ನಟ ದಿಲೀಪ್ ಭೂಸ್ವಾಧೀನ ಆರೋಪ: ತನಿಖೆಗೆ ನ್ಯಾಯಾಲಯ ಆದೇಶ
Update: 2017-07-29 23:00 IST
ತ್ರಿಶೂರ್, ಜು. 29: ನಟಿ ಅಪಹರಣ ಹಾಗೂ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿ ಬಂಧಿತನಾಗಿ ಜೈಲಿನಲ್ಲಿರುವ ದಿಲೀಪ್ ಭೂಸ್ವಾಧೀನದ ಆರೋಪದ ಕುರಿತು ತನಿಖೆ ನಡೆಸುವಂತೆ ಜಾಗೃತ ದಳ ನ್ಯಾಯಾಲಯ ಜಾಗೃತ ದಳ ಹಾಗೂ ಭ್ರಷ್ಚಾಚಾರ ನಿಗ್ರಹ ದಳಕ್ಕೆ ಶನಿವಾರ ಆದೇಶಿಸಿದೆ.
ಚಾಲಕ್ಕುಡಿಯಲ್ಲಿ ದಿಲೀಪ್ ಮಾಲಕತ್ವದ ಥಿಯೇಟರ್ ಸಂಕೀರ್ಣ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಕಟ್ಟಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ದಾವೆಯ ಆಧಾರದಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.
ಸೆಪ್ಟಂಬರ್ 13ರ ಮುನ್ನ ವರದಿ ಸಲ್ಲಿಸುವಂತೆ ಜಾಗೃತ ದಳ ಹಾಗೂ ಭ್ರಷ್ಚಾಚಾರ ನಿಗ್ರಹ ದಳಕ್ಕೆ ನ್ಯಾಯಾಲಯ ನಿರ್ದೇಶಿಸಿದೆ. ಈ ಥಿಯೇಟರ್ ಕಟ್ಟಡ ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲಾದ ಸರಕಾರಿ ಜಾಗದಲ್ಲಿ ಇದೆ ಎಂದು ಈ ಹಿಂದೆ ತ್ರಿಶೂರ್ ಜಿಲ್ಲಾಧಿಕಾರಿ ಹೇಳಿದ್ದರು. 1956ರ ಹಿಂದಿನ ಹಲವು ದಾಖಲೆಗಳ ಆಧಾರದಲ್ಲಿ ಜಿಲ್ಲಾಧಿಕಾರಿ ಸರಕಾರಕ್ಕೆ ವರದಿ ಸಲ್ಲಿಸಿದ್ದರು.