ಹೊಸ ಚಿತ್ರ 'ಸೀಕ್ರೆಟ್ ಸೂಪರ್ ಸ್ಟಾರ್' ನಲ್ಲಿ ನಿಜವಾದ ಸ್ಟಾರ್ ಆಮಿರ್ ಖಾನ್ ಅಲ್ಲ !

Update: 2017-08-03 16:51 GMT

ಹೊಸದಿಲ್ಲಿ, ಆ.3: ನಟ ಆಮಿರ್ ಖಾನ್ ಹಾಗೂ ಝೈರಾ ವಾಸಿಮ್ ಮುಖ್ಯಭೂಮಿಕೆಯ ‘ಸೀಕ್ರೆಟ್ ಸೂಪರ್ ಸ್ಟಾರ್’ ಚಿತ್ರದ ಟ್ರೇಲರ್ ಆಗಸ್ಟ್ 2ರಂದು ಬಿಡುಗಡೆಯಾಗಿದ್ದು, ಆಮಿರ್ ಖಾನ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ಚಿತ್ರವನ್ನು ಅದ್ವೈತ್ ಚಂದನ್ ನಿರ್ದೇಶಿಸಿದ್ದು, ಆಮಿರ್ ಖಾನ್ ಚಿತ್ರದ ನಿರ್ಮಾಪಕರಾಗಿದ್ದಾರೆ.  

ಸದಾ ವಿಭಿನ್ನ ಚಿತ್ರಗಳಲ್ಲೇ ನಟಿಸುವ ಮಿ.ಪರ್ಫೆಕ್ಟ್ ಆಮಿರ್ ‘ಸೀಕ್ರೆಟ್ ಸೂಪರ್ ಸ್ಟಾರ್’ ನಲ್ಲಿ ಸಂಗೀತ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಈ ಚಿತ್ರದಲ್ಲಿ ನಿಜವಾದ ಸೂಪರ್ ಸ್ಟಾರ್ ಆಮಿರ್ ಖಾನ್ ಅಲ್ಲ, ಬದಲಾಗಿ ಝೈರಾ ವಾಸಿಮ್.

ಸಂಗೀತದಲ್ಲಿ ತೀವ್ರ ಆಸಕ್ತಿಯಿರುವ ವಿದ್ಯಾರ್ಥಿಯ ಪಾತ್ರದಲ್ಲಿ ನಟಿಸಿರುವ ಝೈರಾಗೆ ತಂದೆಯೇ ಅಡ್ಡಗಾಲಾಗುತ್ತಾರೆ. ಆದರೆ ತಾನು ಸಾಧಿಸಿಯೇ ತೀರಬೇಕೆನ್ನುವ ಹಠಕ್ಕೆ ಬೀಳುವ ಇಂಸು(ಝೈರಾ ವಾಸಿಮ್) ಯೂಟ್ಯೂಬ್ ಮೂಲಕ ತಮ್ಮ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸುವುದು ಹಾಗೂ ಆ ಮೂಲಕ ಯಶಸ್ವಿಯಾಗುವುದೇ ಚಿತ್ರದ ಕಥೆ ಎನ್ನುವುದನ್ನು ಟ್ರೇಲರ್ ಸಾರುತ್ತದೆ.

ಇಂಸುಳ ಪ್ರಯತ್ನಕ್ಕೆ ಪ್ರೇರಣೆಯಾಗಿ ನಿಲ್ಲುವ ಪಾತ್ರದಲ್ಲಿ ಆಮಿರ್ ನಟಿಸಿದ್ದಾರೆ. ಸ್ಟಾರ್ ಗಿರಿಯ ಬೆನ್ನು ಬೀಳದೆ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುವ ಆಮಿರ್ ಈ ಚಿತ್ರದಲ್ಲೂ ಅದೇ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಸೂಪರ್ ಸ್ಟಾರ್ ಆಮಿರ್ ಖಾನ್ ನಟನೆಯ ಚಿತ್ರದಲ್ಲಿ ನಿಜವಾದ ಸ್ಟಾರ್ ಝೈರಾ ವಾಸಿಮ್.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News