×
Ad

ಐಟಿ ದಾಳಿ: ಸಂಸತ್‌ನಲ್ಲಿ ಕೋಲಾಹಲ

Update: 2017-08-02 21:10 IST

ಹೊಸದಿಲ್ಲಿ,ಆ.2: ಸಚಿವ ಡಿ.ಕೆ.ಶಿವಕುಮಾರ್ ನಿವಾಸ, ಕಚೇರಿಯ ಮೇಲೆ ನಡೆದ ಆದಾಯ ತೆರಿಗೆ ದಾಳಿ ಘಟನೆಯು ಬುಧವಾರ ಸಂಸತ್‌ನ ಉಭಯ ಸದನಗಳಲ್ಲೂ ಪ್ರತಿಧ್ವನಿಸಿತು. ಐಟಿ ದಾಳಿಗೂ, ಗುಜರಾತ್‌ನ ರಾಜ್ಯಸಭಾ ಚುನಾವಣೆಗೂ ಯಾವುದೇ ಸಂಬಂಧವಿಲ್ಲವೆಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದರಾದರೂ, ಕಾಂಗ್ರೆಸ್ ಸದಸ್ಯರು ಗದ್ದಲವೆಬ್ಬಿಸಿ, ಕಲಾಪಗಳಿಗೆ ಅಡ್ಡಿಪಡಿಸಿದರು.

ರಾಜ್ಯಸಭೆ ಹಾಗೂ ಲೋಕಸಭೆಗಳೆರಡರಲ್ಲೂ ಉದ್ರಿಕ್ತ ಕಾಂಗ್ರೆಸ್ ಸದಸ್ಯರು ಡಿಕೆಶಿ ನಿವಾಸದ ಮೇಲೆ ನಡೆದ ಆದಾಯ ತೆರಿಗೆ ದಾಳಿಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಕೋಲಾಹಲದಿಂದಾಗಿ ಸದನವನ್ನು ಮಧ್ಯಾಹ್ನದ ತನಕ ನಾಲ್ಕು ಬಾರಿ ಮುಂದೂಡಲಾಯಿತು. ಇತ್ತ ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.

  ಉಭಯ ಸದನಗಳಲ್ಲೂ ಈ ವಿಷಯವಾಗಿ ವಿವರಣೆ ನೀಡಿದ ಸಚಿವ ಜೇಟ್ಲಿ ಅವರು, ಗುಜರಾತ್ ಕಾಂಗ್ರೆಸ್ ಸದಸ್ಯರು ಬೀಡುಬಿಟ್ಟಿರುವ ರಿಸಾರ್ಟ್ ಮೇಲೆ ಯಾವುದೇ ಶೋಧ ಕಾರ್ಯಾಚರಣೆ ನಡೆಸಿಲ್ಲ. ರಿಸಾರ್ಟ್‌ನಲ್ಲಿ ಉಳಿದುಕೊಂಡಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಮಾತ್ರ ವಿಚಾರಣೆಗಾಗಿ ಆದಾಯತೆರಿಗೆ ಆಧಿಕಾರಿಗಳು ಕರೆದೊಯ್ದಿದ್ದಾರೆಂದು ಸಚಿವರು ಸ್ಪಷ್ಟಪಡಿಸಿದರು.

 ಐಟಿ ದಾಳಿ ಬಗ್ಗೆ ರಾಜ್ಯಸಭೆ, ಲೋಕಸಭೆಗಳೆರಡರಲ್ಲೂ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಸದಸ್ಯರು, ಸಿಬಿಐ, ಜಾರಿ ನಿರ್ದೇಶನಾಲಯ ಹಾಗೂ ಆದಾಯತೆರಿಗೆ ಇಲಾಖೆಯಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಪಡಿಸಿ ಕೊಳ್ಳಲಾಗುತ್ತಿದೆಯೆಂದು ಆರೋಪಿಸಿದರು.

   ಇಂದು ಬೆಳಗ್ಗೆ ರಾಜ್ಯಸಭೆಯಲ್ಲಿ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ಆನಂದ್ ಶರ್ಮಾ ವಿಷಯ ಪ್ರಸ್ತಾಪಿಸುತ್ತಾ,ರಾಜ್ಯಸಭೆಯ ಚುನಾವಣೆಯನ್ನು ಹೈಜಾಕ್ ಮಾಡುವ ಪ್ರಯತ್ನ ನಡೆಯುತ್ತಿದೆ ಹಾಗೂ ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಿರಿಸಿ ಆದಾಯತೆರಿಗೆ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಆಪಾದಿಸಿದರು.

ಉದ್ರಿಕ್ತ ಕಾಂಗ್ರೆಸ್ ಸದಸ್ಯರನ್ನು ಸಮಾಧಾನಪಡಿಸಲೆತ್ನಿಸಿದ ಜೇಟ್ಲಿ, ಗುಜರಾತ್‌ನ ಕಾಂಗ್ರೆಸ್ ಶಾಸಕರು ತಂಗಿದ್ದ ರಿಸಾರ್ಟ್ ಮೇಲೆ ಯಾವುದೇ ದಾಳಿ ನಡೆದಿಲ್ಲ. ಪ್ರಶ್ನಿಸುವ ಉದ್ದೇಶದಿಂದಷ್ಟೇ ರಿಸಾರ್ಟ್‌ನಲ್ಲಿದ್ದ ಸಚಿವರನ್ನು ಅವರ ನಿವಾಸಕ್ಕೆ ಕರೆದೊಯ್ಯಲಾಗಿತ್ತೆಂದು ಜೇಟ್ಲಿ ಸ್ಪಷ್ಟಪಡಿಸಿದರು.

ರಿಸಾರ್ಟ್ ಎಂಬುದು ಸಚಿವರಿಗೆ ಕಾನೂನಿನ ಹಿಡಿತದಿಂದ ಪಾರಾಗಲು ಇರುವ ಪ್ರದೇಶವಾಗಲಾರದು ಎಂದು ಜೇಟ್ಲಿ ತಿಳಿಸಿದರು. ಇದನ್ನು ಪ್ರತಿಭಟಿಸಿದ ಕಾಂಗ್ರೆಸ್ ಸದಸ್ಯರು ಸದನದ ಮುಂಬದಿಗೆ ಬಂದು ಘೋಷಣೆಗಳನ್ನು ಕೂಗಿದರು. ಪ್ರಶ್ನೋತ್ತರ ವೇಳೆಯಲ್ಲೂ ಕಾಂಗ್ರೆಸ್ ಸದಸ್ಯರು ಮತ್ತೆ ಘೋಷಣೆಗಳನ್ನು ಕೂಗಿದರು.

 ಕಾಂಗ್ರೆಸ್ ಸದಸ್ಯ ಕಪಿಲ್ ಸಿಬಲ್ ಮಾತನಾಡಿ, ಚುನಾವಣಾ ಪ್ರಕ್ರಿಯೆಯ ಸಂದರ್ಭಗಳಲ್ಲಿ ಹಿಂದೆಂದೂ ಈ ರೀತಿಯ ದಾಳಿಗಳು ನಡೆದುದಿಲ್ಲವೆಂದು ಹೇಳಿದರು. ಕಾಂಗ್ರೆಸ್ ಶಾಸಕರು ತಂಗಿದ್ದ ಸ್ಥಳಕ್ಕೆ ಕೇಂದ್ರೀಯ ಪಡೆಗಳು ತೆರಳಿ ಭೀತಿಯನ್ನು ಸೃಷ್ಟಿಸಿವೆಯೆಂದು ಅವರು ಆಪಾದಿಸಿದರು.

ಕಾಂಗ್ರೆಸ್ ಸದಸ್ಯರ ಗದ್ದಲದ ನಡುವೆ ಸಂಸದೀಯ ವ್ಯವಹಾರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮಾತನಾಡಿ, ಭ್ರಷ್ಟಾಚಾರದಲ್ಲಿ ತೊಡಗಿದ ಯಾರನ್ನೂ ಕೂಡಾ ಸರಕಾರವು ಬಿಡುವುದಿಲ್ಲವೆಂದು ಹೇಳಿದರು.

ಪಟ್ಟಬಿಡದ ಕಾಂಗ್ರೆಸಿಗರು ಪ್ರತಿಭಟನೆಯನ್ನು ಮುಂದುವರಿಸಿದ್ದರಿಂದ ಸದನವನ್ನು ಮಧ್ಯಾಹ್ನದವರೆಗೆ ನಾಲ್ಕು ಬಾರಿ ಮುಂದೂಡಲಾಯಿತು.

ಲೋಕಸಭೆಯಲ್ಲಿ ಕಾಂಗ್ರೆಸ್ ಗದ್ದಲ

 ಇತ್ತ ಲೋಕಸಭೆ ಕೂಡಾ ಕಾಂಗ್ರೆಸ್ ಶಾಸಕರ ಗದ್ದಲಕ್ಕೆ ಸಾಕ್ಷಿಯಾಯಿತು. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಷಯ ಪ್ರಸ್ತಾಪಿಸುತ್ತಾ, ರಾಜಕೀಯ ದ್ವೇಷದಿಂದ ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ದಾಳಿ ನಡೆದಿದೆ. ಇದು ಪ್ರಜಾತಂತ್ರದ ಆಶಯಗಳನ್ನು ಭಗ್ನಗೊಳಿಸಲಿದೆಯೆಂದವರು ಆಕ್ರೋಶ ವ್ಯಕ್ತಪಡಿಸಿದರು.

 ಶಾಸಕರನ್ನು ಭಯಭೀತಗೊಳಿಸುತ್ತಿದ್ದೀರಿ ಹಾಗೂ ಅವರಿಗೆ ಬೆದರಿಕೆಯೊಡ್ಡುತ್ತಿದ್ದೀರಿ ಎಂದು ಸರಕಾರಕ್ಕೆ ಮನವಿ ಮಾಡಿದ ಖರ್ಗೆ ನಾಳೆ ಇದೇ ಸ್ಥಿತಿ ನಿಮಗೂ ಬರಲಿದೆಯೆಂದು ಅಳುವ ಪಕ್ಷಕ್ಕೆ ಎಚ್ಚರಿಕೆ ನೀಡಿದರು.

  ಖರ್ಗೆ ಆರೋಪ ಆಧಾರರಹಿತವೆಂದು ಸಂಸದೀಯ ವ್ಯವಹಾರ ಸಚಿವ ಅನಂತ್ ಕುಮಾರ್ ಳ್ಳಿಹಾಕಿದರು. ಕಪ್ಪುಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಕಾರ್ಯಾಚರಣೆಯ ಭಾಗವಾಗಿ ಈ ದಾಳಿ ನಡೆಸಲಾಗಿದೆಯೆಂದವರು ಹೇಳಿದರು. ಈ ರಿಸಾರ್ಟ್ ಮೇಲೆ 942 ಕೋಟಿ ದಂಡ ವಿಧಿಸಲು ರಾಜ್ಯ ಸರಕಾರವು ಈ ಹಿಂದೆ ನಿರ್ಧರಿಸಿತ್ತು. ಇದೇ ಸಮಯದಲ್ಲಿ ಗುಜರಾತ್ ಶಾಸಕರಿಗೆ ಅಲ್ಲೇ ವಸತಿ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಸೋನಿಯಾ,ರಾಹುಲ್ ಹಾಗೂ ಅಹ್ಮದ್ ಪಟೇಲ್ ವಿವರಣೆ ನೀಡಬೇಕೆಂದು ಅನಂತ್ ಕುಮಾರ್ ಆಗ್ರಹಿಸಿದರು.

 ಖರ್ಗೆಯ ಆರೋಪವನ್ನು ನಿರಾಕರಿಸಿದ ಜೇಟ್ಲಿ ಅವರು, ಗುಜರಾತ್ ವಿದ್ಯಮಾನಕ್ಕೂ ಐಟಿ ದಾಳಿಗೂ ಸಂಬಂಧಕಲ್ಪಿಸಬೇಡಿ, ಇದೊಂದು ಆರ್ಥಿಕ ಅಪರಾಧದ ಪ್ರಕರಣವೆಂದು ಪರಿಗಣಿಸಬೇಕೆಂದು ಅವರು ಹೇಳಿದರು.

ಸಚಿವರ ಹೇಳಿಕೆಯಿಂದ ತೃಪ್ತರಾಗದ ಕಾಂಗ್ರೆಸ್ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಸಭಾತ್ಯಾಗ ಮಾಡಿದರು.

ರಾಜ್ಯಸಭಾ ಚುನಾವಣೆಯಲ್ಲಿ ಓರ್ವ ವ್ಯಕ್ತಿ (ಅಹ್ಮದ್‌ಪಟೇಲ್)ಯನ್ನು ಸೋಲಿಸುವ ಏಕಮಾತ್ರ ಉದ್ದೇಶದಿಂದ ಇಂತಹ ಕೃತ್ಯಗಳಲ್ಲಿ ತೊಡಗಿದ್ದೀರಿ.

ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ

ಗುಜರಾತ್‌ನ ಕಾಂಗ್ರೆಸ್ ಶಾಸಕರು ತಂಗಿದ್ದ ರಿಸಾರ್ಟ್ ಮೇಲೆ ಯಾವುದೇ ದಾಳಿ ನಡೆದಿಲ್ಲ. ಪ್ರಶ್ನಿಸುವ ಉದ್ದೇಶದಿಂದಷ್ಟೇ ರಿಸಾರ್ಟ್‌ನಲ್ಲಿದ್ದ ಸಚಿವರನ್ನು ಅವರ ನಿವಾಸಕ್ಕೆ ಕರೆದೊಯ್ಯಲಾಗಿದೆ.

ಅರುಣ್ ಜೇಟ್ಲಿ, ಕೇಂದ್ರ ವಿತ್ತ ಸಚಿವ

     ರಾಜ್ಯಸಭಾ ಚುನಾವಣೆಯು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯ ಬೇಕಾಗಿದೆಯಾದರೂ, ಗುಜರಾತ್ ವಿಷಯದಲ್ಲಿ ಹೀಗಾಗುತ್ತಿಲ್ಲ. ಆದಾಯತೆರಿಗೆ ಇಲಾಖೆಯು ಏಕಾಏಕಿಯಾಗಿ ಸಚಿವರ ನಿವಾಸದ ಮೇಲೆ ಇಂದೇ ದಾಳಿ ನಡೆಸಿದ ಉದ್ದೇಶವಾದರೂ ಏನು?

ಗುಲಾಂ ನಬಿ ಆಝಾದ್, ರಾಜ್ಯಸಭೆಯ ಪ್ರತಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News