂಡ ವಿಶೇಷ ಪೋಸ್ಟರ್ ಒಂದನ್ನು ವಿನ್ಯಾಸಗೊಳಿಸಿದೆ.
ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಹಾಗೂ ಸಂಯುಕ್ತ ಹೆಗ್ಡೆ ಅಭಿನಯದ ಈ ಚಿತ್ರವು ಮಾಸ್, ಕ್ಲಾಸ್ ಪ್ರೇಕ್ಷಕರೆಲ್ಲರ ಮನಗೆಲ್ಲುವಲ್ಲಿ ಸಫಲವಾಗಿದೆ. ಪ್ರಚಂಡ ಯಶಸ್ಸಿನ ಜೊತೆಗೆ ಕಿರಿಕ್‌ಪಾರ್ಟಿಯ ಬುಟ್ಟಿಗೆ ಪ್ರಶಸ್ತಿಗಳ ಹಿಂಡೇ ಬಂದುಬಿದ್ದಿದೆ.

ರಾಜ್ಯ ಪ್ರಶಸ್ತಿಯ ಜೊತೆಗೆ, ಫಿಲ್ಮ್‌ಫೇರ್ ಪ್ರಶಸ್ತಿ. ಐಐಎಫ್‌ಎ ಹಾಗೂ ಎಸ್‌ಐಐಎಂಎ ಹೀಗೆ ಸರಣಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಇದರ ಜೊತೆಗೆ ಚಿತ್ರದ ಪ್ರದರ್ಶನಗಳು ಪೂರ್ಣಗೊಳ್ಳುವ ಮೊದಲು ಚಿತ್ರದ ನಾಯಕ, ನಾಯಕಿಯರಾದ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ವಿವಾಹ ನಿಶ್ಚಿತಾರ್ಥವೂ ನಡೆದಿದೆ. ಒಟ್ಟಿನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಕಿರಿಕ್‌ಪಾರ್ಟಿ ಸಡಗರ ಜೋರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News