ಬಿಹಾರದಲ್ಲಿ ಜೆಡಿಯು- ಬಿಜೆಪಿ ಮೈತ್ರಿ ಜನಾದೇಶಕ್ಕೆ ವಿರುದ್ಧ: ಶರದ್ ಯಾದವ್
ಹೊಸದಿಲ್ಲಿ, ಜು.31: ಬಿಹಾರದಲ್ಲಿ ಬಿಜೆಪಿಯೊಂದಿಗೆ ಜೆಡಿಯು ಮೈತ್ರಿ ಮಾಡಿಕೊಂಡಿರುವ ಬಗ್ಗೆ ಕೊನೆಗೂ ಮೌನ ಮುರಿದಿರುವ ಜೆಡಿಯು ಸ್ಥಾಪಕಾಧ್ಯಕ್ಷ ಮತ್ತು ಹಿರಿಯ ಮುಖಂಡ ಶರದ್ ಯಾದವ್, ಇದು ಜನಾದೇಶಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.
ಸಂಸತ್ತಿನ ಹೊರಗೆ ಸುದ್ದಿಗಾರರ ಜತೆ ಮಾತನಾಡಿದ ಯಾದವ್, ಈ ಮೈತ್ರಿಯನ್ನು ನಾನು ಒಪ್ಪಲಾರೆ. ಬಿಹಾರದಲ್ಲಿ ಜನಾದೇಶ ದೊರಕಿರುವುದು ಇದಕ್ಕಲ್ಲ ಎಂದರು.
ಆರ್‌ಜೆಡಿ ಮುಖಂಡ ಲಾಲೂಪ್ರಸಾದ್ ಯಾದವ್ ಅವರು ಶರದ್ ಯಾದವ್ ಜೊತೆ ಎರಡು ಸುತ್ತಿನ ಮಾತುಕತೆ ನಡೆಸಿದ್ದು ತನ್ನ ಜೊತೆ ಸೇರಲು ಆಹ್ವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿತೀಶ್ ಕುಮಾರ್ ‘ಮಹಾಮೈತ್ರಿ’ಯನ್ನು ಕಡಿದುಕೊಂಡು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಶರದ್ ಯಾದವ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಈ ಮಧ್ಯೆ, ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಶರದ್ ಯಾದವ್‌ರನ್ನು ಸಂಪರ್ಕಿಸಿದ್ದರೂ ಎನ್‌ಡಿಎಯಲ್ಲಿ ತಾನು ನಿರ್ವಹಿಸಲಿರುವ ಪಾತ್ರದ ಬಗ್ಗೆ ಖಚಿತತೆ ಇಲ್ಲದ ಕಾರಣ ಶರದ್ ಕಠಿಣ ನಿಲುವನ್ನು ಮುಂದುವರಿಸಿದ್ದು , ಟ್ವಿಟರ್ ಬರಹಗಳ ಮೂಲಕ ಬಿಹಾರದ ವಿದ್ಯಮಾನಕ್ಕೆ ತನ್ನ ಅಸಮಾಧಾನ ಸೂಚಿಸುತ್ತಿದ್ದಾರೆ.