ಹಾಡುಗಳೊಂದಿಗೆ 'ಏಪ್ರಿಲ್ ನ ಹಿಮಬಿಂದು'

Update: 2017-08-04 11:25 GMT

ಹೊಸ ನಿರ್ದೇಶಕರ ತಂಡವಾದರೂ ಸಾಕಷ್ಟು ನಿರೀಕ್ಷೆ ಮೂಡಿಸುವಂಥ ಸಮಾರಂಭ ಅದಾಗಿತ್ತು. ಕಾರಣ 'ಏಪ್ರಿಲ್ ನ ಹಿಮಬಿಂದು' ಎಂಬ ವಿಭಿನ್ನ ಶೀರ್ಷಿಕೆಯ ಚಿತ್ರದ ಹಾಡುಗಳ ಧ್ವನಿಮುದ್ರಿಕೆಯ ಬಿಡುಗಡೆಯಲ್ಲಿ ಖ್ಯಾತನಾಮರ ದಂಡೇ ನೆರೆದಿತ್ತು.

ಶಿವರುದ್ರಪ್ಪ ಮತ್ತು ಜಗದೀಶ್ ಚಿತ್ರರಂಗಕ್ಕೆ ಹೊಸಬರಾದರೂ, ತಮ್ಮ ಸಿನಿಮಾ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆಯೊಂದಿಗೆ ಬಂದು 'ಶಿವ ಜಗನ್' ಹೆಸರಲ್ಲಿ ಚಿತ್ರ ನಿರ್ದೇಶಿಸಿದ್ದಾರೆ. ಇಂಥದೊಂದು ಚಿತ್ರ ಕಾರ್ಯರೂಪಕ್ಕೆ ಬರಲು, ಹಿರಿಯ ನಟ ದತ್ತಣ್ಣ ನೀಡಿದ ಸಲಹೆ, ಸಹಕಾರಗಳೇ ಪ್ರಮುಖ ಕಾರಣ ಎಂದು ಅವರು ಹೇಳಿದರು.

ಬಳಿಕ ಮಾತನಾಡಿದ ದತ್ತಣ್ಣ ಚಿತ್ರಕ್ಕೆ ಇಂಥ ಶೀರ್ಷಿಕೆಯನ್ನು ತಾವು ಡಿಕ್ಷನರಿಯಲ್ಲಿ ಹುಡುಕಿ ಪತ್ತೆ ಹಚ್ಚಿದ್ದಾಗಿ ತಿಳಿಸಿದರು. ಭರತ್ ಬಿ ಜೆ ಸಂಗೀತ ನಿರ್ದೇಶನದಲ್ಲಿ ‌ಹಾಡುಗಳಿದ್ದು, ಕವಿ ಎಚ್ ಎಸ್ ವೆಂಕಟೇಶ ಮೂರ್ತಿಯವರ ಗೀತೆಯೊಂದನ್ನು ಬಳಸಿರುವುದು ವಿಶೇಷ. ಈಗಾಗಲೇ ಜನಪ್ರಿಯವಾಗಿರುವ 'ಇಷ್ಟು ಕಾಲ ಒಟ್ಟಿಗಿದ್ದು..' ಹಾಡು ಹುಟ್ಟಿದ ಸಮಯದ ಬಗ್ಗೆ ತಿಳಿಸಿದ ಎಚ್ಚೆಸ್ವಿಯವರು, 'ಬೆಂಗಳೂರಿನಿಂದ ಹೊಳಲ್ಕೆರೆಗೆ ಹೊರಟ ಬಸ್ಸಿನಲ್ಲಿ ಕುಳಿತಿದ್ದಾಗ ಈ ಸಾಲುಗಳು ಹುಟ್ಟಿದ್ದು, ಆ ಕ್ಷಣಕ್ಕೆ ಬರೆಯಲು ಯಾವುದೇ ಕಾಗದಗಳು ಸಿಗದೇ, ಬಸ್ ಕಂಡಕ್ಟರ್ ನೀಡಿದ ಚೀಟಿಯಲ್ಲೇ ಕವನ ಪೂರ್ತಿಗೊಳಿಸಿದ್ದಾಗಿ ಹೇಳಿದರು.

ಚಿತ್ರಕ್ಕಾಗಿ ಈ ಹಾಡನ್ನು ಸಂಗೀತ ನಿರ್ದೇಶಕರೊಂದಿಗೆ ಸೇರಿ, ಸಂಗೀತಾ ಕಟ್ಟಿ ಕುಲಕರ್ಣಿ ಹಾಡಿದ್ದಾರೆ. ಚಿತ್ರದ ಶೀರ್ಷಿಕೆ ಗೀತೆಯನ್ನು ರಘು ದೀಕ್ಷಿತ್ ಹಾಡಿದ್ದು, ಅವರು ಮಾತನಾಡುತ್ತಾ, ದೊಡ್ಡ ವಿಚಾರಗಳನ್ನು ಕೂಡ ಸರಳವಾಗಿ ಹೇಳುವ ಯೋಗರಾಜ ಭಟ್ಟರ ರಚನೆ  ಇಷ್ಟವಾಯಿತೆಂದರು. ಆದರೆ ಚಿತ್ರದಲ್ಲಿ ತನ್ನ ಮೆಚ್ಚಿನ ಹಾಡು ವಿಜಯ ಪ್ರಕಾಶ್ ಕಂಠದಲ್ಲಿರುವ 'ಅವಳಿಂದ ನಾವೆಲ್ಲ' ಎಂಬ ಗೀತೆ ಎಂದು ತಿಳಿಸಿದರು. ಖುದ್ದು ವಿಜಯಪ್ರಕಾಶ್ ಕೂಡ ಅದರ ರಾಗಸಂಯೋಜನೆ ಮೆಚ್ಚಿ ಕರೆ ಮಾಡಿದ್ದರೆಂಬುದನ್ನು ನೆನಪಿಸಿಕೊಂಡ ಭರತ್ ಬಿ.ಜೆ, ಹಾಡುಗಳನ್ನು ತಮ್ಮದೇ ಮಾಲೀಕತ್ವದ 'ರಿ ಕಾರ್ಡ್' ಎಂಬ ಸಂಸ್ಥೆಯ ಮೂಲಕ ಹೊರಗೆ ತಂದಿದ್ದಾರೆ. 

ಸ್ವತಃ ನಿರ್ಮಾಪಕರು ‌ಸಹ ಆಗಿರುವ ಶಿವ ಜಗನ್ ಜೊತೆಗೆ ಚಿತ್ರದ ಕಲಾವಿದರಾದ ಸಿದ್ಲಿಂಗು ಶ್ರೀಧರ್  ಚಂದನಾ, ಸ್ಪಂದನಾ, ಶ್ವೇತಾ, ಪುಷ್ಪ ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News