ಬೋರಾಗದ ಹಾಡುಗಳೊಂದಿಗೆ 'ಡೇಸ್ ಆಫ್ ಬೋರಾಪುರ'

Update: 2017-07-31 09:27 GMT

ಬೆಂಗಳೂರು, ಜು.31: ಲೇಟಾದರೂ ಲೇಟೆಸ್ಟಾಗಿ ಸುದ್ದಿ ಮಾಡುತ್ತಿರುವ 'ಡೇಸ್ ಆಫ್ ಬೋರಾಪುರ' ಚಿತ್ರದ ಆಡಿಯೋ ಸಿಡಿ ಬಿಡುಗಡೆಗೊಳಿಸಿದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

"ಇತ್ತೀಚೆಗೆ ಚಿತ್ರರಂಗದಲ್ಲಿ ಹೊಸಬರ ಚಿತ್ರಗಳು ಯಶಸ್ವಿಯಾಗುತ್ತಿರುವುದನ್ನು ಕಾಣುತ್ತಿದ್ದೇವೆ‌. ಚಿತ್ರದ ಶೀರ್ಷಿಕೆಯನ್ನು ಆಕರ್ಷಕವಾಗಿದೆ. ನನಗೆ ಸಣ್ಣ ವಯಸ್ಸಿನವನಾಗಿದ್ದಾಗಲೇ ಚಿತ್ರದ ನಾಯಕರಲ್ಲೊಬ್ಬರಾಗಿರುವ ಸಿದ್ಧಾರ್ಥ್  ಬಗ್ಗೆ ನನಗೆ ಗೊತ್ತು. ಹಾಡುಗಳು ಆಕರ್ಷಕವಾಗಿವೆ. ಚಿತ್ರವೂ ಗೆಲುವಿನತ್ತ ಸಾಗಲಿ" ಎನ್ನುವುದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶುಭ ಹಾರೈಸಿದರು.

ಚಿತ್ರದಲ್ಲೊಂದು ವಿಶೇಷ ಪಾತ್ರ ನಿರ್ವಹಿಸಿರುವ ತೆಲುಗು ನಟ ಶಫಿ ಮಾತನಾಡಿ, "ಕನ್ನಡದಲ್ಲಿ ಇದು ಪ್ರಥಮ ಚಿತ್ರ. ಸ್ನೇಹಿತೆ ಅನಿತಾ ಭಟ್ ಕಾರಣದಿಂದಲೇ ನಾನು ಈ ಚಿತ್ರದಲ್ಲಿ ನಟಿಸಿದೆ. ಅವರಿಗೆ ತುಂಬಾ ವಂದನೆಗಳು" ಎಂದರು. ಜೊತೆಗೆ ಆಗಮಿಸಿದ್ದ ಅನಿತಾ ಭಟ್ ಚಿತ್ರ ಮತ್ತು ಪಾತ್ರದ ಬಗ್ಗೆ ಸಂತಸದ ಮಾತುಗಳನ್ನಾಡಿದರು. ಯುವ ನಟಿ ಅಮಿತಾ ರಂಗನಾಥ್ ಮಾತನಾಡಿ, "ಭಾಗ್ಯ ಎಂಬ ಹುಡುಗಿಯ ಪಾತ್ರ ನನ್ನದು. ಸಂಗೀತ ನಿರ್ದೇಶಕ ವಿವೇಕ್ ನನ್ನ ಸ್ಕೂಲ್ಮೇಟ್. ಆದರೆ ಆತ ಇಷ್ಟು ಪ್ರತಿಭಾವಂತ ಎಂದು ತಿಳಿದಿರಲಿಲ್ಲ" ಎಂದು ಅಚ್ಚರಿ ವ್ಯಕ್ತಪಡಿಸಿದರು.

ಅತಿಥಿಯಾಗಿ ಆಗಮಿಸಿದ್ದ ಚಿತ್ರ ಲೋಕ.ಕಾಮ್ ನ ವೀರೇಶ್ ಮಾತನಾಡಿ, "ಸಂಗೀತ ನಿರ್ದೇಶಕರು ತುಂಬಾ ಆಕರ್ಷಕವಾದ ಹಾಡುಗಳನ್ನು ನೀಡಿದ್ದಾರೆ. ಆರಂಭ ಮಾತ್ರವಲ್ಲ, ಹೆಸರು ಬಂದ ಮೇಲೆಯೂ ಇದೇ ತರಹ ಸಂಗೀತ ನೀಡುತ್ತಿರಲಿ" ಎಂದು ಹಾರೈಸುತ್ತಾ, "ಚಿತ್ರದ
ಶೀರ್ಷಿಕೆ ಹೊರತು ಪಡಿಸಿ ಎಲ್ಲ ಮಾಹಿತಿಗಳನ್ನು ಇಂಗ್ಲಿಷ್ ನಲ್ಲಿ ಹಾಕಲಾಗಿದೆ. ಆದರೆ ಇನ್ನುಮುಂದೆ ಕನ್ನಡವನ್ನೇ ಬಳಸುವಂತೆ" ಸಲಹೆ ನೀಡಿದರು.‌

ಚಿತ್ರದ ನಾಯಕರಲ್ಲೊಬ್ಬರಾದ ಪ್ರಶಾಂತ್ ಸಿನಿಮಾದಲ್ಲಿ ತಮ್ಮ ಪಾತ್ರಕ್ಕೆ ಬಳಸಿದ್ದ ಬಿಳಿಮುಂಡು ಕೆಂಪು ಅಂಗಿಯ ಕಾಸ್ಟ್ಯೂಮಲ್ಲೇ ಬಂದಿದ್ದರು! ನಾಯಕಿ ಪ್ರಕೃತಿ ಮಾತನಾಡಿ, ತಮ್ಮ ಪಾತ್ರದ ಹೆಸರು ಲಕ್ಷ್ಮೀ. ಸೈಲೆಂಟ್, ಮುಗ್ದೆಯ ಪಾತ್ರ ಎಂದರು. ಸಂಗೀತ ನಿರ್ದೇಶಕ
ವಿವೇಕ್ ಚಕ್ರವರ್ತಿ ತಮಗಿದು ಪ್ರಥಮ ಅವಕಾಶ ಎಂದರು.

ನಿರ್ಮಾಪಕ ಮಧು ಬಸವರಾಜ್ ಮಾತನಾಡಿ ಐಟಿ ಬ್ಯಾಕ್ ಗ್ರೌಂಡ್ ನಿಂದ  ಬಂದಿರುವ ತಾನು ಪ್ಯಾಷನ್ ಗಾಗಿ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾಗಿ ಹೇಳಿದರು. ಚಿತ್ರದಲ್ಲಿ ಒಂದು ಪಾತ್ರ ನಿರ್ವಹಿಸಿರುವ ದಿನೇಶ್ ಮಂಗಳೂರು ಮತ್ತು ಅವರ ಪುತ್ರ, ಚಿತ್ರದ ಮತ್ತೋರ್ವ ನಾಯಕ‌ನಾಗಿ ನಟಿಸಿರುವ ಜ್ಯೂನಿಯರ್ ರಕ್ಷಿತ್ ಶೆಟ್ಟಿಯಂತೆ ಗಮನ ಸೆಳೆದ ಸೂರ್ಯ ಸಿದ್ಧಾರ್ಥನ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ಚಿತ್ರದ ಸಂಕಲನ ಮತ್ತು ನಿರ್ದೇಶನವನ್ನು ಎನ್ ಆದಿತ್ಯ ಕುಣಿಗಲ್ ನಿರ್ವಹಿಸಿದ್ದಾರೆ. ಯುವಗಾಯಕಿ ಪಾವನಿಯ ಪ್ರಾರ್ಥನೆ ಮತ್ತು ನಿರ್ಮಾಪಕರಾದ ಅಜಿತ್ ಕುಮಾರ್ ಗದ್ದಿ ಮತ್ತು ರಕ್ಷಾ ಗದ್ದಿ ಹಾಗೂ ಶಾಂತಲಾ ಮಧು ಕುಟುಂಬ ದೀಪ ಬೆಳಗುವ ಮೂಲಕ  ಕಾರ್ಯಕ್ರಮದ  ಶುಭಾರಂಭವಾಗಿತ್ತು. ಚಿತ್ರದಲ್ಲೊಂದು ಪಾತ್ರವಹಿಸಿರುವ ಟಿ ವಿ ನಿರೂಪಕ ಚಂದನ್ ಕಾರ್ಯಕ್ರಮ ನಿರೂಪಿಸಿದರ‍ು. ಪ್ರದರ್ಶಿಸಲಾದ ಟ್ರೇಲರ್ ಮತ್ತು ಹಾಡುಗಳಲ್ಲಿ ಸಂಗೀತದೊಂದಿಗೆ ಜಿಎನ್ ಶರವಣನ್ ರ ಛಾಯಾಗ್ರಹಣ ಮತ್ತು ಕಲಾ ನಿರ್ದೇಶನದ ಗುಣಮಟ್ಟ ಮನಮೋಹಕವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News