ಸೇನೆಗೆ ಕಳೆದ 3 ವರ್ಷದಲ್ಲಿ 37 ವಿಮಾನ, ಹೆಲಿಕಾಪ್ಟರ್ ನಷ್ಟ
ಹೊಸದಿಲ್ಲಿ, ಆ.2: ಕಳೆದ 3 ವರ್ಷಗಳಲ್ಲಿ (2014ರ ಮೇ ತಿಂಗಳಿನಿಂದ) ಸೇನಾಪಡೆಯ ಒಟ್ಟು 37 ಸೇನಾ ವಿಮಾನ ಹಾಗೂ ಹೆಲಿಕಾಪ್ಟರ್‌ಗಳು ಅಪಘಾತಕ್ಕೀಡಾಗಿದ್ದು ಇದರಲ್ಲಿ 55 ಮಂದಿ ಸಾವಿಗೀಡಾಗಿದ್ದಾರೆ ಎಂದು ಸರಕಾರ ತಿಳಿಸಿದೆ.
ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ರಕ್ಷಣಾ ಖಾತೆಯ ಸಹಾಯಕ ಸಚಿವ ಸುಭಾಷ್ ಭಾಮ್ರೆ, ಮಾನವ ತಪ್ಪು ಹಾಗೂ ತಾಂತ್ರಿಕ ದೋಷ ಅಪಘಾತಕ್ಕೆ ಕಾರಣ ಎಂದು ತಿಳಿಸಿದರು. 25 ವಿಮಾನ ಹಾಗೂ 12 ಹೆಲಿಕಾಪ್ಟರ್‌ಗಳನ್ನು ಸೇನೆ ಕಳೆದುಕೊಂಡಿದೆ. ಪ್ರತಿಯೊಂದು ಅಪಘಾತದ ಬಗ್ಗೆಯೂ ವಿಚಾರಣಾ ನ್ಯಾಯಾಲಯ ತನಿಖೆ ನಡೆಸಿದ್ದು ಅದರ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲಾಗಿದೆ ಅಪಾಯ ಸಂಭವನೀಯತೆಯ ಕ್ಷೇತ್ರಗಳನ್ನು ಗುರುತಿಸಲಾಗಿದ್ದು ಅಪಘಾತ ತಡೆ ವ್ಯವಸ್ಥೆಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗಿದೆ.
ಭಾರತೀಯ ವಾಯುಪಡೆಯ ಮಿಗ್-21 , ಮಿಗ್ 27 ಹಾಗೂ ಮಿಗ್ 29 ವಿಮಾನಗಳನ್ನು ಆಧುನೀಕರಣಗೊಳಿಸಲಾಗಿದೆ. ಇದರಿಂದ ಈ ವಿಮಾನಗಳ ಕಾರ್ಯನಿರ್ವಹಣಾ ಸಾಮರ್ಥ್ಯ ವೃದ್ಧಿಸಿದೆ ಎಂದು ಸಚಿವರು ತಿಳಿಸಿದರು. ‘ಮೇಕ್ ಇನ್ ಇಂಡಿಯಾ’ ಉಪಕ್ರಮದಡಿ ಅಮೆರಿಕವು ಎಫ್-16 ಜೆಟ್ ವಿಮಾನ ಉತ್ಪನ್ನದ ಪರಿಷ್ಕೃತ ತಂತ್ರಜ್ಞಾನವನ್ನು ವರ್ಗಾಯಿಸಲು ಒಪ್ಪಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಸಚಿವರು ‘ಇಲ್ಲ’ ಎಂದು ಉತ್ತರಿಸಿದರು.