×
Ad

ರಾಜ್ಯ ಸಭೆಯಲ್ಲಿ ಅಡುಗೆ ಅನಿಲ ಬೆಲೆ ಕೋಲಾಹಲ: ಕಲಾಪ ಮುಂದೂಡಿಕೆ

Update: 2017-08-01 20:56 IST

ಹೊಸದಿಲ್ಲಿ, ಆ. 1: ಮುಂದಿನ ಮಾರ್ಚ್‌ನಿಂದ ಎಲ್ಲ ಸಬ್ಸಿಡಿ ರದ್ದುಗೊಳಿಸಲು ಗೃಹ ಬಳಕೆಯ ಅಡುಗೆ ಅನಿಲ (ಎಲ್‌ಪಿಜಿ)ದ ಬೆಲೆಯನ್ನು ಪ್ರತಿ ತಿಂಗಳು 4 ರೂಪಾಯಿ ಏರಿಕೆ ಮಾಡುವ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಸಂಯಕ್ತ ವಿರೋಧ ಪಕ್ಷಗಳು ಮಂಗಳವಾರ ಪ್ರತಿಭಟನೆ ನಡೆಸಿದ ಪರಿಣಾಮ ರಾಜ್ಯ ಸಭೆಯ ಅಪರಾಹ್ನ ಪೂರ್ವ ಕಾಲಪಗಳು ರದ್ದುಗೊಂಡವು.

ಕಾಂಗ್ರೆಸ್, ಎಸ್‌ಪಿ, ಟಿಎಂಸಿ, ಬಿಎಸ್‌ಪಿ ಹಾಗೂ ಎಡಪಕ್ಷಗಳ ಸಂಸದರು ಸದನದ ಅಂಗಳಕ್ಕೆ ನುಗ್ಗಿ ಸರಕಾರ ತನ್ನ ನಿರ್ಧಾರವನ್ನು ಹಿಂದೆ ತೆಗೆದುಕೊಳ್ಳಬೇಕು ಎಂದು ಘೋಷಣೆಗಳನ್ನು ಕೂಗಿದರು. ಇದರಿಂದ ಉಪಾಧ್ಯಕ್ಷ ಪಿ.ಜೆ. ಕುರಿಯನ್ ಕಲಾಪವನ್ನು ಮೊದಲು 10 ನಿಮಿಷಗಳ ಕಾಲ ಮುಂದುವರಿಸಿದರು. ಬಳಿಕ ಸಭೆ ಸೇರಿದಾಗಲೂ ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಮಧ್ಯಾಹ್ನದ ವರಗೆ ಮುಂದೂಡಿದರು.

 267 ನಿಯಮದ ಅಡಿಯಲ್ಲಿ ನೊಟೀಸ್ ನೀಡಿದ ಟಿಎಂಸಿಯ ಡೆರೆಕ್ ಒಬ್ರೈನ್ ಈ ವಿಷಯದ ಬಗ್ಗೆ ಪ್ರಶ್ನೆ ಎತ್ತಿದ್ದು, ಇಂದಿನ ಇತರ ಕಲಾಪವನ್ನು ಬದಿಗಿರಿಸಿ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸುವಂತೆ ಆಗ್ರಹಿಸಿದರು.

 ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಪೂರೈಸುವ ಸಾಮಾಜಿಕ ಬದ್ಧತೆಯನ್ನು ಕೇಂದ್ರ ಸರಕಾರ ಪೂರೈಸಿಲ್ಲ. ತೈಲ ಬೆಲೆ ಬ್ಯಾರೆಲ್‌ಗೆ 111 ಡಾಲರ್ ನಿಂದ 48 ಡಾಲರ್ಗೆ ಇಳಿಕೆಯಾಗಿದೆ. ಆದರೆ, ಸರಕಾರ ಅಡುಗೆ ಅನಿಲದ ಬೆಲೆ ಏರಿಸಿದೆ ಎಂದರು.

ಕೆಲವರು ಸಬ್ಸಿಡಿಯನ್ನು ಸ್ವಯಂಪ್ರೇರಿತರಾಗಿ ತ್ಯಜಿಸಿದ್ದಾರೆ. ಆದುದರಿಂದ ಬಡವರು ಹಾಗೂ ಅಗತ್ಯ ಇರುವವರಿಗೆ ಸಬ್ಸಿಡಿ ನೀಡಬಹುದು ಎಂದು ತಾನು ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮಾಡಿದ ಸಂದರ್ಭ ಹೇಳಿದ್ದೇನೆ ಎಂದು ಸಿಪಿಎಂನ ಸೀತಾರಾಮ ಯೆಚೂರಿ ಹೇಳಿದರು.

ಆದರೆ, ಈಗ ಸರಕಾರ ಬಡವರು ಸಿಲಿಂಡರ್ ಒಂದಕ್ಕೆ ಪ್ರತಿ ತಿಂಗಳು 4 ರೂಪಾಯಿ ನೀಡಬೇಕು ಎಂದು ನಿರ್ಧರಿಸಿದೆ. ಇದು ಖಂಡನೀಯ. ಸರಕಾರ ಈ ನಿರ್ಧಾರವನ್ನು ಹಿಂದೆ ತೆಗೆಯಬೇಕು ಎಂದರು.

ಸಿಪಿಎಂನ ತಪನ್ ಸೇನ್, ಜನರನ್ನು ವಂಚಿಸಲಾಗುತ್ತಿದೆ ಎಂದರು. ಸಮಾಜವಾದಿ ಪಕ್ಷದ ನರೇಶ್ ಅಗ್ರವಾಲ್, ಇದು ಸರಕಾರದ ಲಾಭಕ್ಕೆ ಎಂದಿದ್ದಾರೆ. ಉಪಾಧ್ಯಕ್ಷ ಪಿ.ಜೆ. ಕುರಿಯನ್, 267 ನಿಯಮದ ಅಡಿಯಲ್ಲಿನ ನೋಟಸನ್ನು ಅನುಮತಿಸಲಾಗುವುದಿಲ್ಲ. ಆದರೆ, ನೋಟಿಸ್ ನೀಡಿದರೆ ಅಲ್ಪಾವಧಿಯ ಚರ್ಚೆಗೆ ಅನುಮತಿ ನೀಡಲಾಗುವುದು ಎಂದರು.

ವಿರೋಧ ಪಕ್ಷದ ಸದಸ್ಯರು ಸದನದ ಅಂಗಳಕ್ಕೆ ಇಳಿದು ಸರಕಾರದ ನಿರ್ಧಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದ ಕುರಿಯನ್ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.

 ಸದನ ಮತ್ತೆ ಸೇರಿದಾಗ, ವಿರೋಧ ಪಕ್ಷದ ನಾಯಕ ಗುಲಾಮ್ ನಬಿ ಆಝಾದ್, ಬಡವರಿಗೆ ಸಬ್ಸಿಡಿ ಅಡುಗೆ ಅನಿಲ ನೀಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಜನರು ಈಗಾಗಲೇ ಸ್ವಯಂಪ್ರೇರಿತರಾಗಿ ಸಬ್ಸಿಡಿ ತ್ಯಜಿಸಿದ್ದಾರೆ ಎಂದರು.

ಇದಕ್ಕೆ ಸ್ಪಷ್ಟನೆ ನೀಡಿದ ಪ್ರಧಾನ್, ಸಬ್ಸಿಡಿಯನ್ನು ಪೂರ್ಣವಾಗಿ ರದ್ದುಗೊಳಿಸಲು ಪ್ರತಿ ತಿಂಗಳ ಸಣ್ಣ ಮೊತ್ತ ಏರಿಸಲು ಈ ಹಿಂದಿನ ಯುಪಿಎ ಸರಕಾರ 2010 ಜೂನ್‌ನಲ್ಲಿ ನಿರ್ಧಾರ ತೆಗೆದುಕೊಂಡಿತ್ತು ಎಂದರು.

 ಆದರೆ, ಇದಕ್ಕೆ ತೃತಪ್ತರಾಗದ ವಿರೋಧ ಪಕ್ಷದ ಸದಸ್ಯರು ಸದನದ ಅಂಗಳಕ್ಕೆ ಇಳಿದು ಘೋಷಣೆಗಳನ್ನು ಕೂಗಿದರು. ಸದಸ್ಯರು ತಮ್ಮ ಪಟ್ಟು ಸಡಿಸಲು ಹಾಗೂ ಸ್ಥಾನಕ್ಕೆ ಹಿಂದಿರುಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕುರಿಯನ್ ಕಲಾಪವನ್ನು 12 ಗಂಟೆ ವರೆಗೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News