ಇದು ಅಂತರಾತ್ಮ ಅಲ್ಲ ಕಣ್ರೀ...ಪ್ರೇತಾತ್ಮ

Update: 2017-07-29 18:23 GMT

ರಾಜಕೀಯ ಸಂತೆಯಲ್ಲಿ ವ್ಯವಹಾರ ಹೇಗಿದೆ ಎಂದು ನೋಡಿಕೊಂಡು ಬಾ ಎಂದು ‘ಆರ್ಥಿಕ ವಿಭಾಗದ ಸಂಪಾದಕರು’ ಪತ್ರಕರ್ತ ಎಂಜಲು ಕಾಸಿಗೆ ತಿಳಿಸಿದ್ದುದರಿಂದ ಆತ ಜೋಳಿಗೆ ಏರಿಸಿಕೊಂಡು ನಡೆದೇ ಬಿಟ್ಟ. ಸಂತೆ ತುಂಬಾ ಗಿಜಿಗಿಜಿ. ಒಂದು ಮೂಲೆಯಲ್ಲಿ ಯಡಿಯೂರಪ್ಪ ಅಂಗಡಿ ಇಟ್ಟಿದ್ದರು. ನೇರವಾಗಿ ಅಲ್ಲಿಗೆ ಧಾವಿಸಿದ. ‘‘ಸಾರ್...ಏನ್ ಸಾರ್...ಅಂಗಡಿಯಲ್ಲಿ ವ್ಯಾಪಾರ ಹೇಗಿದೆ...?’’ ಕಾಸಿ ಕೇಳಿದ. ಯಡಿಯೂರಪ್ಪ ವೌನವಾ ಗಿದ್ದರು. ‘‘ಯಾಕೆ ಸಾರ್ ವೌನ?’’ ಕಾಸಿ ಅಚ್ಚರಿಯಿಂದ ಕೇಳಿದ.

‘‘ಏನು ಸರಕೇ ಇಲ್ಲ ಕಣ್ರೀ...ಅಂಗಡಿಯೆಲ್ಲ ಖಾಲಿ ಖಾಲಿ ಕಣ್ಣು ಕಾಣೋದಿಲ್ವಾ?’’ ಯಡಿಯೂರಪ್ಪ ಸಿಟ್ಟಾಗಿ ಕೇಳಿದರು.

‘‘ಸಾರ್...ನಿಮ್ಮ ಲಿಂಗಾಯತರ ಸರಕುಗಳೆಲ್ಲ ಏನಾಯಿತು?’’ ಕಾಸಿ ಅಚ್ಚರಿಯಿಂದ ಕೇಳಿದ.

‘‘ಅದೆಲ್ಲವನ್ನೂ ಕಾಂಗ್ರೆಸ್‌ನೋರು ತಮ್ಮ ಅಂಗಡಿ ಯಲ್ಲಿಟ್ಟುಕೊಂಡು ಮಾರ್ತಾ ಇದ್ದಾರೆ....ಇತ್ತ ಹಿಂದುತ್ವದ ಸರಕುಗಳು ಲಾರಿಯಲ್ಲಿ ಬರುತ್ತದೆ ಎಂದು ಕಾದದ್ದೇ ಬಂತು...ಅದನ್ನೆಲ್ಲ ಆರೆಸ್ಸೆಸ್‌ನೋರು ಸ್ಟಾಕ್ ಇಟ್ಕೊಂಡಿ ದ್ದಾರೆ. ಇದೀಗ ಅದೂ ಇಲ್ಲ, ಇದೂ ಇಲ್ಲ ಎಂದು ಖಾಲಿ ಅಂಗಡಿಯ ಮುಂದೆ ಕೂತಿದ್ದೇನೆ...’’ ನಿರಾಶರಾಗಿ ಹೇಳಿದರು. ‘‘ಸರಿ ಸಾರ್...ಮುಂದೆ ಈಶ್ವರಪ್ಪನೋರ ಅಂಗಡಿ ಸ್ವಲ್ಪ ನೋಡಿಕೊಂಡು ಬರ್ತೇನೆ’’ ಎಂದು ಮುಂದೆ ಹೋದ ಕಾಸಿ.

ಈಶ್ವರಪ್ಪನೋರ ಅಂಗಡಿ ಬಂದ್ ಆಗಿತ್ತು. ಅರೆ,ರಾಜಕೀಯ ಸಂತೆಯಲ್ಲಿ ಬಿರುಸಿನ ವ್ಯಾಪಾರ ನಡೆಸುತ್ತೇ ನೆ ಎಂದು ಚಾಲೆಂಜ್ ಹಾಕಿದ್ದ ಈಶ್ವರಪ್ಪ ಅವರ ಅಂಗಡಿಯೇ ಬಂದ್ ಆಗಿದೆಯಲ್ಲ...ಎಂದು ಕಾಸಿ ತಲೆ ತುರಿಸಿಕೊಂಡ. ಅಷ್ಟರಲ್ಲಿ ಬಂದ್ ಆಗಿರುವ ಅಂಗಡಿಯ ಕಿಟಕಿಯೆಡೆಯಿಂದ ಯಾರೋ ಇಣುಕಿದಂತಾಯಿತು. ನೋಡಿದರೆ ಈಶ್ವರಪ್ಪ! ಕಾಸಿ ಅಚ್ಚರಿಗೊಂಡು ಹತ್ತಿರ ಹೋಗಿ ಕೇಳಿದ ‘‘ಸಾರ್...ನನಗೆ ಅರ್ಧ ಕೆಜಿ ಕುರಿಮಾಂಸ ಬೇಕಾಗಿತ್ತು...’’

‘‘ಕಾಸಿಯವ್ರೇ...ಹಿಂದಿನ ಬಾಗಿಲಿನಿಂದ ಬನ್ನಿ. ಕೊಡ್ತೇನೆ....ಅಂಗಡಿ ಬಂದ್ ಮಾಡಬೇಕು ಎಂದು ವರಿಷ್ಠರು ಹೇಳಿದ್ದಾರೆ. ಎದುರಿನಿಂದ ಬಂದ್ ಮಾಡಿ, ಹಿಂದಿನ ಬಾಗಿಲಿನಿಂದ ಯಡಿಯೂರಪ್ಪ ಅವರಿಗೆ ಗೊತ್ತಾ ಗದ ಹಾಗೆ ವ್ಯಾಪಾರ ಮಾಡಿ ಎಂದು ಆರೆಸ್ಸೆಸ್‌ನೋರು ಅಪ್ಪಣೆ ಕೊಟ್ಟಿದ್ದಾರೆ...ಹಿಂದಿನ ಬಾಗಿಲಿನಲ್ಲಿ ಬನ್ನಿ...ಒಳ್ಳೆ ಕುರಿ ಮಾಂಸ ಇದೆ...ಸಿದ್ದರಾಮಯ್ಯ ಅಂಗಡಿಯಲ್ಲಿ ಇಂತಹ ಜಾತಿ ಕುರಿಗಳು ಇಲ್ಲ. ಕಿತ್ತೂರು ಚೆನ್ನಮ್ಮನ ಕಾಲದ ಕುರಿಗಳು ಇವು...’’ ಈಶ್ವರಪ್ಪ ಕರೆದರು.

ಕಾಸಿ ಹಿಂಬಾಗಿಲಿಗೆ ಹೋದರೆ ಅಲ್ಲಿ ಅವರು ತರಕಾರಿ ಮಾರುತ್ತಿದ್ದರು ‘‘ಇದೇನು ಸಾರ್...ಕುರಿ ಮಾಂಸ ಎಂದು ತರಕಾರಿ ಮಾರ್ತಾ ಇದ್ದೀರಿ?’’

 ‘‘ನೋಡ್ರಿ....ಆರೆಸ್ಸೆಸ್‌ನೋರು ಹೇಳಿದ್ದಾರೆ...ಕುರಿ ಮಾಂಸ ಅಂತ ಹೇಳಿ ತರಕಾರಿಯನ್ನು ಎಷ್ಟು ಬೇಕಾ ದರೂ ಮಾರಿ...ಸಂಗೊಳ್ಳಿರಾಯಣ್ಣ ತರಕಾರಿ ಮಾತ್ರ ತಿನ್ತಾ ಇದ್ದಾ ಅಂತ ನಾವು ಬೇಕಾದರೆ ಹೊಸ ಇತಿಹಾಸ ಬರೆದು ಕೊಡ್ತೇವೆ...ಆದರೆ ಹಿತ್ತಲಲ್ಲಿ ಮಾಂಸ ಮಾರಿ ಆರೆಸ್ಸೆಸ್‌ನ ಮೈಲಿಗೆ ಕಳೆಯಬಾರದು ಎಂದು ಹೇಳಿದ್ದಾರೆ. ಎಷ್ಟಿದ್ದರೂ ಶಿಸ್ತು ಮುಖ್ಯ. ಆದುದರಿಂದ, ನಿಮಗೆ, ಒಂದು ಬದನೆಕಾಯಿ ಕೊಡ್ತೇನೆ. ಮನೆಯಲ್ಲಿ ಗೊಜ್ಜು ಮಾಡಿ. ಒಳ್ಳೆ ಕುರಿಮಾಂಸದ ರುಚಿ ಇರುತ್ತದೆ. ಹ್ಹೆ ಹ್ಹೆ’’ ಎಂದು ನಕ್ಕರು.

ಕಾಸಿ ‘‘ಈಗ ಬಂದೆ ಸಾರ್...’’ ಎಂದವನೇ ಅಲ್ಲಿಂದ ನೇರವಾಗಿ ಸಿದ್ದರಾಮಯ್ಯರ ಅಂಗಡಿಯ ಕಡೆ ಸಾಗಿದ. ಸಿದ್ದ ರಾಮಯ್ಯ ಅಂಗಡಿಯ ಮುಂದೆ ಜನರೇ ಜನರು. ಒಳ್ಳೆ ವ್ಯಾಪಾರ. ‘‘ಕನ್ನಡ ಬಾವುಟ, ಕನ್ನಡ ಬಾವುಟ...’’ಎಂದು ಅವರು ಕರೆಯುತ್ತಿದ್ದರೆ, ಇನ್ನೊಬ್ಬ ಸಚಿವರು ‘‘ಯಾವುದೇ ಕಲಬೆರಕೆ ಇಲ್ಲದ ಲಿಂಗಾಯತ ಧರ್ಮ...ಲಿಂಗಾಯತ ಧರ್ಮ...’’ ಎಂದು ಕೂಗುತ್ತಿದ್ದರು. ಮಗದೊಬ್ಬ ಸಚಿವರು ‘‘ವೀರಶೈವ ಫ್ಲೇವರ್‌ಗಳ ಜೊತೆಗೆ ಲಿಂಗಾಯತ ಧರ್ಮ...ಬನ್ನಿ ಬನ್ನಿ...’’ ಎಂದು ಕರೆಯುತ್ತಿ ದ್ದರು. ಆ ಧರ್ಮ ಅರ್ಧ ಕೆಜಿ, ಈ ಧರ್ಮ ಕೆಜಿ ಎಂದು ಎರಡನ್ನೂ ಕಾಸಿ ಅರ್ಧರ್ಧ ಕಟ್ಟಿಕೊಂಡು, ಒಂದು ಕನ್ನಡ ಬಾವುಟವನ್ನು ತನ್ನ ಜೋಳಿಗೆಯೊಳಗೆ ಹಾಕಿಕೊಂಡ. ಅಷ್ಟರಲ್ಲಿ, ಇನ್ನೊಬ್ಬ ಸಚಿವರು ‘‘ಎರಡು ಕೆಜಿ ಅಂಬೇಡ್ಕರ್ ಸಮ್ಮೇಳನವನ್ನು ತೆಗೆದುಕೊಂಡು ಹೋಗಿ. ಅಂತಾರಾಷ್ಟ್ರೀ ಯ ಮಟ್ಟದಿಂದ ಆಮದು ಮಾಡಿಕೊಂಡಿ ರುವುದು. ಬಿಸಿ, ಬಿಸಿ ಇದೆ. ಚೆನ್ನಾಗಿದೆ...ನೆಲಮೂಲ, ತಳಸ್ತರದಿಂದ ಬೆಳೆಸಿದ ಉತ್ಪಾದನೆ...ತೆಗೆದುಕೊಳ್ಳಿ....’’ ಎಂದು ಒತ್ತಾಯಿಸಿದಾಗ ಕಾಸಿ ಅನಿವಾರ್ಯವಾಗಿ ಎರಡು ಕೆಜಿ ಅಂಬೇಡ್ಕರ್ ಸಮ್ಮೇಳನವನ್ನೂ ಕಟ್ಟಿಸಿಕೊಂಡ. ‘‘ನೋಡ್ರೀ...ನಮ್ಮ ಅಂಗಡಿಯಲ್ಲಿ ವ್ಯಾಪಾರ ಮಾಡಿದವರಿಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಊಟ ಇಟ್ಟಿದ್ದೇವೆ...ತಿಂದು ಬಿಟ್ಟು ಹೋಗಿ...’’ ಸಿದ್ದರಾಮಯ್ಯರು ಜೋರಾಗಿ ಕೂಗಿ ಹೇಳಿದರು. ಕಾಸಿಗೆ ಸಂತೋಷವಾಯಿತು. ನೇರವಾಗಿ ಇಂದಿರಾಕ್ಯಾಂಟೀನ್‌ಗೆ ಹೋಗಿ ಹೊಟ್ಟೆ ತುಂಬಾ ಉಂಡು, ಮತ್ತೆ ಸಂತೆ ಸುತ್ತ ತೊಡಗಿದ. ದೂರದಲ್ಲಿ ಯಾರೋ ಅದೇನೋ ‘‘ಆತ್ಮ ಬೇಕೇ ಆತ್ಮ ಬೇಕೇ?’’ ಎಂದು ಕೇಳಿದಂತಾಯಿತು. ಇದೇನಿದು ‘ಆತ್ಮ’ದ ವ್ಯಾಪಾರ ಎಂದು ಕುತೂಹಲದಿಂದ ಕಾಸಿ ಅತ್ತ ಕಡೆ ನಡೆದ. ನೋಡಿದರೆ ಅಮಿತ್ ಶಾ ಅವರು ಅಂಗಡಿ ಮುಂದೆ ಕೂತು ‘‘ಅಂತರಾತ್ಮ ಬೇಕೇ ಅಂತರಾತ್ಮ’’ ಎಂದು ಕರೆಯುತ್ತಿದ್ದಾರೆ.

‘‘ಸಾರ್...ಇದೇನಿದು ಸಾರ್ ವ್ಯಾಪಾರಾ? ಎಲ್ಲಿದೆ ಅಂತರಾತ್ಮ?’’ ಕುತೂಹಲದಿಂದ ಕೇಳಿದ.

ಅಮಿತ್ ಶಾ ನಕ್ಕರು ‘‘ನೋಡ್ರೀ...ಇದು ಸ್ವಲ್ಪ ಬೇರೇ ಥರದ ವ್ಯಾಪಾರ. ನೀವು ನಿಮ್ಮ ಅಂತರಾತ್ಮವನ್ನು ನಮಗೆ ಕೊಟ್ಟರೆ ನಾವು ಅದಕ್ಕೆ ತಕ್ಕ ಬೆಲೆ ಕೊಡುತ್ತೇವೆ....ಇದೊಂದು ರೀತಿ, ಗುಜರಿ ವ್ಯಾಪಾರ ಇದ್ದ ಹಾಗೆ. ನೋಡಿ, ಸ್ವಲ್ಪ ಮುಂದೆ ಬಿಹಾರದಿಂದ ನಿತೀಶ್ ಕುಮಾರ್ ಅವರು ತಮ್ಮ ಸಮಾಜವಾದದ ಅಂತರಾತ್ಮ ಹಿಡಿದು ಕೊಂಡು ಬಂದಿದ್ದರು. ಸಾಧಾರಣವಾಗಿ ಇಂತಹ ಅಂತ ರಾತ್ಮಕ್ಕೆ ಬೆಲೆ ಇಲ್ಲ. ಆದರೆ ಅಪರೂಪವಾಗಿ ಅಲ್ಲಿ ಇಲ್ಲಿ ಇಳಿದುಕೊಂಡ ಅಳಿವಿನಂಚಿನಲ್ಲಿರುವ ಸಮಾಜವಾದದ ಅಂತರಾತ್ಮ ನಮಗೆ ಬೇಕಾಗಿತ್ತು. ಅದಕ್ಕಾಗಿ ಅದನ್ನು ನಾವು ಕೊಂಡುಕೊಂಡಿದ್ದೇವೆ. ಅವರು ಅವರಿಗೆ ಬೇಕಾದುದನ್ನು ಪಡೆದುಕೊಂಡಿದ್ದಾರೆ...’’ ಎಂದು ನಕ್ಕರು.

 ಕಾಸಿ ಅಚ್ಚರಿಗೊಂಡು ಕೇಳಿದ ‘‘ಸಾರ್...ನನ್ನ ಅಂತರಾತ್ಮವನ್ನು ಕೊಟ್ಟರೆ ಏನು ಕೊಡುತ್ತೀರಿ ಸಾರ್...’’ ಕಾಸಿ ಆಸೆಯಿಂದ ಕೇಳಿದ. ತನ್ನ ಅಂತರಾತ್ಮವನ್ನು ಅಮಿತ್ ಶಾ ಅವರಿಗೆ ಮಾರಿ ಮನೆಗೆ ಹೋಗುವಾಗ ಎರಡು ಕೆಜಿ ಟೊಮೆಟೋವನ್ನು ಕೊಂಡು ಹೋಗುವ ಯೋಜನೆಯನ್ನು ಆಗಲೇ ಹಾಕಿಕೊಂಡಿದ್ದ. ಕಾಸಿಯ ಅಂತರಾತ್ಮವನ್ನು ತೂಗಿದ ಅಮಿತ್ ಶಾ ನಿರಾಶೆಯಿಂದ ಹೇಳಿದರು ‘‘ನೋಡ್ರಿ...ಇದು ಬರೇ ಕಳಪೆ ಯಾದುದು. ಏನಿದ್ದರೂ ಪತ್ರಿಕಾಗೋಷ್ಠಿಯಲ್ಲಿ ನೀಡುವ ಒಂದು ಪ್ಲೇಟ್ ಉಪ್ಪಿಟ್ಟು, ಶೀರಾ ಅಷ್ಟೇ....’’

ಕಾಸಿಗೆ ನಿರಾಶೆಯಾಯಿತು. ಸಿಟ್ಟೂ ಬಂತು. ‘‘ಸಾರ್...ನಿಮ್ಮಲ್ಲಿ ಯಾವ ಅಂತರಾತ್ಮ ಹೆಚ್ಚು ಬೆಲೆ ಬಾಳುತ್ತದೆ...ಹೇಳಿ ಸಾರ್?’’

‘‘ನೋಡ್ರಿ, ಸದ್ಯಕ್ಕೆ ನಮ್ಮ ಅಂಗಡಿಯಲ್ಲಿ ದಲಿತರ ಅಂತ ರಾತ್ಮಕ್ಕೆ ಒಳ್ಳೆಯ ಬೆಲೆ ಇದೆ. ಈಗಾಗಲೇ ಆ ಆತ್ಮವನ್ನು ಒಲಿಸಿಕೊಳ್ಳುವುದಕ್ಕಾಗಿ ದಲಿತರ ಮನೆಮನೆಯಲ್ಲಿ ನಾವು ಊಟ ಮಾಡುತ್ತಿದ್ದೇವೆ. ಇಲ್ಲಿ ಉಣ್ಣುವುದಕ್ಕೆ ಊಟ ತಯಾರಿಸುವುದಕ್ಕಾಗಿಯೇ ಬೃಹತ್ ಹೊಟೇಲ್‌ಗಳಿಗೆ ಗುತ್ತಿಗೆ ಕೊಟ್ಟಿದ್ದೇವೆ....’’

‘‘ಸಾರ್...ಮುಸ್ಲಿಮರ ಅಂತರಾತ್ಮಕ್ಕೆ...’’

‘‘ಜಾಸ್ತಿ ಎಂದರೆ ಒಂದು ವಕ್ಫ್‌ಬೋರ್ಡ್ ಕೊಡಬಹುದು. ಉಳಿದವರನ್ನು ವೆಜ್ ಬಿರಿಯಾನಿಯಲ್ಲಿ ಸುಧಾರಿಸಬಹುದು...’’ ಅಮಿತ್ ಶಾ ಹೇಳಿದರು. ಅಷ್ಟರಲ್ಲಿ ಕಾಸಿ ತನ್ನ ಜೋಳಿಗೆಯಿಂದ ಅದೇನೋ ತೆಗೆದ. ‘‘ಇಲ್ಲಿ ನನ್ನ ಜೋಳಿಗೆಯಲ್ಲಿ ಒಂದಿಷ್ಟು ಅಂತರಾತ್ಮಗಳಿವೆ. ನಾನು ಗುಜರಾತ್‌ಗೆ ವರದಿ ಮಾಡಲೆಂದು ತೆರಳಿದಾಗ ಸಿಕ್ಕಿದ್ದು. ಇದಕ್ಕೆ ನಿಮ್ಮಲ್ಲಿ ಎಷ್ಟು ಸಿಗಬಹುದು...’’ ಎಂದು ತಕ್ಕಡಿಗೆ ಹಾಕಿ ಬಿಟ್ಟ.

ಅದನ್ನು ನೋಡಿದವರೇ ಅಮಿತ್ ಶಾ ‘‘ಇದು ಅಂತರಾತ್ಮ ಅಲ್ಲಾ ರೀ....ಗುಜರಾತ್ ಹತ್ಯಾಕಾಂಡದಲ್ಲಿ ಸತ್ತವರ ಪ್ರೇತಾತ್ಮ....’’ ಎಂದವರೇ ಅಲ್ಲಿಂದ ಒಂದೇ ಸಮನೆ ಓಡ ತೊಡಗಿದರು.

ಬೆಲೆಯೇ ಇಲ್ಲದ ಆ ಪ್ರೇತಾತ್ಮಗಳನ್ನು ತಮ್ಮ ತನ್ನ ಜೋಳಿಗೆಗೆ ಹಾಕಿಕೊಂಡ ಎಂಜಲು ಕಾಸಿ ತನ್ನ ಪತ್ರಿಕಾಕಚೇರಿಯ ಕಡೆಗೆ ಭಾರವಾದ ಹೆಜ್ಜೆಗಳನ್ನಿಟ್ಟ.

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News