ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಪ್ರವೇಶಾನುಮತಿ ನಿರಾಕರಣೆ: ಪುನರ್‌ಪರಿಶೀಲನೆಗೆ ಸುಪ್ರೀಂ ನಿರ್ದೇಶ
ಹೊಸದಿಲ್ಲಿ,ಆ.2: 2017-18 ಮತ್ತು 2018-19ನೇ ಶೈಕ್ಷಣಿಕ ವರ್ಷಗಳಿಗೆ ಪ್ರವೇಶಾವಕಾಶವನ್ನು ನಿಷೇಧಿಸಲಾಗಿರುವ ಹಲವಾರು ಖಾಸಗಿ ವೈದ್ಯಕೀಯ ಕಾಲೇಜು ಗಳಿಗೆ ಅನುಮತಿಯನ್ನು ನೀಡುವ ವಿಷಯವನ್ನು ಹೊಸದಾಗಿ ಪರಿಶೀಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಕೇಂದ್ರ ಸರಕಾರಕ್ಕೆ ನಿರ್ದೇಶ ನೀಡಿದೆ. ಭಾರತೀಯ ವೈದ್ಯಕೀಯ ಮಂಡಳಿ(ಎಂಸಿಐ), ವಿಚಾರಣಾ ಸಮಿತಿ,ಆರೋಗ್ಯ ಸೇವೆಗಳ ಮಹಾ ನಿರ್ದೇಶಕರು(ಡಿಜಿಎಚ್‌ಎಸ್) ಮತ್ತು ಉಸ್ತುವಾರಿ ಸಮಿತಿಯ ಶಿಫಾರಸುಗಳ ಮರು ವೌಲ್ಯಮಾಪನ ನಡೆಸುವಂತೆ ಮತ್ತು ಇಂತಹ ಕಾಲೇಜುಗಳ ಅಹವಾಲು ಸಲ್ಲಿಕೆಗೆ ಅವಕಾಶ ನೀಡುವಂತೆ ಅದು ಸರಕಾರಕ್ಕೆ ಸೂಚಿಸಿದೆ.
ಅಹವಾಲು ಆಲಿಕೆ ಮತ್ತು ಅಂತಿಮ ತರ್ಕಸಮ್ಮತ ನಿರ್ಧಾರ ಕೈಗೊಳ್ಳುವಿಕೆ ಪ್ರಕ್ರಿಯೆ ಯನ್ನು ಇಂದಿನಿಂದ 10 ದಿನಗಳಲ್ಲಿ ಪೂರ್ಣಗೊಳಿಸುವಂತೆ ಸರಕಾರಕ್ಕೆ ತಿಳಿಸಿದ ನ್ಯಾ.ದೀಪಕ ಮಿಶ್ರಾ ನೇತೃತ್ವದ ಪೀಠವು, ಗಡುವಿನೊಳಗೆ ನಿರ್ಧಾರ ಹೊರಬೀಳುವಂತಾ ಗಲು ತಪ್ಪದೇ ಸಹಕರಿಸುವಂತೆ ಸಂಬಂಧಿಸಿದ ಕಕ್ಷಿಗಳಿಗೆ ನಿರ್ದೇಶ ನೀಡಿತು.
ಹಲವಾರು ಕೊರತೆಗಳ ಕಾರಣ ನೀಡಿ 2017-18 ಮತ್ತು 2018-19ನೇ ಶೈಕ್ಷಣಿಕ ವರ್ಷಗಳಿಗೆ ವಿದಾರ್ಥಿಗಳಿಗೆ ಪ್ರವೇಶಾತಿಯಿಂದ ತಮ್ಮನ್ನು ನಿಷೇಧಿಸಿರುವ ಸರಕಾರದ ಮೇ.31ರ ಆದೇಶವನ್ನು ಪ್ರಶ್ನಿಸಿ ಕೆಲವು ಖಾಸಗಿ ವೈದ್ಯಕೀಯ ಕಾಲೇಜುಗಳು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ನಡೆಸುತ್ತಿರುವ ಪೀಠವು ಈ ಆದೇಶವನ್ನು ಹೊರಡಿಸಿದೆ.