ಶೀಘ್ರದಲ್ಲಿ ರೈಲಿನಲ್ಲಿ ಸ್ವಚ್ಛ, ಹಗುರ ಹೊದಿಕೆ ಪೂರೈಕೆ
ಹೊಸದಿಲ್ಲಿ, ಜು. 30: ಕೊಳಕು ಹೊದಿಕೆ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರಿಂದ ನಿರಂತರ ದೂರು ಸ್ವೀಕರಿಸುತ್ತಿರುವ ಭಾರತೀಯ ರೈಲ್ವೇ ಹೊದಿಕೆಗಳನ್ನು ತೊಳೆಯುವ ಆವರ್ತನವನ್ನು ಹೆಚ್ಚಿಸುವುದು ಹಾಗೂ ಈಗಿರುವ ಹೊದಿಕೆಗೆ ಬದಲಾಗಿ ಹಗುರದ ಹೊದಿಕೆಯನ್ನು ಹಂತಹಂತವಾಗಿ ಒದಗಿಸಲು ದೃಢ ಕ್ರಿಯಾ ಯೋಜನೆಯನ್ನು ಕೈಗೊಂಡಿದೆ. ಇದರೊಂದಿಗೆ ಹೊದಿಕೆಗಳನ್ನು ಇತರರಿಗೆ ನೀಡುವ ಮುನ್ನ ದಿನನಿತ್ಯ ಸ್ವಚ್ಛಗೊಳಿಸುವುದು ಕೂಡ ಒಳಗೊಂಡಿದೆ. ಇದುವರೆಗೆ ಹೊದಿಕೆಗಳನ್ನು ಒಂದು ಅಥವಾ ಎರಡು ತಿಂಗಳಿಗೆ ಒಮ್ಮೆ ತೊಳೆಯಬೇಕೆಂದು ನಿರ್ದೇಶನ ಇತ್ತು. ಆದರೂ ಆರು ತಿಂಗಳಿಗೆ ಒಮ್ಮೆ ಕೂಡ ತೊಳೆಯುತ್ತಿರಲಿಲ್ಲ. ಇಂತಹ ಹೊದಿಕೆಗಳ ಸ್ವಚ್ಛತೆ ಬಗ್ಗೆ ಸಿಎಜಿಯ ಇತ್ತೀಚೆಗಿನ ವರದಿ ಬೆಳಕು ಬೀರಿತ್ತು. ಆದುದರಿಂದ ಇನ್ನು ಮಂದೆ ರೈಲುಗಳಲ್ಲಿ ನೀಡುವ ದುರ್ವಾಸನೆಯಿಂದ ಕೂಡಿದ ಹೊದಿಕೆಗಳು ಮಾಯವಾಗಲಿವೆ.
ಕಡಿಮೆ ಉಣ್ಣೆಯ ಅಂಶವಿರುವ ಹಾಗೂ ಲಘು ವಿನ್ಯಾಸದ ಹೊದಿಕೆಗಳನ್ನು ಒದಗಿಸಲು ಭಾರತೀಯ ರೈಲ್ವೇ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಡಿಸೈನ್ ಅನ್ನು ಸಂಪರ್ಕಿಸಿದೆ. ರೈಲಿನ ಪ್ರತಿ ಪ್ರಯಾಣದಲ್ಲೂ ತಾಜಾ ಲಿನೆನ್ ಜೊತೆಗೆ ತೊಳೆದ ಹೊದಿಕೆಗಳನ್ನು ಪೂರೈಸುವುದು ನಮ್ಮ ಗುರಿ ಎಂದು ಈ ಯೋಜನೆಯಲ್ಲಿ ಪಾಲ್ಗೊಂಡಿರುವ ರೈಲ್ವೇ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.