ಉತ್ತರಾಖಂಡದ ಬಾರಾಹೋತಿಯಲ್ಲಿ ಗಡಿಯನ್ನು ಗುರುತಿಸಲಾಗಿಲ್ಲ: ರಾವತ್

Update: 2017-08-02 14:43 GMT

ನಾಗ್ಪುರ,ಆ.2: ಚೀನಿ ಸೈನಿಕರು ಇತ್ತೀಚಿಗೆ ಅತಿಕ್ರಮಿಸಿದ್ದ ರಾಜ್ಯದ ಚಮೋಲಿ ಜಿಲ್ಲೆಯ ಬಾರಾಹೋತಿ ಪ್ರದೇಶದಲ್ಲಿ ಭಾರತ-ಚೀನಾ ನಡುವಿನ ಗಡಿಯನ್ನು ಸ್ಪಷ್ಟವಾಗಿ ಗುರುತಿಸ ಲಾಗಿಲ್ಲ ಎಂದು ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಬುಧವಾರ ಇಲ್ಲಿ ತಿಳಿಸಿದರು.

 ಆರೆಸ್ಸೆಸ್ ಕೇಂದ್ರ ಕಚೇರಿ ಭೇಟಿಗಾಗಿ ನಗರದಲ್ಲಿರುವ ರಾವತ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಚೀನಿ ಅತಿಕ್ರಮಣದ ಕುರಿತು ನಿಖರ ಅಧಿಕೃತ ಮಾಹಿತಿ ತನ್ನ ಬಳಿಯಿಲ್ಲ. ಬಾರಾಹೋತಿಯಲ್ಲಿ ಭಾರತ-ಚೀನಾ ಗಡಿಯನ್ನು ಗುರುತಿಸಲಾಗಿಲ್ಲ. ಭಾರತೀಯ ಮತ್ತು ಚೀನಿ ಸೈನಿಕರು ಶಸ್ತ್ರಾಸ್ತ್ರಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿರುವ ಪ್ರದೇಶವೊಂದು ಬಾರಾಹೋತಿಯಲ್ಲಿದೆ. ಭಾರತೀಯ ಯೋಧರು ಅವರ ಪ್ರದೇಶವನ್ನು ಮತ್ತು ಚೀನಿ ಸೈನಿಕರು ನಮ್ಮ ಪ್ರದೇಶವನ್ನು ಪ್ರವೇಶಿಸಿರುವ ನಿದರ್ಶನಗಳಿವೆ ಎಂದು ಅವರು ಹೇಳಿದರು.

ಜು.25ರಂದು ಬೆಳಿಗ್ಗೆ ಬಾರಾಹೋತಿ ಪ್ರದೇಶವನ್ನು ಅತಿಕ್ರಮಿಸಿದ್ದ ಚೀನಿ ಸೈನಿಕರು ಅಲ್ಲಿದ್ದ ಭಾರತೀಯ ಕುರಿಗಾಹಿಗಳನ್ನು ಬೆದರಿಸಿ ಓಡಿಸಿದ್ದರು.

ಡೋಕ್ಲಾಮ್‌ನಲ್ಲಿ ಭಾರತ-ಚೀನಾ ನಡುವಿನ ಬಿಕ್ಕಟ್ಟಿನ ಕುರಿತು ಪ್ರಶ್ನೆಗೆ ಉತ್ತರಿಸಿದ ರಾವತ್, ಪ್ರಚೋದನಕಾರಿ ಭಾಷೆಯನ್ನು ಬಳಸುವುದರಿಂದ ಚೀನಾ ದೂರವಿರಬೇಕು. ನಮ್ಮ ಯೋಧರು ಯಾವುದೇ ಸವಾಲನ್ನು ಎದುರಿಸಲು ಸಮರ್ಥರಿದ್ದಾರೆಂದು ನಮ್ಮ ಸೇನಾ ಮುಖ್ಯಸ್ಥರು ಈಗಾಗಲೇ ಹೇಳಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News