ಆಗಸ್ಟ್ 11ಕ್ಕೆ 'ಮಾಸ್ ಲೀಡರ್' ತೆರೆಗೆ

Update: 2017-08-02 16:30 GMT

'ಮಾಸ್ ಲೀಡರ್' ಒಂದು ಒಳ್ಳೆಯ ಅನುಭವವಾಗಿತ್ತು. ಚಿತ್ರ ಆರಂಭವಾದಾಗಿನಿಂದ ಯಾವುದೇ ರೀತಿಯ ಅಡೆತಡೆಗಳೂ ಇಲ್ಲದೆ ನಿರ್ವಿಘ್ನವಾಗಿ ಪೂರ್ತಿಯಾಗಿದೆ ಎಂದರು ಶಿವರಾಜಕುಮಾರ್. ಅವರು ಮುಂದಿನವಾರ  ಬಿಡುಗಡೆಯಾಗಲಿರುವ ತಮ್ಮ ಸಿನಿಮಾ 'ಮಾಸ್ ಲೀಡರ್' ಬಗ್ಗೆ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಚಿತ್ರದ ಒಂದಷ್ಟು ದೃಶ್ಯಗಳಲ್ಲಿ ತಾನು ಮಿಲಿಟರಿ ಅಧಿಕಾರಿಯಾಗಿ ಕಾಣಿಸಿದ್ದು, ಚಿತ್ರವು ಸ್ವಾತಂತ್ರ್ಯ ದಿನಾಚರಣೆಯ ವಾರದಲ್ಲೇ ಬಿಡುಗಡೆಯಾಗುತ್ತಿರುವುದು ಖುಷಿ ತಂದಿದೆ ಎಂದರು. ಬಹುತಾರಾಗಣದ ಚಿತ್ರತಂಡದೊಂದಿಗೆ ಕೆಲಸ ಮಾಡಿದ ಅನುಭವ ಸಂತಸ ತಂದಿದೆ ಎಂದ ಅವರು, ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುವ ಭರವಸೆ ವ್ಯಕ್ತಪಡಿಸಿದರು.

ಚಿತ್ರದ ನಾಯಕಿ ಪ್ರಣೀತಾ ಮಾತನಾಡಿ, ತಾನು ನಾಯಕ ಮಿಲಿಟರಿ ಅಧಿಕಾರಿ ಶಿವಣ್ಣನ ಪಾತ್ರದ ಪತ್ನಿಯಾಗಿ ನಟಿಸಿರುವ ಬಗ್ಗೆ ತಿಳಿಸಿದರು. ಚಿತ್ರದಲ್ಲಿ ಹಾಡೊಂದರಲ್ಲಿ ಕಾಣಿಸಿರುವ ಶರ್ಮಿಳಾ ಮಾಂಡ್ರೆ, ಪ್ರಥಮ ಬಾರಿಗೆ  ಪತ್ರಕರ್ತೆಯ ಪಾತ್ರ ನಿರ್ವಹಿಸಿದ್ದೇನೆ ಎಂದರು. ಶಿವಣ್ಣ ನನ್ನ ಪಾಲಿನ ನಿಜವಾದ ಮಾಸ್ ಲೀಡರ್ ಎಂದು ಮಾತು ಶುರು ಮಾಡಿದ ವಿಜಯರಾಘವೇಂದ್ರ ಕೂಡ ಶೂಟಿಂಗ್ ಅನುಭವ ಖುಷಿ ನೀಡಿದ್ದಾಗಿ ತಿಳಿಸಿದರು.

ನಟ ಜಗ್ಗೇಶ್ ಪುತ್ರ ಗುರುರಾಜ್ ಮಾತನಾಡಿ, " ನನಗೆ ಇದೊಂದು ಚಿತ್ರವೇ 25 ಚಿತ್ರಗಳ ನಟನಾನುಭವ ನೀಡಿದೆ. ಸಾಮಾನ್ಯವಾಗಿ ನಾನು ನಟಿಸಿದ ಚಿತ್ರಗಳನ್ನು ನೋಡಲು ಚಿತ್ರಮಂದಿರಕ್ಕೇ ಹೋಗುವುದಿಲ್ಲ. ಆದರೆ ಈ ಚಿತ್ರವನ್ನು ಶಿವಣ್ಣನಿಗಾಗಿ ಪ್ರಥಮ ದಿನ ಪ್ರಥಮ ಪ್ರದರ್ಶನ ನೋಡಬೇಕು ಎಂದಿದ್ದೇನೆ ಎಂದರು.

ನಿರ್ದೇಶಕ ನರಸಿಂಹ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇರಿಸಿರುವುದಾಗಿ ತಿಳಿಸಿದರು. ನಿರ್ಮಾಪಕ ತರುಣ್ ಶಿವಪ್ಪ ಮಾತನಾಡಿ, ಚಿತ್ರಕ್ಕೆ ಯುಎ ಸರ್ಟಿಫಿಕೆಟ್ ದೊರಕಿದೆ. ಇದು ನನ್ನ ನಿರ್ಮಾಣದ ಎರಡನೇ ಚಿತ್ರ. ಶಿವಣ್ಣನ ಅಭಿಮಾನಿಯಾಗಿ ನನಗೆ ಅವರನ್ನು ತೆರೆಯ ಮೇಲೆ ಹೇಗೆ ನೋಡಬೇಕು ಅನ್ಸುತ್ತೋ ಅದೇ ರೀತಿ ತೋರಿಸಿರುವಂಥ ಚಿತ್ರ. ಜಾಕ್ ಮಂಜು ಮೂಲಕ ವಿತರಣೆಗೂ ನಾವೇ ಮುಂದಾಗಿದ್ದೇವೆ. ನಮ್ಮದೇ ಸಂಸ್ಥೆ ಮಂತರ್ ಮ್ಯೂಸಿಕ್ ಮೂಲಕ ಈಗಾಗಲೇ ಹಾಡುಗಳ ಬಿಡುಗಡೆ ಮಾಡಿದ್ದೇವೆ. ನಾಲ್ಕು ಜನ‌ ಫೈಟ್ ಮಾಸ್ಟರ್ ಗಳು ಆಕರ್ಷಕ ಸಾಹಸ ಸಂಯೋಜನೆ ಮಾಡಿಕೊಟ್ಟಿದ್ದಾರೆ ಎಂದರು.

ಸಂಗೀತ ನಿರ್ದೇಶಕ ಅಹೀರ್ ವೀರ್ ಸಮರ್ಥ್ ಮಾತನಾಡಿ, "ಈಗಾಗಲೇ ಹಾಡುಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿ ಬರುತ್ತಿರುವುದು ಖುಷಿ ನೀಡಿದೆ" ಎಂದರು. ಅಗಲಿದ ಯುವ ನಟ ಧ್ರುವ ಅವರ ಆತ್ಮಕ್ಕೆ ಶಾಂತಿ ಕೋರಿ ಕಾರ್ಯಕ್ರಮದ ಆರಂಭದಲ್ಲಿ ಮೌನಾಚರಣೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News