ದೇಶದಲ್ಲಿ ಪ್ರತಿ ದಿನ ಆನೆ, ಹುಲಿಗಳ ದಾಳಿಗೆ ಓರ್ವ ವ್ಯಕ್ತಿ ಬಲಿ

Update: 2017-08-01 11:20 GMT

ಹೊಸದಿಲ್ಲಿ,ಆ.1 : ಮಾನವರು ಪ್ರಾಣಿಗಳ ವಲಯಗಳಲ್ಲಿ ನಡೆಸುತ್ತಿರುವ ಅತಿಕ್ರಮಣದಿಂದಾಗಿ ದೇಶದಲ್ಲಿ ಪ್ರತಿ ದಿನ ಆನೆ, ಹುಲಿಗಳ ದಾಳಿಗೆ ಒಬ್ಬ ವ್ಯಕ್ತಿ  ಬಲಿಯಾಗುತ್ತಿದ್ದಾನೆಂದು  ಸರಕಾರ ಬಿಡುಗಡೆಗೊಳಿಸಿದ ಅಂಕಿಸಂಖ್ಯೆಗಳು ಹೇಳುತ್ತವೆ.

ಪರಿಸರ ಸಚಿವಾಲಯದ ವರದಿಯಂತೆ ಎಪ್ರಿಲ್ 2014ರಿಂದ ಈ ವರ್ಷದ ಮೇ ತಿಂಗಳ ತನಕದ 1,143 ದಿನಗಳಲ್ಲಿ ದೇಶದಾದ್ಯಂತ ಪ್ರಾಣಿಗಳ ದಾಳಿಗಳಲ್ಲಿ 1,144 ಜನರು ಸಾವನ್ನಪ್ಪಿದ್ದಾರೆ. ಇದೇ ಅವಧಿಯಲ್ಲಿ 345 ಹುಲಿಗಳು ಹಾಗೂ 84 ಆನೆಗಳನ್ನು ಕೊಲ್ಲಲಾಗಿವೆ ಎಂದು ವರದಿ ತಿಳಿಸಿದೆ.

ಕಳೆದ ವಾರ ಸಂಸತ್ತಿನಲ್ಲಿ ಬಿಡುಗಡೆಗೊಳಿಸಲಾದ ಅಂಕಿಅಂಶಗಳ ಪ್ರಕಾರ  ಆನೆಗಳ ದಾಳಿಗಳಲ್ಲಿ 1,052 ಮಾನವರು ಸಾವಿಗೀಡಾಗಿದ್ದರೆ  ಹುಲಿಗಳು 92 ಜನರನ್ನು ಕೊಂದಿವೆ. ಒಟ್ಟು ಸಾವುಗಳಲ್ಲಿ ಕಾಲಂಶದಷ್ಟು ಪ್ರಕರಣಗಳು ಪಶ್ಚಿಮ ಬಂಗಾಳದಲ್ಲಿ ನಡೆದಿವೆ. ಕಳೆದ ವರ್ಷ ಕಾಡಾನೆಗಳ ಹಿಂಡೊಂದು ಅಡ್ಡಾದಿಡ್ಡಿಯಾಗಿ ಓಡಾಡಿ ಐದು ಜನರನ್ನು ಕೊಂದಿದ್ದಲ್ಲದೆ ಹಲವಾರು ವಾಹನಗಳನ್ನೂ ಹಾನಿಗೊಳಿಸಿದ್ದವು.

ಜೂನ್ ತಿಂಗಳಲ್ಲಿ ತಮಿಳುನಾಡಿನ ಗ್ರಾಮವೊಂದರಲ್ಲಿ ನಡೆದ ಘಟನೆಯಲ್ಲಿ ಆನೆಯೊಂದು 12 ವರ್ಷದ ಬಾಲಕಿಯೊಬ್ಬಳೂ ಸೇರಿದಂತೆ ನಾಲ್ಕು ಮಂದಿಯನ್ನು ತುಳಿದು ಸಾಯಿಸಿದೆ.

ನ್ಯಾಷನಲ್ ಕ್ರೈಂ ರೆಕಾಡ್ರ್ಸ್ ಬ್ಯುರೋ ಅಂಕಿಅಂಶಗಳ ಪ್ರಕಾರ 2015ರಲ್ಲಿ ಪ್ರಾಣಿಗಳ ದಾಳಿಗಳಲ್ಲಿ 950 ಜನರು ಸಾವನ್ನಪ್ಪಿದ್ದಾರೆ.

ಭಾರತದಲ್ಲಿ  ಸುಮಾರು 30,000 ಆನೆಗಳು ಹಾಗೂ 2,226 ಹುಲಿಗಳಿವೆಯೆಂದು 2014ರ ಗಣತಿಯಿಂದ ತಿಳಿದು ಬಂದಿದೆ. ವೈಲ್ಡ್ ಲೈಫ್ ಪ್ರೊಟೆಕ್ಷನ್ ಸೊಸೈಟಿ ಆಫ್ ಇಂಡಿಯಾದ ಅಂಕಿಅಂಶಗಳ ಪ್ರಕಾರ 1,436ಕ್ಕೂ ಹೆಚ್ಚು ಪ್ರಾಣಿಗಳು ಜನವರಿ 2014ರಿಂದ ಕೊಲ್ಲಲ್ಪಟ್ಟಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News