ಐಜಿಐಎಂಎಸ್‌ನ ವೈವಾಹಿಕ ಸ್ಥಿತಿಗತಿ ಘೋಷಣೆಯ ವಿಲಕ್ಷಣ ಫಾರ್ಮ್
ಹೊಸದಿಲ್ಲಿ,ಆ.2: ಪಾಟ್ನಾದಲ್ಲಿರುವ ಇಂದಿರಾ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಐಜಿಐಎಂಎಸ್)ಯು ತನ್ನ ಉದ್ಯೋಗಿಗಳು ಭರ್ತಿ ಮಾಡಲು ವಿಲಕ್ಷಣ ನಮೂನೆಯೊಂದನ್ನು ಹೊರತರುವ ಮೂಲಕ ವಿವಾದವೊಂದನ್ನು ಸೃಷ್ಟಿಸಿದೆ. ವೈವಾಹಿಕ ಸ್ಥಿತಿಗತಿಯನ್ನು ನಮೂದಿಸಬೇಕಾದ ಈ ಫಾರ್ಮ್‌ನಲ್ಲಿ ತಮ್ಮ ಕನ್ಯತ್ವ ಮತ್ತು ಪತ್ನಿಯರ ಸಂಖ್ಯೆಯನ್ನೂ ಘೋಷಿಸುವಂತೆ ಉದ್ಯೋಗಿಗಳಿಗೆ ಸೂಚಿಸಲಾಗಿದೆ!
ನೀವು ವಿಧುರರೇ ಅಥವಾ ಅವಿವಾಹಿತರೇ ಎಂಬ ಪ್ರಶ್ನೆಯನ್ನೂ ಉದ್ಯೋಗಿಗಳಿಗೆ ಕೇಳಲಾಗಿದೆ. ನೀವು ಮದುವೆಯಾಗಿರುವ ವ್ಯಕ್ತಿ ಬದುಕಿರುವ ಇನ್ನೋರ್ವ ಪತ್ನಿ ಅಥವಾ ಪತ್ನಿಯರನ್ನು ಹೊಂದಿದ್ದಾರೆಯೇ ಎಂಬ ಅಸಂಬದ್ಧ ಪ್ರಶ್ನೆಯನ್ನು ಮಹಿಳಾ ಉದ್ಯೋಗಿ ಗಳಿಗೆ ಕೇಳಲಾಗಿದೆ.
1984ರಲ್ಲಿ ಸಂಸ್ಥೆಯು ಆರಂಭಗೊಂಡಾಗಿನಿಂದ ಇದೇ ಘೋಷಣೆ ನಮೂನೆಯು ಬಳಕೆಯಲ್ಲಿದೆ. ಕೇಂದ್ರ ಸೇವಾ ನಿಯಮಾವಳಿಗಳಂತೆ ಪ್ರತಿಯೊಬ್ಬರೂ ಇದನ್ನು ತುಂಬಬೇಕಿದೆ. ಇದೇ ನಮೂನೆಯನ್ನು ದಿಲ್ಲಿಯ ಏಮ್ಸ್‌ನಲ್ಲಿಯೂ ಬಳಸಲಾಗುತ್ತಿದೆ. ಕೇಂದ್ರ ಅಥವಾ ಏಮ್ಸ್ ನಮೂನೆಯನ್ನು ಬದಲಿಸಿದರೆ ನಾವೂ ಅದನ್ನು ಅನುಸರಿಸುತ್ತೇವೆ ಎಂದು ಐಜಿಐಎಂಎಸ್‌ನ ವೈದ್ಯಕೀಯ ಉಪಾಧೀಕ್ಷಕ ಡಾ.ಮನೀಷ್ ಮಂಡಲ್ ಹೇಳಿರುವುದನ್ನು ಆಂಗ್ಲ ಮಾಧ್ಯಮವೊಂದು ಉಲ್ಲೇಖಿಸಿದೆ.
ಆದರೆ ನಮೂನೆಯಲ್ಲಿ ‘ಕನ್ಯತ್ವ’ ಶಬ್ದದ ಬಳಕೆ ಸರಿಯಲ್ಲ ಎಂದು ಒಪ್ಪಿಕೊಂಡಿರುವ ಅವರು, ಆತ/ಆಕೆ ವಿವಾಹಿತರೋ ಅವಿವಾಹಿತರೋ ಎನ್ನುವುದನ್ನು ತಿಳಿದುಕೊಳ್ಳುವುದು ನಮೂನೆಯ ವಾಸ್ತವ ಉದ್ದೇಶವಾಗಿದೆ. ಕನ್ಯತ್ವದ ಬದಲಿಗೆ ಅವಿವಾಹಿತ/ಅವಿವಾಹಿತೆ ಶಬ್ದ ಬಳಕೆಯಾಗಬೇಕಿತ್ತು ಎಂದು ತಾನು ವೈಯಕ್ತಿಕವಾಗಿ ಭಾವಿಸಿದ್ದೇನೆ. ಅದು ಸೂಕ್ತವಾ ಗಿರುತ್ತಿತ್ತು, ಆದರೆ ನಿಯಮಗಳನ್ನು ನಾವು ಪಾಲಿಸಬೇಕಾಗುತ್ತದೆ ಎಂದೂ ಪಾಂಡೆ ಹೇಳಿದ್ದಾರೆ.