"ದೇಶದ ಹೆಸರನ್ನೂ ಬದಲಾಯಿಸಿಬಿಡಿ" : ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದ ವಿಪಕ್ಷಗಳು

Update: 2017-08-04 12:05 GMT

ಹೊಸದಿಲ್ಲಿ,ಆ.4 :  ಉತ್ತರ ಪ್ರದೇಶದ ಐತಿಹಾಸಿಕ ಹಾಗೂ ದೇಶದ ಅತ್ಯಂತ ಹಳೆಯ ರೈಲು ನಿಲ್ದಾಣಗಳಲ್ಲೊಂದಾದ ಮುಘಲ್ ಸರೈ ರೈಲ್ವೆ ನಿಲ್ದಾಣಕ್ಕೆ ಬಿಜೆಪಿ ನೇತಾರ ದೀನ್ ದಯಾಳ್ ಉಪಾಧ್ಯಾಯ ಅವರ ಹೆಸರನ್ನಿಡಲು ನಡೆಯುತ್ತಿರುವ ಪ್ರಯತ್ನಗಳನ್ನು ವಿಪಕ್ಷಗಳು ಟೀಕಿಸಿದ್ದು ದೇಶದ ನಕ್ಷೆಯನ್ನೇ ಬದಲಾಯಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿವೆ.

ಈ ರೈಲು ನಿಲ್ದಾಣಕ್ಕೆ ಉಪಾಧ್ಯಾಯ ಅವರ ಹೆಸರನ್ನಿಡಲು   ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಡಿದ ಮನವಿಗೆ ಕೇಂದ್ರ ಸರಕಾರ ಇತ್ತೀಚೆಗೆ ಒಪ್ಪಿತ್ತು. ಆದರೆ ಈ ವಿಚಾರದಲ್ಲಿ ಸರಕಾರ ರಾಜ್ಯಸಭೆಯಲ್ಲಿ ತೀವ್ರ ಆಕ್ಷೇಪ ಎದುರಿಸುವಂತಾಗಿದೆ.  ಸಮಾಜವಾದಿ ಪಕ್ಷದ ಸದಸ್ಯ ನರೇಶ್ ಅಗ್ರವಾಲ್ ರೈಲು ನಿಲ್ದಾಣದ ಮರುನಾಮಕರಣ ಮಾಡುವುದನ್ನು ಬಲವಾಗಿ ವಿರೋಧಿಸಿದರು. ``ಸರಕಾರ ಉತ್ತರ ಪ್ರದೇಶದ ನಕ್ಷೆಯನ್ನೂ ಬದಲಾಯಿಸಲು ಹೊರಟಿದೆ. ಈ ನಿಲ್ದಾಣ ಬಹಳ ಪ್ರಾಚೀನ ನಿಲ್ದಾಣವಾಗಿದೆ. ಮುಂದೆ ಅವರು ನವದಿಲ್ಲಿಯ ಹೆಸರನ್ನೂ ಬದಲಾಯಿಸುತ್ತಾರೆ,'' ಎಂದು ಆಕ್ರೋಶದಿಂದ ನುಡಿದರು.

ಸಮಾಜವಾದಿ ಪಕ್ಷದ ಸದಸ್ಯರು ಸದನದ ಮಧ್ಯಭಾಗಕ್ಕೆ ಬಂದು ಘೋಷಣೆಗಳನ್ನು ಕೂಗಿದ ಪರಿಣಾಮ  ಅಧಿವೇಶನವನ್ನು ಮುಂದೂಡಬೇಕಾಯಿತು. ಮಾಯಾವತಿ ಅವರ ಬಿಎಸ್‍ಪಿ ಕೂಡ ಈ ನಿಲ್ದಾಣದ ಹೆಸರು ಬದಲಾವಣೆಗೆ ಅಸಮ್ಮತಿ ಸೂಚಿಸಿತು.

ಈಸ್ಟ್ ಇಂಡಿಯಾ ಕಂಪೆನಿ ಹೌರಾದಿಂದ ದಿಲ್ಲಿಗೆ ರೈಲು ಸಂಪರ್ಕ ಒದಗಿಸಿದ ಸಂದರ್ಭ ಮುಘಲ್ ಸರೈ ರೈಲು ನಿಲ್ದಾಣ 1862ರಲ್ಲಿ ಸ್ಥಾಪಿಸಲ್ಪಟ್ಟಿತ್ತು.

ವಿಪಕ್ಷಗಳ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ``ಅವರಿಗೆ ಮುಘಲರ ಹೆಸರಿನ ನಿಲ್ದಾಣಗಳು ಬೇಕು ಆದರೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಹೆಸರಿನ ನಿಲ್ದಾಣವಲ್ಲ,'' ಎಂದರು. ಮುಂಬೈಯ ಖ್ಯಾತ ವಿಕ್ಟೋರಿಯಾ ಟರ್ಮಿನಸ್ ನಿಲ್ದಾಣದ ಹೆಸರನ್ನೂ ಛತ್ರಪತಿ ಶಿವಾಜಿ ಟರ್ಮಿನಲ್ ಎಂದು ಬದಲಾಯಿಸಲಾಗಿರುವುದನ್ನು ಅವರು ನೆನಪಿಸಿದರು.

ಇದರಿಂದ ಸಿಟ್ಟುಗೊಂಡ ವಿಪಕ್ಷ ಸದಸ್ಯರು ``ಹಾಗಾದರೆ ದೇಶದ ಹೆಸರನ್ನೇ ಬದಲಾಯಿಸಿ ಬಿಡಿ. ದೇಶಕ್ಕೆ ಅವರ (ಉಪಾಧ್ಯಾಯ) ಕೊಡುಗೆಯೇನು ?'' ಎಂದು ಪ್ರಶ್ನಿಸಿದರು.

ಇದಕ್ಕೆ ತಿರುಗೇಟು ನೀಡಿದ ನಖ್ವಿ ``ಇತಿಹಾಸ ಓದಿ'' ಎಂದು ಹೇಳಿದರಲ್ಲದೆ ದೀನ್ ದಯಾಳ್ ಉಪಾದ್ಯಾಯರನ್ನು  ಮಹೋನ್ನತ ಚಿಂತಕ ಎಂದು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News