ಪ್ರಕಟನೆ ನಿಲ್ಲಿಸಿದ ‘ಗುರುತು’!, ಕುಸಿದ ಕಟ್ಟಡದ ಹೊಣೆ ಯಾರಿಗೆ?

Update: 2017-07-31 18:49 GMT

ಮತ್ತೊಂದು ಪತ್ರಿಕೆ ನೇಪಥ್ಯಕ್ಕೆ

ಮುಂಬೈಯ ಕನ್ನಡ ಮಾಸಿಕಗಳಲ್ಲಿ ತನ್ನದೇ ಆದ ಮಹತ್ವವನ್ನು ಪಡೆದಿದ್ದ ಬಿಲ್ಲವ ಜಾಗೃತಿ ಬಳಗ ಪ್ರಕಟಿಸುತ್ತಿದ್ದ ‘ಗುರುತು’ ಪತ್ರಿಕೆ ನೇಪಥ್ಯಕ್ಕೆ ಸೇರಿದೆ. ಹದಿನಾರು ವರ್ಷಗಳ ಕಾಲ ತನ್ನ ಪ್ರಧಾನ ಲೇಖನಗಳ ಮೂಲಕ ಗಮನ ಸೆಳೆದಿರುವ ಕನ್ನಡದ ‘ಗುರುತು’ ಮಾಸಿಕ 2001ರ ಜೂನ್‌ನಿಂದ ನಿರಂತರವಾಗಿ ಪ್ರಕಟಗೊಳ್ಳುತ್ತಿದ್ದು ಇದೀಗ 2017ರ ಮೇ ತಿಂಗಳ ಸಂಚಿಕೆಯ ನಂತರ ಕೊನೆಗೊಂಡಿದೆ. ಆರಂಭದಲ್ಲಿ ಟ್ಯಾಬ್ಲಾಯ್ಡಾ ಆಕಾರದಲ್ಲಿದ್ದರೂ ಆನಂತರ ಪುಸ್ತಕ ರೂಪದಲ್ಲಿ ಅದು ಪ್ರಕಟಗೊಳ್ಳುತ್ತಿತ್ತು. ಸಂಶೋಧಕ ಬಾಬು ಶಿವ ಪೂಜಾರಿ ಈ ಪತ್ರಿಕೆಯ ಸಂಪಾದಕರಾಗಿದ್ದರು.

ಬಿಲ್ಲವ ಜಾಗೃತಿ ಬಳಗವು ತೊಂಬತ್ತರ ದಶಕದ ಕೊನೆಗೆ ಹುಟ್ಟಿಕೊಂಡಾಗ ಅದಕ್ಕೊಂದು ಕಾರಣ ಇತ್ತು. ಇದೀಗ ಜಾಗೃತಿ ಬಳಗವು ಬಿಲ್ಲವರ ಎಸೋಸಿಯೇಶನ್, ಮುಂಬೈ ಇದರ ಜೊತೆಗೆ ವಿಲೀನಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಬಿಲ್ಲವರ ಎಸೋಸಿಯೇಶನ್, ಮುಂಬೈಯಲ್ಲಿ ‘ಅಕ್ಷಯ’ ಮಾಸಿಕವನ್ನು ಪ್ರಕಟಿಸುತ್ತಿದೆ. ಹಾಗಾಗಿ ಎರಡೆರಡು ಮಾಸಿಕಗಳ ಅಗತ್ಯ ಇಲ್ಲದ್ದರಿಂದ ‘ಗುರುತು’ ನೇಪಥ್ಯಕ್ಕೆ ಸೇರುವಂತಾಗಿದೆ.

15-4-2001ರಂದು ಬಿಲ್ಲವ ಜಾಗೃತಿ ಬಳಗದ ಹುಟ್ಟಿನೊಂದಿಗೆ ‘ಗುರುತು’ ಪ್ರಾಯೋಗಿಕ ಸಂಚಿಕೆ ಬಂದಿತು. ನಿರಂತರವಾಗಿ ಅದು ಪ್ರಕಟಗೊಳ್ಳಲು ಆರಂಭವಾದುದು 2001ರ ಜೂನ್ ತಿಂಗಳಿನಿಂದ.
ಸಂಪಾದಕರಾಗಿದ್ದ ಬಾಬು ಶಿವಪೂಜಾರಿ ಅವರು ಕೊನೆಯ ಸಂಚಿಕೆಯಲ್ಲಿ ಬರೆಯುತ್ತಾ ಯಾವುದೇ ಜಾತಿ, ಜನಾಂಗ, ಧರ್ಮ, ರಾಜಕೀಯ ಪಕ್ಷ ಅಥವಾ ಗುಂಪುಗಳಿಗೆ ಸೀಮಿತವಾಗದೆ ಹದಿನಾರು ವರ್ಷಗಳಲ್ಲಿ ‘ಗುರುತು’ ತನ್ನ ಕರ್ತವ್ಯವನ್ನು ಮಾಡಿದೆ. ಸಾಂಸ್ಕೃತಿಕ ಮತ್ತು ಜಾಗೃತ ಭಾರತ ನಿರ್ಮಾಣಕ್ಕೆ ಒತ್ತಾಸೆಯಾಗುವ ಬರಹಗಳನ್ನು ಜನರಿಗೆ ಮುಟ್ಟಿಸುವ ಪ್ರಯತ್ನವನ್ನು ಮಾಡಿದೆ. ಮೂಢನಂಬಿಕೆ, ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ, ಸ್ತ್ರೀ ಅಸಮಾನತೆ, ಭ್ರೂಣಹತ್ಯೆ, ಮಾನಭಂಗಗಳಂತಹ ಸಾಮಾಜಿಕ ಮಹಾ ಪಿಡುಗುಗಳನ್ನು ಖಂಡಿಸಿ ಲೇಖನಗಳನ್ನು ‘ಗುರುತು’ ಕಾಲಕಾಲಕ್ಕೆ ಪ್ರಕಟಿಸಿ ಸಮಾಜವನ್ನು ಜಾಗೃತಗೊಳಿಸಿತ್ತು.

ಕನ್ನಡ, ತುಳು ಸಾಹಿತ್ಯಗಳಿಗೆ ಆದ್ಯತೆ ನೀಡಿತ್ತು. ಶೋಷಿತರ ರೈತರ ಧ್ವನಿಯಾಗಿ ಸ್ಪಂದಿಸಿತ್ತು... ಆರೋಗ್ಯ, ಶಿಕ್ಷಣ, ವರದಕ್ಷಿಣೆ ಪಿಡುಗು, ಧಾರ್ಮಿಕ ಅಸಮಾನತೆಗಳ ಬಗ್ಗೆ ಕ್ರಾಂತಿಕಾರಿ ಲೇಖನಗಳನ್ನು ಪ್ರಕಟಿಸಿದ ‘ಗುರುತು’ ಸಮಾಜವನ್ನು ಜಾಗೃತಗೊಳಿಸುವ ಕೆಲಸವನ್ನು ಕಾಲಕಾಲಕ್ಕೆ ಮಾಡುತ್ತ ಬಂದಿತ್ತು ಎಂದು ಅಭಿಮಾನದಿಂದ ಹೇಳಿಕೊಂಡಿದ್ದಾರೆ.

ಹೌದು, ‘ಗುರುತು’ ಅನೇಕ ಸಾಮಾಜಿಕ ಅಸಮಾನತೆಗಳ ವಿರುದ್ಧ ಲೇಖನಗಳಿಂದ ಜನರಲ್ಲಿ ಜಾಗೃತಿ ಮೂಡಿಸಿದೆ. ಅವುಗಳಲ್ಲಿ ಮಂದಾರ್ತಿ ದೇವಸ್ಥಾನದ ಯಕ್ಷಗಾನ ಮಂಡಳಿಯಲ್ಲಿ ಬಿಲ್ಲವ ಕಲಾವಿದರಿಗೆ ಸಂಪ್ರದಾಯದ ಹೆಸರಲ್ಲಿ ಪ್ರವೇಶ ನಿರಾಕರಣೆ ಮಾಡಿದಾಗ 2004 ರಲ್ಲಿ ಗೋವಿಂದಪ್ಪನವರ ನೇತೃತ್ವದಲ್ಲಿ ಚಳವಳಿ ನಡೆಸಿ ಕೋರ್ಟಿನ ಮೂಲಕ ಬಿಲ್ಲವರು ಹಕ್ಕನ್ನು ಪಡೆಯಬೇಕಾದ ಆ ದಿನಗಳಲ್ಲಿ ‘ಗುರುತು’ ಕೂಡಾ ತನ್ನ ಹಲವು ಲೇಖನಗಳ ಮೂಲಕ ಸಕ್ರಿಯ ಪಾತ್ರ ನಿರ್ವಹಿಸಿರುವುದು ಎಲ್ಲರಿಗೂ ಗೊತ್ತಿದ್ದ ಸಂಗತಿ.

‘ಗುರುತು’ ಮಾಸಿಕದಲ್ಲಿ ಮುಖಪುಟ ಲೇಖನಗಳನ್ನು ವಿವಿಧ ಕಾವ್ಯನಾಮಗಳಲ್ಲಿ ಬರೆಯುತ್ತಿದ್ದವರು ಪಂಜು ಗಂಗೊಳ್ಳಿಯವರು. ಕೇವಲ ಮುಖಪುಟ ಲೇಖನ ಮಾತ್ರವಲ್ಲ, ಕಚಗುಳಿ, ಬುದ್ಧ, ಇದು ಮುಂಬೈ, ಈ ಜೀವ ಈ ಜಗತ್ತು, ವ್ಯಕ್ತಿ ವಿಶೇಷ, ತುಂಟಾಟ....ಮುಂತಾದ ಕಾಲಂಗಳನ್ನು ಕೂಡಾ ಪಂಜು ಗಂಗೊಳ್ಳಿಯವರೇ ಬರೆಯುತ್ತಿದ್ದರು.

ಸಂಪಾದಕ ಬಾಬು ಶಿವ ಪೂಜಾರಿ ಇಲ್ಲಿ ಮತ್ತೊಂದು ಮಹತ್ವದ ಮಾತು ಹೇಳಿದ್ದು ಗಮನಿಸಬೇಕು. ‘ಗುರುತು’ವಿನ ಸಂಪಾದಕ ತಾನಾಗಿದ್ದರೂ ‘ಗುರುತು’ ಪತ್ರಿಕೆಯ ಹೆಚ್ಚಿನ ಶ್ರೇಯಸ್ಸು ಪಂಜು ಗಂಗೊಳ್ಳಿ ಅವರಿಗೆ ಸೇರತಕ್ಕದ್ದೇ ಆಗಿದೆ. ಪಂಜು ಅವರು ‘ಗುರುತು’ವಿನ ಆತ್ಮವಾಗಿದ್ದರು ಎಂದರೆ ಎಲ್ಲವೂ ಅರ್ಥವಾದೀತು.

ಗುರುತು ಪತ್ರಿಕೆ ಹುಟ್ಟಲೂ ಒಂದು ಕಾರಣವಿತ್ತು. ಸಂಪಾದಕ ಬಾಬು ಶಿವ ಪೂಜಾರಿ ಅವರು ಐದು ವರ್ಷ ‘ಅಕ್ಷಯ’ ಮಾಸಿಕದ ನಿರ್ವಾಹಕ ಸಂಪಾದಕರಾಗಿದ್ದರು. ಅದರಲ್ಲಿ ‘ಸಂಸ್ಕೃತಿ ಚಿಂತನ’ ಅಂಕಣದಲ್ಲಿ ನಾರಾಯಣ ಗುರುಗಳ ಬಗ್ಗೆ ಬರೆಯುತ್ತಿದ್ದರು. ಅಕ್ಷಯಕ್ಕೆ ರಾಜೀನಾಮೆಯಿತ್ತ ನಂತರವೂ ಗುರುಗಳ ಬಗ್ಗೆ ಲೇಖನ ಸ್ವಲ್ಪ ಕಾಲ ಮುಂದುವರಿದಿತ್ತು. ಆದರೆ 20ನೆ ಕಂತನ್ನು ಅವರು ಪ್ರಕಟಿಸಲಿಲ್ಲ. ಆ ಕಾರಣಕ್ಕಾಗಿ ಪತ್ರಿಕೆ ಮಾಡಬೇಕೆಂಬ ಬಾಬು ಶಿವ ಪೂಜಾರಿ ಅವರ ಸಂಕಲ್ಪವೇ ‘ಗುರುತು’ ಮಾಸಿಕ ಹುಟ್ಟಲು ಕಾರಣವಾಯಿತು. ‘ಗುರುತು’ ರಿಜಿಸ್ಟರ್ ಆದ ಸಂದರ್ಭಕ್ಕೆ ಸರಿಯಾಗಿ ಬಿಲ್ಲವ ಜಾಗೃತಿ ಬಳಗ ಹುಟ್ಟಿಕೊಂಡಿತು. ‘ಗುರುತು’ ಪತ್ರಿಕೆಯನ್ನು ಬಿಲ್ಲವ ಜಾಗೃತಿ ಬಳಗದವರು ಪ್ರಕಾಶನ ಮಾಡುವುದಾಗಿ ಹೇಳಿದರು. ಬಾಬು ಶಿವ ಪೂಜಾರಿಯವರೂ ಅದಕ್ಕೆ ಒಪ್ಪಿಗೆ ನೀಡಿದರು.

ಇದೀಗ ಬಿಲ್ಲವ ಜಾಗೃತಿ ಬಳಗವು ಬಿಲ್ಲವರ ಎಸೋಸಿಯೇಶನ್‌ನೊಂದಿಗೆ ವಿಲೀನ ಆಗುತ್ತಿರುವ ಕಾರಣ ‘ಗುರುತು’ ಪ್ರಕಾಶನವನ್ನು ಜಾಗೃತಿ ಬಳಗ ಸ್ಥಗಿತಗೊಳಿಸುವುದಾಗಿ 14-4-2017ರ ಕಾರ್ಯಕಾರಿ ಸಮಿತಿಯ ನಿರ್ಧಾರವನ್ನು ಸಂಪಾದಕರಿಗೆ ಪತ್ರದಲ್ಲಿ ಬರೆಯಲಾಗಿದೆ. ಈ ಕಾರಣ ಮೇ ತಿಂಗಳ 2017ರ ಕೊನೆಯ ಸಂಚಿಕೆಯ ನಂತರ ‘ಗುರುತು’ ನೇಪಥ್ಯಕ್ಕೆ ಸೇರಿತು. ಹಾಗಂತ ‘ಗುರುತು’ ಶಾಶ್ವತವಾಗಿ ನಿಂತಿದೆ ಎಂದು ಅರ್ಥ ಮಾಡಬೇಕಿಲ್ಲ. ಸಂಪಾದಕರು ಕೊನೆಯಲ್ಲಿ ಬರೆದಿರುವ ಮಾತಿನಂತೆ ‘‘ಜೀವನದ ಹೊಸ ಅಧ್ಯಾಯವನ್ನು ಆರಂಭಿಸಲು ಮುಂದಿನ ಬದಲಾದ ನಡೆ ಇದು ಆಗಿರಲೂ ಬಹುದು. ಕನ್ನಡ ಮತ್ತು ತುಳುವಿನ ಸೇವೆಗೆ ಅಗತ್ಯ ಹಾಗೂ ಅನಿವಾರ್ಯ ಕಂಡು ಬಂದಲ್ಲಿ ಹೊಸ ರೂಪದಲ್ಲೋ, ಹೊಸ ಹೆಸರಲ್ಲೋ ‘ಗುರುತು’ ಮರುಹುಟ್ಟು ಪಡೆಯಲಾರದು ಎನ್ನುವಂತಿಲ್ಲ.’’ ಜಾಗೃತಿ ಬಳಗದ ಸದಸ್ಯರಿಗೆ ಇನ್ನು ಮುಂದೆ ‘ಅಕ್ಷಯ’ ಮಾಸಿಕವನ್ನು ಕಳುಹಿಸುವುದಾಗಿ ಬಳಗ ಹೇಳಿರುತ್ತದೆ. 

* * *

ಕಟ್ಟಡ ಕುಸಿದ ನಂತರದ ದಿನಗಳು
 ಮುಂಬೈಯ ಘಾಟ್‌ಕೋಪರ್‌ನಲ್ಲಿ ಕಳೆದ ವಾರ ನಾಲ್ಕು ಮಾಳಿಗೆಯ ಸಿದ್ಧಿ ಸಾಯಿ ಕೋ. ಅಪರೇಟಿವ್ ಹೌಸಿಂಗ್ ಸೊಸೈಟಿ ಎನ್ನುವ 4 ಮಾಳಿಗೆಯ ಕಟ್ಟಡ ಕುಸಿದು ಬಿದ್ದು ಒಂದೂವರೆ ಡಜನ್ನು ಜನ ಸಾವನ್ನಪ್ಪಿದರೆ ಅನೇಕರು ತೀವ್ರ ಗಾಯಗೊಂಡರು. ಈ ಕಟ್ಟಡಕ್ಕೆ ಮೂವತ್ತು ವರ್ಷಗಳಾಗಿತ್ತು. ಇದರ ಪಿಲ್ಲರ್ ಬಹಳ ದುರ್ಬಲವಾಗಿತ್ತು ಎನ್ನಲಾಗಿದೆ. ಕಟ್ಟಡದ ತಳ ಮಜಲಿನಲ್ಲಿ ನರ್ಸಿಂಗ್ ಹೋಮ್‌ನ ರಿಪೇರಿ ಕಾರ್ಯ ಕಾನೂನು ನಿಯಮಗಳನ್ನು ಪಾಲಿಸದೆ ನಡೆಯುತ್ತಿತ್ತು. ಈ ನರ್ಸಿಂಗ್ ಹೋಮ್ ಶಿವಸೈನಿಕ ಸುನೀಲ್ ಶಿತಪ್ ಎಂಬವರದ್ದಾಗಿತ್ತು. ಶಿವಸೇನೆಯ ಹಿಡಿತದಲ್ಲಿ ಮುಂಬೈ ಮಹಾನಗರ ಪಾಲಿಕೆ ಆಡಳಿತ ಇರುವುದರಿಂದ ಯಾವ ಭಯವೂ ಇಲ್ಲದೆ ತಳಮಜಲಿನ ಒಂದು ಪಿಲ್ಲರ್ ತೆಗೆದು ನರ್ಸಿಂಗ್ ಹೋಮ್ ತಮಗೆ ಬೇಕಾದಂತೆ ರಿಪೇರಿ ಮಾಡಲು ಮುಂದಾಗಿದ್ದ ಶಿವ ಸೈನಿಕ ಸುನೀಲ್ ಶಿತಪ್, ಆನಂತರ ಬಂಧನವಾಯಿತು.

ಅದೂ ಬಹಳ ಕಷ್ಟದಲ್ಲಿ. ನಿವಾಸಿಗಳಿಗೆ ಖಾಲಿ ಮಾಡಲು ಮನಪಾ ನೋಟಿಸ್ ನೀಡಿತ್ತು ಎಂಬಂತಹ ಸಾಕ್ಷಿಗಳನ್ನೂ ನೀಡಿ ಅವರು ಕಾನೂನಿನ ಹಿಡಿತದಿಂದ ಪಾರಾಗಲು ನೋಡಿದ್ದರು. ಆದರೂ ನಾಗರಿಕರ ತೀವ್ರ ಆಕ್ರೋಶದ ಕಾರಣ ಮತ್ತು ಮುಖ್ಯ ಮಂತ್ರಿಯವರು ಭೇಟಿ ನೀಡಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ ನಂತರ ಐಪಿಸಿಯ ಕಲಂ 304-2, (ಉದ್ದೇಶವಿಲ್ಲದ ಹತ್ಯೆ) 336 (ಬೇರೆಯವರ ಜೀವಕ್ಕೆ ಹಾನಿ ತರುವ ಕೆಲಸ ಮಾಡಿರುವುದು)..... ಇತ್ಯಾದಿಗಳನ್ನು ಮುಂದಿಟ್ಟು ಬಂಧಿಸಲಾಯಿತು. ಪವಾಡ ಸದೃಶ್ಯ ಎಂಬಂತೆ ಕುಸಿದ ಕಟ್ಟಡದ ಕೆಳಗಿದ್ದವರಲ್ಲಿ ಕೆಲವರು ಬದುಕುಳಿದರು (ಮೊಬೈಲ್ ಸಹಾಯದಿಂದ).

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ವಿಧಾನ ಸಭೆಯಲ್ಲಿ ‘‘ಆ ಕಟ್ಟಡ ಅಪಾಯಕಾರಿ ಸೂಚಿಯಲ್ಲಿರಲಿಲ್ಲ. ಅಷ್ಟೇ ಅಲ್ಲ, ಅದರಲ್ಲಿ ನಿರ್ಮಾಣವಾಗುತ್ತಿದ್ದ ಅನಧಿಕೃತ ಕಾರ್ಯಗಳ ಕುರಿತು ಯಾರೇ ಅಧಿಕಾರಿಯ ವಿರುದ್ಧ ದೂರು ಬಂದಿರಲಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಕಟ್ಟಡದ ಪಿಲ್ಲರ್‌ಗೆ ಹಾನಿ ಮಾಡಲಾಗಿತ್ತು ಎಂಬ ಅಂಶ ತಿಳಿದು ಬಂದಿದೆ. ಒಂದು ವೇಳೆ ತನಿಖೆಯಲ್ಲಿ ಯಾವನಾದರೂ ಅಧಿಕಾರಿ ದೋಷಿ ಎಂದು ತಿಳಿದು ಬಂದರೆ ಕಾರ್ಯಾಚರಣೆ ನಡೆಸಲಾಗುವುದು’’ ಎಂದರು. ಸತ್ತವರ ಕುಟುಂಬಕ್ಕೆ ಪರಿಹಾರವನ್ನೂ ಘೋಷಿಸಿದರು. ಈ ಘಟನೆ ಮುಂಬೈ ಮನಪಾ ಸಭಾಗೃಹದಲ್ಲೂ ಪ್ರತಿಧ್ವನಿಸಿದ್ದು ಶಿವಸೇನಾ ನೇತಾನ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಪಕ್ಷ ಆಗ್ರಹಿಸಿತು.

ವಿಧಾನ ಸಭೆಯಲ್ಲಿ ವಿಪಕ್ಷ ನೇತಾ ರಾಧಾಕೃಷ್ಣ ವಿಖೆ ಪಾಟೀಲ್ ಅವರಂತೂ ‘‘ಬಿಎಂಸಿ ಒಂದು ಪೈವೇಟ್ ಲಿಮಿಟೆಡ್ ಕಂಪೆನಿ ಆಗಿಬಿಟ್ಟಿದೆ. ಅದು ಕೆಲವೇ ಕೆಲವು ಬೆರಳೆಣಿಕೆಯ ಜನರ ಹಿತದೃಷ್ಟಿಯನ್ನು ಮಾತ್ರ ಗುರುತಿಸುತ್ತಿದೆ’’ ಎಂದು ಟೀಕಿಸಿದರು.

ಆ ಕಟ್ಟಡದ ನಿವಾಸಿಗಳು ಕಟ್ಟಡ ಕುಸಿಯುವ ಮೊದಲು ಮನಪಾ ಅಧಿಕಾರಿಗಳನ್ನು ಭೇಟಿ ಮಾಡಿ ತಳ ಅಂತಸ್ತಿನ ಅನಧಿಕೃತ ನಿರ್ಮಾಣದ ಬಗ್ಗೆ ಭಯಪಟ್ಟು ದೂರು ನೀಡಿ ಚರ್ಚಿಸಿದ್ದರು. ಆದರೆ ಮಾಲಕ ಶಿತಾಪ್ ಶಿವಸೇನೆಯ ನಾಯಕನಾಗಿರುವುದರಿಂದ ಅಧಿಕಾರಿಗಳು ಏನೂ ಕ್ರಮ ಕೈಗೊಳ್ಳಲಿಲ್ಲ. ಅಷ್ಟೇ ಅಲ್ಲ, ಆತ ಅಲ್ಲಿನ ನಿವಾಸಿಗಳನ್ನು ಬೆದರಿಸಿದ್ದ ಎಂಬ ಅಂಶವೂ ತಿಳಿದು ಬಂದಿದೆ. ‘‘ಈ ಕ್ಷೇತ್ರದಲ್ಲಿ ಎ, ಬಿ ಮತ್ತು ಸಿ ವಾರ್ಡ್ ಗಳಲ್ಲಿ ನೂರಾರು ಅನಧಿಕೃತ ಕಟ್ಟಡ ಕೆಲಸಗಳು ನಡೆಯುತ್ತಿವೆ. ಆದರೂ ಯಾವ ಅಧಿಕಾರಿಯೂ ಕ್ರಮ ಕೈಗೊಳ್ಳಲಿಲ್ಲ. ಯಾರಾದರೂ ದೂರು ನೀಡಲು ಹೋದರೆ ರಿವಾಲ್ವರ್ ತೋರಿಸಲಾಗುತ್ತದೆ’’ ಎನ್ನುವುದು ಶಾಸಕ ರಾಜ್ ಪುರೋಹಿತರು ವಿಧಾನ ಸಭೆಯಲ್ಲಿ ನೀಡಿದ ಪ್ರತಿಕ್ರಿಯೆ.

ಈ ಘಟನೆಯ ನಂತರ ಮುಂಬೈಯಲ್ಲಿರುವ ಶಿಥಿಲ ಕಟ್ಟಡಗಳ ದುರಸ್ತಿ ಕಾರ್ಯಕ್ಕೆ ಶೀಘ್ರ ಮನಪಾ ಒಪ್ಪಿಗೆ ನೀಡಬೇಕು ಎಂದು ಸರಕಾರಕ್ಕೂ ಮನವರಿಕೆ ಆಗಿದೆ. ಯಾಕೆಂದರೆ ಈ ತನಕ ಶಿಥಿಲ ಕಟ್ಟಡಗಳನ್ನು ದುರಸ್ತಿ ಮಾಡಲು ಮನಪಾ ಅಧಿಕಾರಿಗಳು ಲಂಚ ಬರುವ ತನಕ ಅನುಮತಿ ಮುಂದೂಡುತ್ತಲೇ ಬಂದಿದ್ದಾರೆ. ವಿಧಾನ ಸಭೆಯ ಈ ಚರ್ಚೆಯಲ್ಲಿ ಇನ್ನೊಂದು ಮಹತ್ವದ ಸಂಗತಿ ಹೊರ ಬಂದಿದೆ.

ಮುಂಬೈ ಮಹಾನಗರ ಪಾಲಿಕೆಯ ಬಳಿ ತನ್ನದೇ ಆದ ಸ್ಟ್ರಕ್ಚರಲ್ ಇಂಜಿನಿಯರ್ ಇಲ್ಲ. ಹಾಗಾಗಿ ಕಟ್ಟಡ ಮಾಲಕರು, ಸೊಸೈಟಿಯವರು, ಶಿಥಿಲ ಕಟ್ಟಡಗಳ ನಿವಾಸಿಗಳು ಖಾಸಗಿ ಸ್ಟ್ರಕ್ಚರಲ್ ಇಂಜಿನಿಯರ್‌ಗಳನ್ನು ಕರೆಸಿ ತಮ್ಮ ತಮ್ಮ ಲಾಭವನ್ನು ಮುಂದಿಟ್ಟ್ಟು ಸ್ಟ್ರಕ್ಚರಲ್ ಆಡಿಟ್ ರಿಪೋರ್ಟ್ ತಯಾರಿಸುತ್ತಿದ್ದಾರೆ! ಆದರೆ ವಿಧಾನ ಪರಿಷತ್‌ನಲ್ಲಿ ಶಿವಸೇನೆಯ ಅನಿಲ್ ಪರಬ್ ಅವರು ಪ್ರತಿಕ್ರಿಯಿಸಿ ‘‘ಆ ಕಟ್ಟಡದ ಮಾಲಕ ಸುನಿಲ್ ಶಿತಪ್ ಶಿವಸೇನೆ ಪದಾಧಿಕಾರಿ ಅಲ್ಲ. ಅವರ ಪತ್ನಿ ಶಿವಸೇನೆಯ ಟಿಕೆಟ್‌ನಲ್ಲಿ ನಗರ ಸೇವಕ ಚುನಾವಣೆಗೆ ಸ್ಪರ್ಧಿಸಿದ್ದರು. ಶಿವಸೇನೆ ಅಥವಾ ಇತರ ಪಕ್ಷಗಳು ತಮ್ಮ ಯಾವ ನಾಯಕರಿಗೂ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸಿ ಎಂದು ಹೇಳುವುದಿಲ್ಲ. ಹೀಗಾಗಿ ದೋಷಿ ಜನರಿಗೆ ಶಿಕ್ಷೆ ಆಗಲೇ ಬೇಕು’’ ಎಂದು ಶಿವಸೇನೆ ಹೇಳಿ ಆರೋಪ ಬಾರದಂತೆ ನೋಡಿಕೊಂಡಿದೆ.

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News