ವಿಕ್ರಂ-ವೇದಾ ಇಲಿ ಬೆಕ್ಕಿನ ಆಟ

Update: 2017-07-30 07:00 GMT

ಬಾಲ್ಯದಲ್ಲಿ ಚಂದಮಾಮ ಓದಿದವರಿಗೆ ಬೇತಾಳನ ಕತೆಗಳು ಚಿರಪರಿಚಿತ. ಬೇತಾಳನನ್ನು ಹೆಗಲಿಗೇರಿಸಿ ಹೊರಡುವ ವಿಕ್ರಮಾದಿತ್ಯ ಮತ್ತು ಆತನಿಗೆ ಕತೆ ಹೇಳಿ ಅವನ ಮೌನ ಮುರಿಯುವ ಬೇತಾಳ, ಅಂತಿಮವಾಗಿ ಬೇತಾಳ ವಿಕ್ರಮನಿಗೂ ಓದುಗನಿಗೂ ಇಡುವ ಪ್ರಶ್ನೆ ಕಥೆ ಹೇಳುವಲ್ಲಿ ಒಂದು ವಿಭಿನ್ನ ತಂತ್ರವೇ ಸರಿ. ಈ ನಿರೂಪಣಾ ತಂತ್ರವನ್ನು ಬಳಸಿಕೊಂಡು ಪುಷ್ಕರ್ ಗಾಯತ್ರಿ ಜೋಡಿ ವಿಕ್ರಮ್ ವೇದಾ ಸಸ್ಪೆನ್ಸ್ ತಮಿಳು ಚಿತ್ರವೊಂದನ್ನು ನೀಡಿದೆ.

ಪುಷ್ಕರ್-ಗಾಯತ್ರಿ ದಂಪತಿ ಈ ಹಿಂದೆ ಓರಂ ಪೋ, ವಾ ಚಿತ್ರಗಳ ಮೂಲಕ ಪರಿಚಯಿಸಿಕೊಂಡವರಾದರೂ, ತಮ್ಮ ನಿಜವಾದ ಕ್ರಿಯಾಶೀಲತೆಯನ್ನು ಅವರು ತೆರೆದಿಟ್ಟಿರುವುದು ವಿಕ್ರಂ ವೇದಾ ಚಿತ್ರದಲ್ಲಿ. ಪ್ರೇಕ್ಷಕರ ಪಾಲಿಗೆ ಈ ಚಿತ್ರ, ಒಂದು ಅನಿರೀಕ್ಷಿತ ಅಚ್ಚರಿ.

ಎನ್‌ಕೌಂಟರ್ ಮೂಲಕವೇ ಕುಖ್ಯಾತಿಯನ್ನು ಪಡೆದಿರುವ ವಿಕ್ರಂ(ಮಾಧವನ್) ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡವೊಂದು ವೇದಾ(ಸೇತುಪತಿ) ಮತು ಆತನ ಕ್ರಿಮಿನಲ್ ತಂಡದ ಬೇಟೆಗೆ ತೊಡಗುವ ಕತೆಯೇ ಚಿತ್ರದ ಕತೆಯ ಮುಖ್ಯ ಎಳೆ. ಒಬ್ಬ ಕ್ರಿಮಿನಲ್ ಮತ್ತು ಪೊಲೀಸ್ ಅಧಿಕಾರಿಗಳ ನಡುವಿನ ಸಂಘರ್ಷವೆಂದೇ ಪೂರ್ವಾರ್ಧದಲ್ಲಿ ಪ್ರೇಕ್ಷಕರನ್ನು ನಂಬಿಸುವಲ್ಲಿ ಯಶಸ್ವಿಯಾಗುವ ನಿರ್ದೇಶಕ, ಉತ್ತರಾರ್ಧದಲ್ಲಿ ಕತೆಗೆ ಬೇರೆ ಬೇರೆ ತಿರುವುಗಳನ್ನು ನೀಡುವ ಮೂಲಕ ಪೊಲೀಸ್ ಅಧಿಕಾರಿಗಳೊಳಗಿನ ಅಂತರ್‌ಸಂಘರ್ಷವಾಗಿ ಚಿತ್ರವನ್ನು ಮಾರ್ಪಡಿಸುತ್ತಾರೆ.

ಚಿತ್ರ ಆರಂಭವಾಗುವುದು ಒಂದು ಭೀಕರ ಎನ್‌ಕೌಂಟರ್‌ಮೂಲಕ. 16 ಕೊಲೆಗಳನ್ನು ಮಾಡಿದ ವೇದಾ ಎಂಬ ನಟೋರಿಯಸ್ ರೌಡಿಯೊಬ್ಬನನ್ನು ಎನ್‌ಕೌಂಟರಿನಲ್ಲಿ ಕೊಲ್ಲಲೇಬೇಕೆಂದು ಹವಣಿಸುತ್ತಿರುವ, ಈಗಾಗಲೇ 18 ಎನ್‌ಕೌಂಟರ್ ಮಾಡಿ ಹೆಸರುವಾಸಿಯಾದ ವಿಕ್ರಂ ಎಂಬ ಪೊಲೀಸ್ ಅಧಿಕಾರಿ ತನ್ನ ತಂಡದೊಂದಿಗೆ ವೇದಾನ ಅಡಗುತಾಣಕ್ಕೆ ನುಗ್ಗಿ ಆತನ ಬೆಂಬಲಿಗರನ್ನು ಎನ್‌ಕೌಂಟರಿನಲ್ಲಿ ಕೊಂದು ಹಾಕುವ ದೃಶ್ಯದೊಂದಿಗೆ ಕತೆ ತೆರೆದುಕೊಳ್ಳುತ್ತದೆ. ಆ ಎನ್‌ಕೌಂಟರ್‌ನಲ್ಲಿ ಕ್ರಿಮಿನಲ್‌ಗಳ ನಡುವೆಯೇ, ಒಬ್ಬ ಶಸ್ತ್ರಾಸ್ತ್ರವಿಲ್ಲದ ರೌಡಿಯೊಬ್ಬನ ಹತ್ಯೆಯೂ ಆಗಿರುತ್ತದೆ ಮತ್ತು ಆ ಹತ್ಯೆಯೇ ಮುಂದಿನ ಎಲ್ಲ ಬೆಳವಣಿಗೆಗಳಿಗೆ ಕಾರಣವಾಗಿ ಬಿಡುತ್ತದೆ. ಎರಡನೆಯ ಕಾರ್ಯಾಚರಣೆಯಲ್ಲಿ, ವಿಕ್ರಮ್ ತಂಡ ವೇದಾನನ್ನು ಎನ್‌ಕೌಂಟರ್ ಮಾಡಲು ಯೋಜನೆ ರೂಪಿಸಿ ಇನ್ನೇನೂ ಯೋಜನೆ ಜಾರಿಗೊಳಿಸಬೇಕು ಎನ್ನುವಷ್ಟರಲ್ಲಿ ಕ್ರಿಮಿನಲ್ ವೇದಾ ನೇರವಾಗಿ ಪೊಲೀಸ್ ಠಾಣೆಯ ಮುಂದೆ ಶರಣಾಗಿ ಬಿಡುತ್ತಾನೆ.

ಆವರೆಗೆ ಭೂಗತವಾಗಿದ್ದ ವೇದಾ ಯಾಕೆ, ಏಕಾಏಕಿ ಬಹಿರಂಗವಾಗಿ ಪ್ರತ್ಯಕ್ಷವಾದ ಎನ್ನುವುದು ಪೊಲೀಸ್ ಅಧಿಕಾರಿ ವಿಕ್ರಮ್‌ನ ಮುಂದಿರುವ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಂತೆ, ಚಿತ್ರ ತೀವ್ರತೆಯನ್ನು ಪಡೆಯುತ್ತಾ ಹೋಗುತ್ತದೆ. ವಿಕ್ರಮ್ ತಾನು ಏನನ್ನು ನಂಬಿ ಕಾರ್ಯಾಚರಣೆ ನಡೆಸುತ್ತಿದ್ದಾನೆಯೋ ಆ ನಂಬಿಕೆಯನ್ನೇ ವೇದಾ ಹೇಳುವ ಮೂರು ಹಂತದ ಕತೆಗಳು ಅಲುಗಾಡಿಸುತ್ತವೆ. ಪ್ರಾರಂಭವಾಗುವ ಚಿತ್ರ ಕೊನೆವರೆಗೂ ಪ್ರೇಕ್ಷಕರಿಗೆ ಉಸಿರಾಡಲೂ ಸಮಯ ನೀಡುವುದಿಲ್ಲ. ಮೊದಲಾರ್ಧದಲ್ಲಿ ಚಕಚಕನೆ ಸಾಗುವ ಕಥೆ ಮಧ್ಯಾಂತರದ ನಂತರ ಸ್ವಲ್ಪ ನಿಧಾನಗತಿಯಲ್ಲಿ ಸಾಗಿ ಆನಂತರ ಅದು ವಿವಿಧ ತಿರುವುಗಳನ್ನು ಪಡೆಯುತ್ತಾ ಪ್ರೇಕ್ಷಕರಿಗೆ ಆಘಾತಗಳನ್ನು ನೀಡುತ್ತದೆ.

ಚಿತ್ರದಲ್ಲಿ ವೇದಾ ಪಾತ್ರಧಾರಿ ವಿಕ್ರಂ ಪಾತ್ರಧಾರಿಗೆ ಒಟ್ಟು ಮೂರು ಕಥೆ ಹೇಳುತ್ತಾನೆ.ಎರಡನೆ ಕಥೆಯ ಮುಕ್ತಾಯಕ್ಕೆ ಚಿತ್ರ ಕೊನೆಗೊಳ್ಳುತ್ತದೆ ಎಂದು ಊಹಿಸುವ ಪ್ರೇಕ್ಷಕನ ಮುಂದೆ ಧುತ್ತನೆ ಮೂರನೆಯ ಕಥೆ ಪ್ರತ್ಯಕ್ಷವಾಗಿ ಕೊನೆಯಲ್ಲಿ ಯಾರೂ ಊಹಿಸಲಾಗದ ರೀತಿಯಲ್ಲಿ ಕಥೆಯನ್ನು ನಿರ್ದೇಶಕರು ಮುಕ್ತಾಯಗೊಳಿಸುತ್ತಾರೆ. 16 ಕೊಲೆ ಮಾಡಿದ ವೇದಾ, 18 ಎನ್‌ಕೌಂಟರ್ ಮಾಡಿದ ವಿಕ್ರಮ್ ಇವರ ನಡುವೆ ಸತ್ಯದ ತಕ್ಕಡಿ ಓಲಾಡುತ್ತದೆ. ಒಳ್ಳೆಯದು ಎಂದರೆ ಏನು? ಕೆಟ್ಟದು ಯಾವುದು? ಯಾರು ಒಳ್ಳೆಯವರು? ಕೆಟ್ಟವರೆಂದರೆ ಯಾರು? ಈ ಪ್ರಶ್ನೆಗೆ ಉತ್ತರವನ್ನು ಚಿತ್ರ, ಪ್ರೇಕ್ಷಕನಿಗೇ ಬಿಟ್ಟು ಬಿಡುತ್ತದೆ. ವಿಕ್ರಂ ಪಾತ್ರದಲ್ಲಿ ಹಿರಿಯ ನಟ ಮಾಧವನ್ ಮತ್ತು ವೇದಾ ಪಾತ್ರದಲ್ಲಿ ನಟ ವಿಜಯ್ ಸೇತುಪತಿ ಪರಸ್ಪರ ಪೈಪೋಟಿಗೆ ಬಿದ್ದು ನಟಿಸಿದ್ದಾರೆ. ಒಬ್ಬ ದಕ್ಷ ಪೊಲೀಸ್ ಅಧಿಕಾರಿಗೆ ಇರಬೇಕಾದ ಗತ್ತು, ಬಾಡಿ ಲಾಂಗ್ವೇಜ್ ಎಲ್ಲವನ್ನೂ ಆವಾಹಿಸಿಕೊಂಡು ಮಾಧವನ್ ಪ್ರೇಕ್ಷಕರ ಮನಸೂರೆಗೊಳ್ಳುತ್ತಾರೆ. ಅದೇ ರೀತಿ ವೇದಾ ಪಾತ್ರದಲ್ಲಿ ವಿಜಯ್ ಸೇತುಪತಿ ಅಷ್ಟೇ ತೀವ್ರವಾದ ಪೈಪೋಟಿಯನ್ನು ನೀಡಿದ್ದಾರೆ.

ಮಾಧವನ್ ಪತ್ನಿಯಾಗಿ ಕನ್ನಡತಿ ಶ್ರದ್ಧಾ ಶ್ರೀನಾಥ್ ವಕೀಲೆಯ ಪಾತ್ರದಲ್ಲಿ ಚೇತೋಹಾರಿಯಾಗಿ ನಟಿಸಿದ್ದಾರೆ. ಮಾಧವನ್ ಮತ್ತು ಶ್ರದ್ಧಾ ಶ್ರೀನಾಥ್ ಮಧ್ಯ ನಡೆಯುವ ರೊಮ್ಯಾಂಟಿಕ್ ಸನ್ನಿವೇಶಗಳು ಮತ್ತು ಇಬ್ಬರ ಮಧ್ಯೆ ನಡೆಯುವ ವೃತ್ತಿ ಸಂಘರ್ಷವನ್ನು ನಿರ್ದೇಶಕರು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ.ವಿಜಯ್ ಸೇತುಪತಿ ತಮ್ಮನ ಪಾತ್ರಧಾರಿ ಕದಿರ್, ಆತನ ಪ್ರೇಯಸಿ ಪಾತ್ರದಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ಮಾಧವನ್ ಹಿರಿಯ ಅಧಿಕಾರಿಯಾಗಿ ಕನ್ನಡಿಗ ಅಚ್ಯುತ್ ಕುಮಾರ್, ಎನ್‌ಕೌಂಟರ್ ತಂಡದ ಪ್ರೇಂ, ರೌಡಿ ಗ್ಯಾಂಗ್‌ನ ರಾಜ್‌ಕುಮಾರ್, ಹರೀಶ್ ಪೇರಡಿ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ಗರಿಷ್ಠ ಮಟ್ಟದಲ್ಲಿ ನ್ಯಾಯ ಒದಗಿಸಿದ್ದಾರೆ. ಚಿತ್ರಕತೆ ಇಡೀ ಸಿನೆಮಾದ ಜೀವಾಳವಾಗಿದ್ದು ನಿರ್ದೇಶಕರ ಶ್ರಮ, ಮಾಡಿಕೊಂಡ ಹೋಂವರ್ಕ್ ಚಿತ್ರದ ಪ್ರತೀ ಫ್ರೇಮ್‌ನಲ್ಲೂ ಎದ್ದು ಕಾಣುತ್ತದೆ.

ನಿರ್ದೇಶಕರು ಎಲ್ಲಕ್ಕಿಂತಲೂ ಹೆಚ್ಚು ಅಂಕ ಗಿಟ್ಟಿಸಿಕೊಳ್ಳುವುದು ಚಿತ್ರಕ್ಕೆ ಬರೆದ ಸಂಭಾಷಣೆಯಿಂದ. ಚಿತ್ರದ ಪ್ರಮುಖ ಪಾತ್ರಧಾರಿಗಳು ಸಂಭಾಷಣೆ ಒಪ್ಪಿಸುವ ಶೈಲಿ ಕೂಡಾ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಅದರಲ್ಲೂ ಮಾಧವನ್‌ರವರ ಕಂಚಿನ ಕಂಠ ಸಂಭಾಷಣೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ದಿದೆ. ಚಿತ್ರದುದ್ದಕ್ಕೂ ಮಾಧವನ್ ಮತ್ತು ವಿಜಯ್ ಸೇತುಪತಿ ಮಧ್ಯದ ಇಲಿ ಬೆಕ್ಕಿನ ಆಟವನ್ನು ಅತ್ಯಂತ ಕುತೂಹಲಕಾರಿಯಾಗಿ ನಿರೂಪಿಸಿದ್ದಾರೆ. ಚಿತ್ರ ತಾಂತ್ರಿಕವಾಗಿ ಕೂಡಾ ಅದ್ಭುತವಾಗಿದ್ದು ಪಿ.ಎಸ್. ವಿನೋದ್‌ರವರ ಅದ್ಭುತ ಛಾಯಾಗ್ರಹಣ ಚಿತ್ರದ ಪ್ರಮುಖ ಅಂಶಗಳಲ್ಲಿ ಒಂದು.

ಸ್ಯಾಂ ಸಿ.ಎಸ್. ರವರ ಸಂಗೀತ ಮೋಡಿ ಮಾಡುತ್ತದೆ. ರಿಚರ್ಡ್ ಕೇವಿನ್ ಸಂಕಲನ ಅದೇ ರೀತಿ ಚಿತ್ರದ ಸೌಂಡ್ ಡಿಸೈನಿಂಗ್ ಎಲ್ಲವೂ ಚಿತ್ರವನ್ನೂ ಎತ್ತಿ ನಿಲ್ಲಿಸುವಲ್ಲಿ ನೆರವಾಗಿದೆ. ಮಧ್ಯಾಂತರದ ನಂತರ ಬರುವ ಒಂದು ಹಾಡು ಚಿತ್ರದ ವೇಗಕ್ಕೆ ಅಡಚಣೆ ಉಂಟುಮಾಡುವಂತಿದ್ದರೂ ಕೇಳಲು ಚೆನ್ನಾಗಿದೆ. ನೋಡಬಹುದಾ ಒಂದು ಅಪರೂಪದ ಕ್ರೈಂ ಥ್ರಿಲ್ಲರ್ ಚಿತ್ರ ವಿಕ್ರಮ್ ವೇದಾ ಎನ್ನುವುದರಲ್ಲಿ ಎರಡು ಮಾತಿಲ್ಲ.

Writer - ಸಲೀಂ ಅಬ್ಬಾಸ್ ವಳಾಲ್

contributor

Editor - ಸಲೀಂ ಅಬ್ಬಾಸ್ ವಳಾಲ್

contributor

Similar News