ಗೂರ್ಖಾಲ್ಯಾಂಡ್ ಮುಷ್ಕರ: ಕೇಂದ್ರದ ಹಸ್ತಕ್ಷೇಪಕ್ಕೆ 10 ದಿನಗಳ ಕಾಲಾವಕಾಶ ನೀಡಿದ ಜಿಜೆಎಂ
ದಾರ್ಜಿಲಿಂಗ್,ಜು.31: ಗೂರ್ಖಾ ಜನಮುಕ್ತಿ ಮೋರ್ಚಾ(ಜಿಜೆಎಂ) ಪ್ರತ್ಯೇಕ ಗೂರ್ಖಾಲ್ಯಾಂಡ ರಾಜ್ಯ ಸ್ಥಾಪನೆಗಾಗಿ ನಡೆಯುತ್ತಿರುವ ಮುಷ್ಕರದಲ್ಲಿ ಕೇಂದ್ರದ ಹಸ್ತಕ್ಷೇಪಕ್ಕೆ 10 ದಿನಗಳ ಅಂತಿಮ ಗಡುವು ನೀಡಿದೆ. ಇದೇ ವೇಳೆ, ದಾರ್ಜಿಲಿಂಗ್ ಗುಡ್ಡಗಾಡು ಪ್ರದೇಶದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಬಂದ್ ಸೋಮವಾರ 47ನೇ ದಿನಕ್ಕೆ ಕಾಲಿರಿಸಿದೆ.
ಇಲ್ಲಿ ಈ ವಿಷಯವನ್ನು ತಿಳಿಸಿದ ಜಿಜೆಎಂ ಸಹಾಯಕ ಪ್ರಧಾನ ಕಾರ್ಯದರ್ಶಿ ಬಿನಯ್ ತಮಾಂಗ್ ಅವರು, ದಾರ್ಜಿಲಿಂಗ್ ಹೊತ್ತಿ ಉರಿಯುತ್ತಿರುವಾಗ ಕೇಂದ್ರ ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ ಎಂದು ಹೇಳಿದರು.
ದಾರ್ಜಿಲಿಂಗ್‌ನಲ್ಲಿಯ ಎಲ್ಲ ಗುಡ್ಡಗಾಡು ಪಕ್ಷಗಳ ಸಂಘಟನೆಯಾದ ಗೂರ್ಖಾಲ್ಯಾಂಡ್ ಚಳವಳಿ ಸಮನ್ವಯ ಸಮಿತಿಯ ನಿಯೋಗವು ಸರ್ವಪಕ್ಷ ಸಭೆಗಾಗಿ ದಿಲ್ಲಿಯಲ್ಲಿದ್ದು, ಇಲ್ಲಿಯ ಬಿಕ್ಕಟ್ಟಿನ ಕುರಿತು ಮಾಹಿತಿ ನೀಡಲು ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ ಅವರೊಂದಿಗೆ ಭೇಟಿಗೆ ಸಮಯವನ್ನು ಕೋರಿದೆ. ಇದು ದಾರ್ಜಿಲಿಂಗ್‌ನ ಇತಿಹಾಸದಲ್ಲಿಯೆ ಅತ್ಯಂತ ಸುದೀರ್ಘ ಬಂದ್ ಆಗಿದ್ದು, ಕೇಂದ್ರವು ದೃಢವಾದ ಕ್ರಮವನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಭಾರತೀಯ ಗೂರ್ಖಾ ಪರಿಸಂಘದ ಅಧ್ಯಕ್ಷ ಸುಖ್ಮನ್ ಮೋಕ್ತನ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.