ಹಿಂದುತ್ವ, ತಲೆದಂಡ ಮತ್ತು ಪ್ರತ್ಯೇಕತೆ

Update: 2017-07-28 18:45 GMT

ಕರ್ನಾಟಕದಲ್ಲಿ ಲಿಂಗಾಯತ/ವೀರಶೈವ ಮತ ಪದ್ಧತಿಯನ್ನು ‘ಪ್ರತ್ಯೇಕ ಧರ್ಮ’ವೆಂದು ಮಾನ್ಯತೆ ಪಡೆಯುವ ಕುರಿತಾದ ರಾಜಕೀಯ ಚಳವಳಿಯ ಸಂದರ್ಭದಲ್ಲಿ, ವಾರ್ತಾಭಾರತಿಯ ಸಂಪಾದಕೀಯವೂ ಸೇರಿದಂತೆ, ಬರುತ್ತಿರುವ ಅಭಿಪ್ರಾಯಗಳ ಸಂದರ್ಭದಲ್ಲಿ ಕೆಲವು ವಿಚಾರಗಳು.

‘ಲಿಂಗಾಯತ’ವೆಂಬುದು ‘ಹಿಂದೂ’ ಎಂಬುದರಿಂದ ಬೇರೆ, ಅದೊಂದು ಭಿನ್ನಮಾರ್ಗ, ಎಂದು ಹೇಳುವಾಗ ಪರಾಂಬರಿಸಬೇಕಾದ ವಿಷಯಗಳು ಹಲವು ಇವೆ. ಪ್ರತ್ಯೇಕ ಎಂದರೇನು, ಒಂದು ಎಂದರೇನು, ಎಷ್ಟು? ‘ಮೂಲಧರ್ಮ’ ವಿಭಿನ್ನ, ಬಂಡಾಯ ವಿಚಾರಧಾರೆ, ಯಾವುದು ಹೇಗೆ ಇತ್ಯಾದಿ.

ಹಿಂದೂ ಎಂಬುದೊಂದು ಸಮುಚ್ಚಯ. ಅದನ್ನು ಒಂದು ‘ರಿಲಿಜನ್’ (‘ಧರ್ಮ’ ಎಂಬುದೂ ಅಸಮರ್ಪಕ ಪದವೇ) ಎಂಬುದಾಗಿ ಒಂದಾಗಿ, ಪರಿಗಣಿಸಿದುದು ಸರಿಯಲ್ಲ. ಒಂದು ಕಾಲದಲ್ಲಿ ಚಾರಿತ್ರಿಕ ಕಾರಣಗಳಿಂದ ಹಾಗಾಗಿದೆ ಅಷ್ಟೆ. ಹಿಂದೂಯಿಸಂ, ಹಿಂದೂ- ಇವು ಮೂಲತಃ ಇಂಡಾಲಜಿ, ಪಾಶ್ಚಾತ್ಯ ದೃಷ್ಟಿಗಳಲ್ಲಿ ಮತ್ತು ಪಾರ್ಸೋ-ಅರೇಬಿಕ್ ಗುರುತಿಸುವಿಕೆಗಳಲ್ಲೂ ಸೃಷ್ಟಿಯಾದದ್ದು. ಇರಲಿ. ಹಿಂದೂ ಎಂಬುದನ್ನು ಪ್ರದೇಶ ಸೂಚಕ, ಜನಾಂಗ ಸೂಚಕ, ರಾಷ್ಟ್ರ ಸೂಚಕ, ಮತಧರ್ಮ ಪದ್ಧತಿ(ರಿಲಿಜನ್)ಯಾಗಿ ವಿವಿಧ ಕಾಲಗಳಲ್ಲಿ ಬಳಸಲಾಗಿದೆ. ಕೆಲವು ಗ್ರಂಥಕಾರರು ಹಿಂದೂ ಜನಾಂಗ ಇತ್ಯಾದಿ ಹೇಳಿದ್ದಾರೆ. ಪಾಶ್ಚಾತ್ಯವಾದ ‘ರಿಲಿಜನ್’ ಅರ್ಥದಲ್ಲಿ ಹೇಳುವುದಾದರೆ ಹಿಂದೂಧರ್ಮಗಳು hinduisms ಎನ್ನ ಬೇಕಾದೀತು. ಹಾಗಾಗಿಯೇ ಚಿಂತನೆ, ಮತ-ಧರ್ಮ-ಜನಾಂಗ-ಪ್ರದೇಶಗಳು ಒಟ್ಟಾಗಿ ವಿವಕ್ಷಿತವಾಗುವ ಹಾಗೆ, ವೀರಸಾವರ್ಕರರು ‘ಹಿಂದುತ್ವ’ hinduism ಎಂದದ್ದು.

ಕಾನೂನೀ, ಸಾಂವಿಧಾನಿಕವಾಗಿ ಹಿಂದೂ ಎನ್ನಲಾಗುವ ಸಮುದಾಯದಲ್ಲಿ ತೀರಾ ಭಿನ್ನವಾದ ಮತೀಯ ಸಂಪ್ರದಾಯಗಳಿವೆ. ಹಾಗಾಗಿ ‘ಮೂರ್ತಿ ಪೂಜಾ ನಿರಾಕರಣೆ’ಯೊಂದನ್ನೇ ಆಧಾರವಾಗಿಸಿ, ‘ಬೇರೆ ಧರ್ಮ ಅನ್ನುವುದಾದರೆ-
ಪ್ರತಿಮಾ ಸ್ವಲ್ಪ ಬುದೀನಾಂ
ಯೋಗೀನಾಂ ಹೃದಯೇ ಹರಿಃ/ಶಿವಃ
(ವಿಗ್ರಹವು ಸಾಮಾನ್ಯರಿಗೆ, ಯೋಗಿಗಳಿಗೆ ಹೃದಯದಲ್ಲಿ ದೇವರು) ಎಂದೂ ಇದೆಯಲ್ಲ! ಈ ಮತವೂ ಹಿಂದೂಯೇತರವೆನ್ನಬೇಕಾದೀತು! ಹಿಂದುತ್ವಗಳು ಅನಂತ.

ಪ್ರಾಚೀನ ವೈದಿಕ (ಮೀಮಾಂಸಾ) ಮತವಾದ ಕರ್ಮಮಾರ್ಗ, ಉಪನಿಷತ್ತುಗಳ ಜ್ಞಾನಮಾರ್ಗಗಳಲ್ಲಿ ಬೇಕಾದಷ್ಟು ಖಂಡನೆಗಳು, ಪರಸ್ಪರ ಆಕ್ಷೇಪಗಳೂ ಇವೆ. ಶೈವ-ವೈಷ್ಣವಗಳಲ್ಲಿ, ದ್ವೈತ-ಅದ್ವೈತಗಳಲ್ಲಿ ತೀವ್ರವಾದ ವಿರೋಧ ವಿಚಾರಗಳಿವೆ. ಅವೆಲ್ಲ ಹಿಂದುವೆ, ಅ-ಹಿಂದುವೆ? ಏನು ಹೇಳೋಣ?

ಅದೇ ಹಿಂದುತ್ವ, ಬಹುತ್ವ, ವೈಶಾಲ್ಯ ವಿಚಿತ್ರ.
ಮತ ಸಂಪ್ರದಾಯವೊಂದನ್ನು ‘ವೌಢ್ಯ’ ‘ಜೀವನ ವಿರೋಧಿ’, ಹುನ್ನಾರ ಎಂಬೆಲ್ಲ ವಿಶೇಷಣಗಳಿಂದ ಹೇಳುವುದಾದರೆ ಯಾವುದಕ್ಕೂ ಹಾಗೆ ಹೇಳಬಹುದು. ಪ್ರಾರ್ಥನೆ, ಧ್ಯಾನ, ಸಂಕೇತ ಪೂಜೆ, ದಿಕ್ಪೂಜೆ, ಗ್ರಂಥ ಪೂಜೆ, ಶೂನ್ಯವಾದ-ಎಲ್ಲವನ್ನೂ ವೌಢ್ಯವೆಂದು ವಾದಿಸಬಹುದು. ಹುನ್ನಾರ ವಾದವು ಯಾವಾಗಲೂ ಅಪಾಯಕರ, ಅದಕ್ಕೆ ಉತ್ತರ ಕಷ್ಟ; ಅಥವಾ ಬಹು ಸುಲಭ. ‘‘ನಿಮ್ಮದೇನು? ಹುನ್ನಾರವಲ್ಲವೇ?’’ ಎಂದರಾಯಿತು.

ಇನ್ನೊಂದು ದೃಷ್ಟಿಯಲ್ಲಿ ಸಿಖ್, ಬೌದ್ಧ, ಜೈನ ಸಂಪ್ರದಾಯಗಳನ್ನು ಪ್ರತ್ಯೇಕವೆಂದು ಹೇಳುವಾಗ, ಅದರಲ್ಲಿ ಹಿಂದುತ್ವದ ಅನೇಕಾನೇಕ ಅಂಶಗಳಿಲ್ಲವೇ? ಇದ್ದೇ ಇವೆ. ಬೌದ್ಧ  ಹಿಂದೂ ಎಂಬುದೇ ತಪ್ಪು. ಶ್ರಮಣ - ಬ್ರಾಹ್ಮಣ ಎಂಬ ವರ್ಗೀಕರಣವೇ ಸೂಕ್ತ. ಶ್ರಮಣರಲ್ಲೂ ಜೈನ-ಬೌದ್ಧ- ಆಜೀವಕ-ಚಾರ್ವಾಕ ಬೇರೆ ಬೇರೆ ಇಲ್ಲವೇ?
‘ಹಿಂದೂ’ ಎನ್ನುವ ಇತರರಿಗೂ ಸಿಖ್ ಸಂಪ್ರದಾಯಕ್ಕೂ ಇರುವ ವ್ಯತ್ಯಾಸಗಳಿಗಿಂತ, ಬಹಳಷ್ಟು ವ್ಯತ್ಯಾಸ ಹೊಂದಿರುವ ಮತ ಪದ್ಧತಿಗಳಿಲ್ಲವೇ?

ಆ ನೆಲೆಯಲ್ಲಿ ಕಬೀರ್ ಪಂಥ, ಆರ್ಯ ಸಮಾಜಗಳೂ ಅ-ಹಿಂದುವೆನಿಸಿಯಾವು. ದೇಶಾದ್ಯಂತ ಇರುವ ಹಲವು ಬುಡಕಟ್ಟು ವಿಧಾನಗಳು- ನಾಗಾ, ಮಿಜೋ, ಬೋಡೋ, ಸೋಲಿಗ, ಅನೇಕ ದಲಿತ ಜನಾಂಗೀಯ ಕ್ರಮಗಳಿಗೂ ‘ಹಿಂದೂ’ ಎನ್ನಲಾಗುವ ವಿಧಾನಗಳಿಗೂ ಅಪಾರ ವ್ಯತ್ಯಾಸಗಳಿವೆ. ಸಂಬಂಧವೇ ಇಲ್ಲವೇನೋ ಎಂಬಷ್ಟು ಇವೆ. ಅವರೆಲ್ಲರೂ ಪ್ರತ್ಯೇಕ ಧರ್ಮದ ಬೇಡಿಕೆ ಇಟ್ಟರೆ ತಪ್ಪೇನಿಲ್ಲ. ಹಿಂದುತ್ವದ ರಾಜಕೀಯ ವ್ಯಾಖ್ಯಾನ ಮಾಡ ಹೊರಡುವಾಗ ಇದನ್ನೆಲ್ಲ ಗಮನಿಸಬೇಕಾಗುತ್ತದೆ.

‘ಲಿಂಗಾಯತ’ ಪ್ರತ್ಯೇಕತೆಯ ಚಳವಳಿಯನ್ನು ವಿರೋಧಿಸ ಬೇಕಾಗಿಲ್ಲ. ಕೊನೆಗೂ ಆ ಜನರು ಅದನ್ನು ನಿರ್ಣಯಿಸಬೇಕಷ್ಟೆ. ನಾವು ಚರ್ಚೆ ಮಾಡಬಹುದು. ಅದು ಯಶಸ್ವಿಯಾಗಿ, ಒಪ್ಪಿಗೆಯಾದರೆ ಅಲ್ಪ ಸಂಖ್ಯ- ಬಹು ಸಂಖ್ಯ ವಿಭಾಗಗಳು ಪುನಾರಚನೆಗೊಂಡು, ಅಲ್ಪ ಸಂಖ್ಯ- ಬಹು ಸಂಖ್ಯ ರಾಜಕೀಯದ ನೈಜ್ಯ ಪ್ರಕಟವಾದೀತು. ದೀರ್ಘಕಾಲದಲ್ಲಿ ಇದು ದೇಶಕ್ಕೆ ಹಿತಕರವೂ ಆಗಬಹುದು. ಎಲ್ಲ ಪಂಥಗಳೂ ಪ್ರತ್ಯೇಕವಾದರೆ, ಹಿಂದುತ್ವವೆಲ್ಲಿ ಉಳಿಯುತ್ತದೆ? ಎಂಬ ಭೀತಿಗೆ ಆಸ್ಪದವಿಲ್ಲ. ಪ್ರತ್ಯೇಕತೆಯನ್ನು ಬೆಂಬಲಿಸಿ ಹಿಂದೂ ಐಕ್ಯವನ್ನು ನಾಶಮಾಡುವ ರಾಜಕೀಯ ದೃಷ್ಟಿಯ ‘ಹಿಂದುತ್ವ ವಿರೋಧಿ’ಗಳೂ ಸಂಭ್ರಮಿಸಬೇಕಾಗಿಯೂ ಇಲ್ಲ.

ಪಂಥಗಳು ಕಾನೂನೀ ನೆಲೆಯಲ್ಲಿ ಬೇರೆ ಬೇರೆ ಎಂದು ಮನ್ನಣೆ ಪಡೆದರೂ ‘ಹಿಂದುತ್ವ’ ಉಳಿದೇ ಉಳಿಯುತ್ತದೆ. ಒಂದು ಸಂಪ್ರದಾಯಿಗಳ ಒಕ್ಕೂಟ (federal plural) ಆಗಿ, ಛತ್ರ ಸಂಘಟನೆ (umbrella organisation) ಆಗಿ ಅದು ಉಳಿಯುತ್ತದೆ, ಮಾತ್ರವಲ್ಲ ಬಲಗೊಳ್ಳುತ್ತದೆ.

ಸ್ಥಾಪಿತ ಪದ್ಧತಿಗೆ ವಿರುದ್ಧವಾಗಿ, ಸುಧಾರಣೆಯಾಗಿ, ಕವಲಾಗಿ ಬೇರೆ ಬೇರೆ ಪದ್ಧತಿಗಳು ಮೂಡಿ ಬರುವುದು, ಅವುಗಳಿಂದಲೆ ಇನ್ನಷ್ಟು ಕವಲುಗಳು ಆಗುವುದು ಹಿಂದುತ್ವದ ಇತಿಹಾಸದುದ್ದಕ್ಕೂ ನಡೆಯುತ್ತ ಬಂದಿದೆ. ಹುನ್ನಾರ-ಬಂಡಾಯಗಳ ಸಿದ್ಧಾಂತವನ್ನೇ ಆಧರಿಸಿ, ಹಿಂದುತ್ವ ವಿಘಟನೆಯನ್ನು ಆಶಿಸುವವರ ನಿರೀಕ್ಷೆ ಸತ್ಯವಾಗಲಾರದು. ಹಿಂದುತ್ವದ ತಲೆದಂಡವೂ ಆಗಲಾರದು.

‘ಒಳ್ಳೆಯ ಅರ್ಥದ ರಾಜಕೀಯ’ದಿಂದ ಯಾವ ಚಟುವಟಿಕೆಯೂ ಮುಕ್ತವಲ್ಲವಾದರೂ, ಸದ್ಯ ಈ ಪ್ರತ್ಯೇಕತೆಯ ಚಿಂತನೆಗಳು-‘ಹಿಂದೂ-ಬ್ರಾಹ್ಮಣ ವಿರೋಧಿ’, ‘ಅ-ಹಿಂದೂ’ ಅಭಿಯಾನದ ಮುಖವಾಗಿ ಕಂಡರೆ ಅದರಲ್ಲಿ ಆಶ್ಚರ್ಯವೇನಿಲ್ಲ.

Writer - ಡಾ.ಎಂ.ಪ್ರಭಾಕರ ಜೋಶಿ

contributor

Editor - ಡಾ.ಎಂ.ಪ್ರಭಾಕರ ಜೋಶಿ

contributor

Similar News