×
Ad

11 ವರ್ಷದ ಬಾಲಕನ ಪ್ರಾಣಕ್ಕೆ ಕುತ್ತಾದ ರಿಯಾಲಿಟಿ ಶೋ ಸಾಹಸ

Update: 2017-08-04 17:24 IST

ಹೈದರಾಬಾದ್,ಆ.4 :  ರಿಯಾಲಿಟಿ ಶೋ ಸಾಹಸವನ್ನು ಅನುಕರಿಸಲು ಯತ್ನಿಸಿದ 11 ವರ್ಷದ  ಬಾಲಕನೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಳ್ಳಬೇಕಾದ ಘಟನೆ ತೆಲಂಗಣಾದಿಂದ ವರದಿಯಾಗಿದೆ. ಮೃತ ಬಾಲಕನನ್ನು ರಪಲ್ಲೆ ಕಾಳಿ ವಿಶ್ವನಾಥ್ ಎಂದು ಗುರುತಿಸಲಾಗಿದೆ. ಆತ ಆರನೇ ತರಗತಿ  ವಿದ್ಯಾರ್ಥಿಯಾಗಿದ್ದ.

ಮೂರು ದಿನಗಳ ಹಿಂದೆ ತಡ ರಾತ್ರಿ ಟಿವಿಯಲ್ಲಿ ರಿಯಾಲಿಟಿ ಶೋ ನೋಡುತ್ತಿದ್ದ ಬಾಲಕ ಅದಲ್ಲಿದ್ದ ಸ್ಟಂಟ್ ಒಂದನ್ನು ಅನುಸರಿಸಲು ಯತ್ನಿಸಿ ತನ್ನ ಬಾಯಿಗೆ ಸೀಮೆಎಣ್ಣೆ ಸುರಿದು ಟಿವಿಯಲ್ಲಿ ಮಾಡಿದಂತೆ ಬೆಂಕಿಯುಂಡೆ ಉಗುಳಲು ಯತ್ನಿಸಿದ್ದ. ಆದರೆ ಆತನ ಈ ದುಸ್ಸಾಹಸದಿಂದ ಆತನ ದೇಹವಿಡೀ ಸುಟ್ಟಿತ್ತು. ಆತನನ್ನು ಕೂಡಲೇ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ನಂತರ  ಹೈದರಾಬಾದ್ ಆಸ್ಪತ್ರೆಗೆ  ತುರ್ತುಚಿಕಿತ್ಸೆಗೆ ದಾಖಲಿಸಲಾಯಿತಾದರೂ ಆತ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತಪಟ್ಟ.

ಕಲಿಕೆಯಲ್ಲಿ ಮುಂದಿದ್ದ ಬಾಲಕ ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದ್ದು ರಜಾದಿನ ಕಳೆಯಲು ಅಜ್ಜಿ  ಮನೆಗೆ ಬಂದಿದ್ದಾಗ ಈ ದುರ್ಘಟನೆ ನಡೆದಿದೆ. ಟಿವಿ ಸ್ಟಂಟ್ ಗಳನ್ನು ನೋಡಿ ಅದನ್ನು ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಆತ ಅನುಕರಿಸುತ್ತಿದ್ದ.

ನಾಲ್ಕು ತಿಂಗಳ ಹಿಂದೆ ಕರೀಂನಗರದಲ್ಲಿ ನಡೆದ ಇಂತಹುದೇ ಘಟನೆಯಲ್ಲಿ ಆರನೇ ತರಗತಿಯ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News