ನಿತೀಶ್ ನೇತೃತ್ವದ ಸರಕಾರ ರಚನೆ ಪ್ರಶ್ನಿಸಿ ಪಿಐಎಲ್ ತಿರಸ್ಕರಿಸಿದ ಪಾಟ್ನಾ ಉಚ್ಚ ನ್ಯಾಯಾಲಯ
ಪಾಟ್ನಾ, ಜು.31: ಬಿಹಾರದಲ್ಲಿ ಜೆಡಿಯು ಬಿಜೆಪಿ ಮೈತ್ರಿಯಿಂದ ನೂತನ ಸರಕಾರ ರೂಪಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಪಾಟ್ನಾ ಉಚ್ಚ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ.
ವಿಧಾನ ಸಭೆಯಲ್ಲಿ ಸರಕಾರ ಬಹುಮತ ಸಾಬೀತುಪಡಿಸಿದ ಬಳಿಕ ನ್ಯಾಯಾಲಯ ಮಧ್ಯಪ್ರವೇಶಿಸುವ ಅಗತ್ಯ ಇರುವುದಿಲ್ಲ ಎಂದು ನ್ಯಾಯಮೂರ್ತಿ ರಾಜೇಂದ್ರ ಮೆನನ್ ಹಾಗೂ ನ್ಯಾಯಮೂರ್ತಿ ಅನಿಲ್ ಕುಮಾರ್ ಉಪಾಧ್ಯಾಯ ನೇತೃತ್ವದ ನ್ಯಾಯಪೀಠ ಹೇಳಿದೆ.
ವಿಧಾನ ಸಭೆಯಲ್ಲಿ 80 ಶಾಸಕರನ್ನು ಒಳಗೊಂಡ ಅತಿ ದೊಡ್ಡ ಪಕ್ಷವಾದ ಆರ್‌ಜೆಡಿಯನ್ನು ಸರಕಾರ ರಚಿಸಲು ರಾಜ್ಯಪಾಲರು ಮೊದಲು ಆಹ್ವಾನಿಸಬೇಕಿತ್ತು ಎಂದು ಆರ್‌ಜೆಡಿ ಶಾಸಕರಾದ ಸರೋಜ್ ಯಾದವ್, ಸಂಜನ್ ಕುಮಾರ್ ಹಾಗೂ ಗ್ರಾಮದ ಮಾಜಿ ನಾಯಕ ಡಿಯೋ ನಾರಾಯಣ್ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದರು.
ನೂತನ ಸರಕಾರ ಅಸಾಂವಿಧಾನಿಕ ಎಂದು ಹೇಳಿರುವ ಮನವಿ, 2015ರ ಬಿಹಾರ್ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಯು, ಆರ್‌ಜೆಡಿ ಹಾಗೂ ಬಿಜೆಪಿ ಜನಾದೇಶ ದೊರಕಿತ್ತು ಎಂದಿದೆ.
ಆಡಳಿತಾರೂಢ ಮಹಾಮೈತ್ರಿಯಿಂದ ಹೊರಬಂದು ಬಿಜೆಪಿಯೊಂದಿಗೆ ಕೈಜೋಡಿಸಿದ ಒಂದು ದಿನದ ಬಳಿಕ ಅಂದರೆ ಜುಲೈ 27ರಂದು ಈ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಲಾಗಿತ್ತು. ಜುಲೈ 28ರಂದು ನ್ಯಾಯಾಲಯ ಅರ್ಜಿ ಸ್ವೀಕರಿಸಿತ್ತು. ಆದರೆ, ವಿಚಾರಣೆಯನ್ನು ಜುಲೈ 31ಕ್ಕೆ ನಿಗದಿಪಡಿಸಿತ್ತು.